ಜೆಡಿಎಸ್‌ನಲ್ಲಿ ಇದ್ದಿದ್ರೆ ಸಿಎಂ ಆಯ್ತಿರ್ಲಿಲ್ಲಾ : 2018ರಲ್ಲೂ ನಾನೇ ಬಜೆಟ್ ಮಂಡಿಸೋದು

By Suvarna Web DeskFirst Published Nov 24, 2016, 6:02 PM IST
Highlights

‘ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡ್ತೇವೆ. ಮತ್ತೊಂದು ಬಜೆಟ್ 2018ರಲ್ಲೂ ಮಾಡುತ್ತೇವೆ. ಬಹಳ ವರ್ಷ ಕೂತು ನಿನಗೆ ಕನ್‌ಫ್ಯೂಸ್ ಆಗಿದೆ. ಅದಕ್ಕೇ ಹೆಚ್ಚು ವರ್ಷ ಕೂತ್ಕೋಬಾರದು. ಧರಂಸಿಂಗ್ ಸಂಪುಟದಲ್ಲಿ ಹಣಕಾಸು ಸಚಿವನಾಗಿದ್ದಾಗ ಕೆಲವೊಂದು ಶ್ರೇಣಿ ರದ್ಧತಿಗೆ ಶಿಫಾರಸು ಮಾಡಿದ್ದೆ. ಆಗ ನಮ್ಮ ಸರ್ಕಾರ ಅರೇಂಜ್ಡ್ ಅಲ್ಲ. ನಾನು ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿದ್ದೆ.

ಸುವರ್ಣವಿಧಾನಸೌಧ(ನ.24): ಬಿಸಿಯೇರಿದ ಚರ್ಚೆ ಮಧ್ಯೆಯೂ ರೈತರ ಸಾಲ ಮನ್ನಾ ಮತ್ತು ಸಿಎಂ ಕುರ್ಚಿ ಬಗ್ಗೆ ಗುರುವಾರ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆದು ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿತು.

ಸಾಲ ಮನ್ನಾ ಪ್ರಸ್ತಾಪಿಸಿದ ಜೆಡಿಎಸ್ ಶಾಸಕ ವೈ.ಎಸ್.ವಿ ದತ್ತಾ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ, ‘‘ನೀವು ನಮ್ಮೊಂದಿಗೆ ಇದ್ದಾಗ ರೈತರ ಬಗ್ಗೆ, ಬಡವರ ಬಗ್ಗೆ ಅನುಕಂಪ, ಕಳಕಳಿ ಹೊಂದಿದ್ರಿ. ಆ ನಿಮ್ಮ ಕಳಕಳಿಯೇ ಎತ್ತರದ ನಾಯಕನನ್ನಾಗಿ ಬಿಂಬಿಸಿದೆ. ಈಗಲೂ ನಮ್ಮೊಂದಿಗಿದ್ರೆ ಈ ನಾಡಿನ ಜನತೆಯ ಕಣ್ಣೀರು ಒರೆಸುತ್ತಿದ್ರಿ. ಅವರೇ ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತಿದ್ದರು’ ಎಂದು ಕಿಚಾಯಿಸಿದರು.

ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘‘ಈಗಲೂ ನಾನು ಬಡವರು, ಕೃಷಿಕರ ಬಗ್ಗೆ ಅನುಕಂಪ ಹೊಂದಿದ್ದೇನೆ. ಮುಖ್ಯಮಂತ್ರಿಯಾಗಿ ಅವರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ, ನಾನೇನಾದ್ರೂ ಇನ್ನೂ ಜೆಡಿಎಸ್‌ನಲ್ಲಿ ಇದ್ದಿದ್ರೆ ಸಿಎಂ ಆಯ್ತಿರ್ಲಿಲ್ಲಾ’’ ಎಂದು ತಿರುಗೇಟು ನೀಡಿದರು.

