ಮುಂದಿನ ವರ್ಷದಿಂದ ಕುವೆಂಪು ವಿವಿಯಲ್ಲಿ ಹೊಸ ಕೋರ್ಸ್’ಗಳ ಆರಂಭ

By Suvarna Web DeskFirst Published Dec 12, 2017, 7:34 PM IST
Highlights

ಕುವೆಂಪು ವಿಶ್ವವಿದ್ಯಾಲಯ ಮುಂದಿನ ಶೈಕ್ಷಣಿಕ ವರ್ಷದಿಂದ ನಾಟಕ, ನೃತ್ಯ ಹಾಗೂ ಸಂಗೀತ ಡಿಪ್ಲೋಮಾ ತರಗತಿಗಳನ್ನು ಆರಂಭಿಸಲು ನಿರ್ಧರಿಸಿದೆ. ಈಗಾಗಲೇ ನೂತನವಾಗಿ ನಿರ್ಮಾಣವಾಗಿರುವ ಸಭಾಂಗಣವನ್ನು ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸಲು ಸಿದ್ಧತೆಯಾಗಿದೆ.

ಶಿವಮೊಗ್ಗ (ಡಿ.12): ಕುವೆಂಪು ವಿಶ್ವವಿದ್ಯಾಲಯ ಮುಂದಿನ ಶೈಕ್ಷಣಿಕ ವರ್ಷದಿಂದ ನಾಟಕ, ನೃತ್ಯ ಹಾಗೂ ಸಂಗೀತ ಡಿಪ್ಲೋಮಾ ತರಗತಿಗಳನ್ನು ಆರಂಭಿಸಲು ನಿರ್ಧರಿಸಿದೆ. ಈಗಾಗಲೇ ನೂತನವಾಗಿ ನಿರ್ಮಾಣವಾಗಿರುವ ಸಭಾಂಗಣವನ್ನು ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸಲು ಸಿದ್ಧತೆಯಾಗಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಭಾಂಗಣ ಕಟ್ಟಡ ಕಾಮಗಾರಿ ಪದೇಪದೇ ವಿನ್ಯಾಸದಲ್ಲಿ ಬದಲಾವಣೆಗೊಳ್ಳುತ್ತಾ ಅಪೂರ್ಣವಾಗಿ ಉಳಿದಿತ್ತು. ಕುಲಪತಿ ಪ್ರೊ. ಜೋಗನ್ ಶಂಕರ್ 2017ರ ಘಟಿಕೋತ್ಸವ ಕಾರ್ಯಕ್ರಮದೊಳಗೇ ಈ ಕಟ್ಟಡ ಬಳಕೆಯಾಗಬೇಕೆಂಬ ಉದ್ದೇಶದಿಂದ ಯೋಜನೆ ರೂಪಿಸಿ ಇದೇ ತಿಂಗಳು ಇದೇ ಕಟ್ಟಡದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟರು.

