ಮೋದಿ ಜನಪ್ರಿಯತೆ ಕಾಪಾಡಿಕೊಳ್ಳುವ ಫಾರ್ಮುಲಾ ಇದು!

By Web DeskFirst Published Jun 12, 2019, 9:45 AM IST
Highlights

ಮೋದಿ ಮತ್ತು ಶಾ ವರ್ಕಿಂಗ್‌ ಸ್ಟೈಲ್ ವಿಭಿನ್ನ | ಯಾರಿಗೂ ಮಣೆ ಹಾಕುವವರಲ್ಲ | ರಾಜನಾಥ್ ಸಿಂಗ್ ವಿಚಾರದಲ್ಲಿ ನಿರ್ಧಾರ ಬದಲಿಸಿದ ಮೋದಿ-ಶಾ ಜೋಡಿ 

2013 ರ ಕೊನೆಯಲ್ಲಿ ಮೋದಿ ದಿಲ್ಲಿ ರಾಜಕೀಯಕ್ಕೆ ಬಂದ ನಂತರ ಯಾವುದೋ ನಿರ್ಣಯ ತೆಗೆದುಕೊಂಡ ಮೇಲೆ, ಯಾರೋ ಬೇಸರಗೊಂಡರೆಂದು ಅವರನ್ನು ಮನವೊಲಿಸಿ ರಮಿಸಿದ ಘಟನೆ ನಡೆದಿಲ್ಲ. ಮೋದಿ ಮತ್ತು ಶಾ ವರ್ಕಿಂಗ್‌ ಸ್ಟೈಲಲ್ಲಿ ಇಂಥವಕ್ಕೆಲ್ಲ ಜಾಗವೂ ಇಲ್ಲ.

ಆದರೆ ಕಳೆದ ವಾರ ಮಾತ್ರ ಬಹುತೇಕ ಸಂಪುಟ ಉಪ ಸಮಿತಿಗಳಿಂದ ತಮ್ಮನ್ನು ದೂರವಿಟ್ಟು ಅಮಿತ್‌ ಶಾ ನಂಬರ್‌-2 ಎಂದು ಮೋದಿ ಹೇಳಲು ಹೊರಟಾಗ ಮಾತ್ರ, 5 ವರ್ಷ ಸುಮ್ಮನಿದ್ದ ರಾಜನಾಥ್‌ ನೇರವಾಗಿ ಪ್ರಧಾನಿ ಮತ್ತು ಸಂಘದ ಸರ ಕಾರ್ಯವಾಹಕರ ಎದುರು ಬೇಸರ ಹೊರ ಹಾಕಿದರು.

‘ಇಷ್ಟೊಂದು ಕೆಟ್ಟದಾಗಿ ನಡೆಸಿಕೊಳ್ಳಲು ತೀರ್ಮಾನ ಆಗಿದ್ದರೆ ನಾನು ಪಕ್ಷದ ಕೆಲಸ ಮಾಡುತ್ತೇನೆ’ ಎಂದು ರಾಜನಾಥ್‌ ಹೇಳಿದಾಕ್ಷಣ, ಯಾವತ್ತೂ ನಿರ್ಧಾರ ಬದಲಾವಣೆ ಮಾಡದ ಮೋದಿ ಸಾಹೇಬರು, ತರಾತುರಿಯಲ್ಲಿ ಸಂಘ ಮತ್ತು ರಾಜನಾಥ್‌ ಜೊತೆಗೆ ಪ್ರತ್ಯೇಕವಾಗಿ ಮಾತನಾಡಿದರು. ಕೊನೆಗೆ ಸಂಜೆ ಅಮಿತ್‌ ಶಾರನ್ನು ರಾಜನಾಥ್‌ ಮನೆಗೆ ಕಳುಹಿಸಿ, ರಾತ್ರಿ 10 ಗಂಟೆಗೆ ಹೊಸ ಸಂಪುಟ ಉಪಸಮಿತಿ ಘೋಷಿಸಿ 6ರಲ್ಲಿ ರಾಜನಾಥ್‌ ಹೆಸರು ಪ್ರಧಾನಿ ನಂತರ ಇರುವಂತೆ ಘೋಷಿಸಿದರು.

ರಾಜನಾಥ್‌ ಸಿಂಗ್‌, ಮೋದಿ ಎದುರು ಜನಪ್ರಿಯತೆಯಲ್ಲಿ ಏನೂ ಅಲ್ಲದಿದ್ದರೂ, ಹೊಸದಾಗಿ ಸರ್ಕಾರ ರಚಿಸಿರುವ ಪ್ರಧಾನಿಗೆ ಆರಂಭದಲ್ಲೇ ವಿಘ್ನ ಬೇಡ ಎಂದೆನಿಸಿತ್ತು. ಹೀಗಾಗಿ ತಾವು ಯಾರನ್ನೋ ಬೇಕೆಂದು ಗೋಳು ಹೊಯ್ದುಕೊಂಡು ಅವರು ಪಕ್ಷದಲ್ಲಿ ಸಂಘದಲ್ಲಿ ವಿವಾದ ಸೃಷ್ಟಿಸುವುದು ಬೇಕಿಲ್ಲ. ಸಂಘಟನೆ ಒಳಗಡೆ ಅಸಮಾಧಾನ ಇದ್ದರೂ ಹೊರಗಡೆ ಯಾವುದೇ ಸಂದೇಶ ಹೋಗುವುದು ಮೋದಿ ಅವರಿಗೆ ಇಷ್ಟವಿಲ್ಲ. ಅವರ ಜನಪ್ರಿಯತೆ ಕಾಪಾಡಿಕೊಳ್ಳುವ ಫಾರ್ಮುಲಾ ಕೂಡ ಅದೇ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿಕ್ಲಿಕ್ ಮಾಡಿ 

click me!