ಪಟ್ಟು ಬಿಡದ ದತ್ತಾ ‘‘ನಮ್ಮ ನಾಯಕ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದರು. ಮತ್ತೆ ತಮಗೆ ಅಧಿಕಾರ ನೀಡಿದರೆ ರೈತರ ಎಲ್ಲಾ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಜನತೆ ಆಶೀರ್ವಾದ ಬೇಡಲು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ, ನಾವೇ ಸಾಲ ಮನ್ನಾ ಮಾಡುತ್ತೇವೆ. ಕಾಂಗ್ರೆಸ್ಸಿನಿಂದ ಇದು ಸಾಧ್ಯವಿಲ್ಲ’ ಎಂದು ಲೇವಡಿ ಮಾಡಿದರು.

ಇದರಿಂದ ಕೆರಳಿದ ಸಿಎಂ ‘ನೀವು ರೈತರ ಸಾಲ ಮನ್ನಾ ಮಾಡಿದ್ದಾಗಿ ಘೋಷಿಸಿದಿರಿ. ಹಣವನ್ನೇ ಬಿಡುಗಡೆ ಮಾಡಿರಲಿಲ್ಲ. ನಾನು ಅಧಿಕಾರಕ್ಕೆ ಬಂದ ಬಳಿಕ ₹260 ಕೋಟಿ ಕೊಟ್ಟೆ. ನಿಮ್ಮ ಕಾಳಜಿ ಜನತೆಗೆ ಗೊತ್ತಾಗಿದೆ. ನೀವು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ರೂ ಅಷ್ಟೇ, ಕಲಬುರಗಿಯಲ್ಲಿ ಮಾಡಿದ್ರೂ ಅಷ್ಟೆ. ಬಿಜೆಪಿಯವ್ರ ಕಥೆ ಇನ್ನೂ ಗಂಭೀರವಾಗಿದೆ’ ಎಂದು ಮಾತಿನ ಚಾಟಿ ನೀಡಿದರು.

ನಿಮಗೆ ಇಲ್ಲಿ ಬರೋಕೆ ಆಗಲ್ಲ; ಬಿಜೆಪಿ-ಜೆಡಿಎಸ್‌ಗೆ ಸಿಎಂ ಟಾಂಗ್

ವಿಧಾನ ಪರಿಷತ್: ಮುಂದಿನ ಸರ್ಕಾರ ಯಾರದ್ದು ಎನ್ನುವ ಕುರಿತು ಮೇಲ್ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ, ಜೆಡಿಎಸ್ ಸದಸ್ಯರ ನಡುವೆ ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾಯಿತು. ಕೊನೆಗೆ ಸಿಎಂ, ಮುಂದಿನ ಬಜೆಟ್ ಮಂಡಿಸೋದು ನಾನೇ ಎಂದು ಹೇಳಿ ಪ್ರತಿಪಕ್ಷಗಳನ್ನು ಮಾತಿನಲ್ಲೇ ತಿವಿದರು.

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ವಿಚಾರದಲ್ಲಿ ಪ್ರಶ್ನೋತ್ತರ ವೇಳೆ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರು ವೇತನ ಸಮಿತಿ ಎಲೆಕ್ಷನ್ ಬಂದಾಗ ಮಾಡಬೇಡಿ ಮೊದಲೇ ಮಾಡಿ ಎಂದಾಗ ಸಿಎಂ ಈ ಮಾತಿನೇಟು ನೀಡಿದರು.