ಬಾಲ್ಕಾನಿಯನ್ನೂ ಹೊಂದಿರುವ ಬೃಹತ್ ಸಭಾಂಗಣವಿದು. ವೇದಿಕೆ ಸಹ ವಿಶಾಲವಾಗಿದೆ. ಈ ಕಟ್ಟಡ ಕಾಮಗಾರಿ ಹಿಂದೆ ಪ್ರೊ. ಶೇರಿಗಾರ್ ಕುಲಪತಿಯಾಗಿದ್ದಾಗ ಆರಂಭವಾಗಿತ್ತು. ಆದರೆ ಕಟ್ಟಡಕ್ಕೆ ಹೊಸ ಸೇರ್ಪಡೆಯಾಗುತ್ತಾ, ವಿನ್ಯಾಸ ಬದಲಾಗುತ್ತಾ ಕಾಮಗಾರಿ ಕುಂಠಿತವಾಗಿತ್ತು. ಮತ್ತೆ ಕಾಮಗಾರಿ ಆರಂಭಿಸುವ ಮುನ್ನ ಕುಲಪತಿ ಪ್ರೊ. ಜೋಗನ್ ಶಂಕರ್ ಈ ಕುರಿತು ತಜ್ಞರ ಅಭಿಪ್ರಾಯ ಪಡೆದರು. ಮುಂದಿನ 6 ತಿಂಗಳಲ್ಲಿ ಕಾಮಗಾರಿ ಆರಂಭಿಸದಿದ್ದರೆ ಈ ಕಟ್ಟಡ ಶಾಶ್ವತವಾಗಿ ವ್ಯರ್ಥವಾಗುತ್ತದೆ ಎಂಬ ಅಭಿಪ್ರಾಯ ಬಂದ ನಂತರ ಸೂಕ್ತ ಅನುದಾನ ಒಟ್ಟುಗೂಡಿಸಿ ಕಾಮಗಾರಿ ಪುನಾರಂಭಿಸಿದರು. ಈ ವರ್ಷದ ಘಟಿಕೋತ್ಸವ ಕಾರ್ಯಕ್ರಮ ಇದೇ ಸಭಾಂಗಣದಲ್ಲಿ ಮಾಡಬೇಕೆಂಬ ಗುರಿ ಹೊಂದಿದ್ದ ಅವರು ಕಳೆದ ವಾರ ಸಭಾಂಗಣದಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು. ಈಗ ಈ ಕಟ್ಟಡ ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸುವ ಬಗ್ಗೆಯೂ ಅವರು ಯೋಜನೆ ರೂಪಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗುವ ನಾಟಕ, ಸಂಗೀತ, ನೃತ್ಯ ಡಿಪ್ಲೋಮಾ ತರಗತಿಗಳು ಇದೇ ಕಟ್ಟಡದಲ್ಲಿ ನಡೆಯಲಿವೆ. ಈ ಕಟ್ಟಡವು 100 ಆಸನಗಳ ಇನ್ನೊಂದು ಪುಟ್ಟ ಸಭಾಂಗಣವನ್ನೂ ಸಹ ಹೊಂದಿದೆ.

ಅಂಬೇಡ್ಕರ್ ಸಂಗ್ರಹಾಲಯ: ಇದೇ ಕಟ್ಟಡದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠವು ಅಂಬೇಡ್ಕರ್ ಮ್ಯೂಸಿಯಂ ಸಹ ಆರಂಭಿಸಲಿದೆ. ಈ ಸಂಗ್ರಹಾಲಯದಲ್ಲಿ ಅಂಬೇಡ್ಕರ್ ಅವರ ಜೀವನ, ಸಾಧನೆ ಕುರಿತ ಛಾಯಾಚಿತ್ರಗಳು, ವಸ್ತುಗಳು ಇರಲಿವೆ. `ಇದನ್ನು ವಿಶೇಷ ಸಂಗ್ರಹಾಲಯವನ್ನಾಗಿ ರೂಪಿಸಲಾಗುವುದು' ಎಂದು ಪೀಠದ ನಿರ್ದೇಶಕ ಡಾ. ಜಗನ್ನಾಥ್ ಡಾಂಗೆ ಅವರು ಹೇಳುತ್ತಾರೆ.

 ಕುಲಪತಿಗಳು ಹೇಳುವುದೇನು? : ನೂತನ ಸಭಾಂಗಣದ ಸಿವಿಲ್ ಕಾಮಗಾರಿ ಮುಗಿದಿದೆ. ವಿದ್ಯುದೀಕರಣವೂ ಆಗಿದೆ. ಧ್ವನಿ, ಬೆಳಕು ವ್ಯವಸ್ಥೆ ಆಗಬೇಕಾಗಿದೆ. ಈಗಾಗದಲೇ ತಜ್ಞರ ಅಭಿಪ್ರಾಯ ಪಡೆದಿದ್ದೇವೆ.  ಹಂತಹಂತವಾಗಿ ಪೂರ್ಣಗೊಳಿಸುತ್ತೇವೆ ಎಂದು ಕುಲಪತಿ ಪ್ರೊ. ಜೋಗನ್ ಶಂಕರ್ ಅವರು `ಕನ್ನಡಪ್ರಭ'ಕ್ಕೆ ಹೇಳಿದರು.

ಹೊನ್ನಾಳಿ ಚಂದ್ರಶೇಖರ್

click me!