ವೇತನ ಸಮಿತಿಯನ್ನು ‘ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡ್ತೇವೆ. ಮತ್ತೊಂದು ಬಜೆಟ್ 2018ರಲ್ಲೂ ಮಾಡುತ್ತೇವೆ. ಬಹಳ ವರ್ಷ ಕೂತು ನಿನಗೆ ಕನ್‌ಫ್ಯೂಸ್ ಆಗಿದೆ. ಅದಕ್ಕೇ ಹೆಚ್ಚು ವರ್ಷ ಕೂತ್ಕೋಬಾರದು. ಧರಂಸಿಂಗ್ ಸಂಪುಟದಲ್ಲಿ ಹಣಕಾಸು ಸಚಿವನಾಗಿದ್ದಾಗ ಕೆಲವೊಂದು ಶ್ರೇಣಿ ರದ್ಧತಿಗೆ ಶಿಫಾರಸು ಮಾಡಿದ್ದೆ. ಆಗ ನಮ್ಮ ಸರ್ಕಾರ ಅರೇಂಜ್ಡ್ ಅಲ್ಲ. ನಾನು ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿದ್ದೆ. ಅದು 20:20 ಆಗಿರಲಿಲ್ಲ. 20 ಮಾತ್ರ ಮುಗೀತು. ಮತ್ತೊಂದು 20 ಆಗಲಿಲ್ಲ. ಈಶ್ವರಪ್ಪ...ಯಡಿಯೂರಪ್ಪ ಎಷ್ಟು ದಿನ ಸಿಎಂ ಆಗಿದ್ದರು?’ ಎಂದಾಗ ಜೆಡಿಎಸ್‌ನ ಸಂದೇಶ್ ನಾಗರಾಜ್, ‘20:20 ಪೂರ್ಣ ಆಗಿದ್ದರೆ ನಾವು ಅಲ್ಲಿರುತ್ತಿದ್ದೆವು’ ಎಂದಾಗ, ಸಿಎಂ, ‘ನೀವು ಇಲ್ಲಿ ಬರಕ್ಕಾಗಲ್ಲ...ಸುಮ್ನಿರು’ ಎಂದರು. ಆಗ ಬಿಜೆಪಿಯ ಕೆ.ಬಿ.ಶಾಣಪ್ಪ ‘ನಮಗೆ ಚಾನ್ಸ್ ಇದೆಯಾ?’ ಎಂದರು. ಇದಕ್ಕೆ ಸಿಎಂ, ‘ನೀವೂ ಬರಲ್ಲ. ಮುಂದಿನ ೫ ವರ್ಷ ನಾವೇ ಬರೋದು. ಸರ್ಕಾರಿ ನೌಕರರಿಗೆ ರಕ್ಷಣೆ ಕೊಡುವುದು ನಾವೇ’ ಎಂದು ಹೇಳಿ ಪ್ರತಿಪಕ್ಷಗಳ ಕಾಲೆಳೆದರು.

ಇದರಿಂದ ಕುಪಿತಗೊಂಡಂತೆ ಕಂಡ ಕೆ.ಎಸ್. ಈಶ್ವರಪ್ಪ, ‘ಎಲ್ಲ ರಾಜಕಾರಣಿಗಳಿಗೂ ಕನಸು ಇರಬೇಕು. ಸಿಎಂರದ್ದು ತಿರುಕನ ಕನಸು. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಇದೇ ರೀತಿ ಕನಸು ಕಂಡು ನೆಲಕಚ್ಚಿತು’ ಎಂದು ತಿವಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ‘ಜನ ತೀರ್ಮಾನ ಮಾಡ್ತಾರೆ. ಡೋಂಟ್ ಗೋ ಬೈ ಈಶ್ವರಪ್ಪ ವರ್ಡ್ಸ್. ಶಾಣಪ್ಪ, ನಿನ್ನದು ನನ್ನದು ಎಲ್ಲ ಒಂದೇ ಥಿಂಕಿಂಗ್, ಇಬ್ಬರದ್ದೂ ಲೆಫ್ಟ್ ಥಿಂಕಿಂಗ್...ನೀವು ರೈಟ್ ಥಿಂಕಿಂಗ್‌ನವರ ಜತೆ ಇದ್ದೀರಾ. ಈಶ್ವರಪ್ಪ ಕೆಟಗರಿಗೆ ಸೇರಬೇಡಿ. ಯಡಿಯೂರಪ್ಪ, ಈಶ್ವರಪ್ಪ, ಶೆಟ್ಟರ್ ಎಲ್ಲ ಒಂದೇ ಕೆಟಗರಿ. ಪುಟ್ಟಣ್ಣ, ಹೊರಟ್ಟಿ, ಸೋಮಣ್ಣ ಎಲ್ಲರೂ ನಮ್ಮವರೇ...ಈಶ್ವರಪ್ಪ, ಯಡಿಯೂರಪ್ಪ ಎಲ್ಲರನ್ನೂ ಜನ ತಿರಸ್ಕಾರ ಮಾಡಿದ್ದಾರೆ. ಇರಲಿ ಜನ ತೀರ್ಮಾನ ಮಾಡ್ತಾರೆ’ ಎಂದು ಚರ್ಚೆಗೆ ತೆರೆ ಎಳೆದರು.

click me!