
ಬೆಂಗಳೂರು: 2016ಕ್ಕೆ ಗುಡ್‌ಬೈ, 2017ಕ್ಕೆ ವೆಲ್‌ಕಮ್.. ಹ್ಯಾಪಿ ನ್ಯೂ ಇಯರ್.. ಚಿಯರ್ಸ್...
ಪೂರ್ವ ನಿಯೋಜಿತವಾಗಿದ್ದ ವೇದಿಕೆಗಳಲ್ಲಿ ಪಟಾಕಿ ಸಿಡಿಸಿ, ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡ ಕ್ಷಣ ರಂಗೇರಿತ್ತು. ಶನಿವಾರ ರಾತ್ರಿ ಗಡಿಯಾರದ ಮುಳ್ಳು ರಾತ್ರಿ 11.59 ನಿಮಿಷ ತೋರುತ್ತಿದ್ದಂತೆ ಎಲ್ಲರ ಎದೆಯಲ್ಲಿ ಸಂಭ್ರಮ ಶುರುವಾಗಿತ್ತು. 12 ಗಂಟೆ ಸಮಯ ಘಟಿಸುತ್ತಲೇ ಎಲ್ಲರೂ ಒಂದೇ ಬಾರಿಗೆ ಹ್ಯಾಪಿ ನ್ಯೂ ಇಯರ್ ಎಂಬ ಉದ್ಘಾರ ಒಮ್ಮೆಗೇ ಕೂಗಿದ ಸದ್ದು ಮುಗಿಲು ಮುಟ್ಟಿತ್ತು.
ಖುಷಿ ಮೂಡ್'ನಲ್ಲಿದ್ದ ಜನ ತಮ್ಮ ಸ್ನೇಹಿತರು, ಸಂಬಂಧಿಗಳು, ನೆರೆ ಹೊರೆಯವರು, ಗುರುಗಳು, ಸಹೋದ್ಯೋಗಿಗಳಿಗೆ ಕರೆ ಮಾಡಿ ಪರಸ್ಪರ ಸಂತಸ ಹಂಚಿಕೊಂಡರು. ಹೊಸ ವರ್ಷದ ಸಂಭ್ರಮದಲ್ಲಿ ಅಲ್ಲಲ್ಲಿ ಜಮಾಯಿಸಿದ್ದ ಜನಸಾಗರ ಹರ್ಷೋದ್ಘಾರಗಳಲ್ಲಿ ಹಸ್ತಲಾಘವ ಮಾಡಿದರು. ಸಂಭ್ರಮದ ಕ್ಷಣವನ್ನು ಫೋನ್‌ಗಳಲ್ಲಿ ಸೆರೆಹಿಡಿದು ಆಪ್ತರಿಗೆ ವಾಟ್ಸ್ಯಾಪ್, ಫೇಸ್‌ಬುಕ್ ಮೂಲಕ ಸಂದೇಶ, ಶುಭಾಶಯ ಕಳುಹಿಸಿ ಸಂತಸ ಪಟ್ಟರು. 12 ಗಂಟೆ ಸಮಯಕ್ಕೆ ಬಂಧು-ಬಾಂಧವರು, ಆಪ್ತರಿಗೆ ಮೊಬೈಲ್ ಸಂದೇಶ ಕಳುಹಿಸುವುದಕ್ಕಾಗಿ ಜನ ಮುಗಿಬಿದ್ದಿದ್ದರಿಂದ ನೆಟ್‌ವರ್ಕ್ ಸಮಸ್ಯೆಯೂ ಕಾಡಿತು.
ನೂತನ ವರ್ಷದ ಸಂಭ್ರಮಕ್ಕಾಗಿಯೇ ಹೋಟೆಲ್, ಕ್ಲಬ್‌ಗಳಲ್ಲಿ ಆಕರ್ಷಕ, ಝಗಮಗಿಸುವ ದೀಪಾಲಂಕಾರ ಮಾಡಲಾಗಿತ್ತು. ಹೊಸ ವರ್ಷದ ಪಾರ್ಟಿಗಳಿಗಾಗಿಯೇ ವಿಶೇಷ ವ್ಯವಸ್ಥೆ ಕಲ್ಪಿಸಿ ವರ್ಷಾರಂಭಕ್ಕೆ ವೇದಿಕೆ ಕಲ್ಪಿಸಲಾಗಿತ್ತು. ಯುವ ಜನತೆ ಬೈಕ್‌ಗಳಲ್ಲಿ ಜಾಲಿರೈಡ್ ಮೂಲಕ ರಾತ್ರಿಯೆಲ್ಲ ನಗರದ ರಸ್ತೆಗಳಲ್ಲಿ ಸಂಚರಿಸಿ ಮುಗಿಲು ಮುಟ್ಟಿದ ಆನಂದವನ್ನು ಕಣ್ತುಂಬಿಕೊಂಡರು. ಆದರೆ ಶುಭ ಕೋರಿದ ನಾಗರಿಕರನ್ನು ಸುರಕ್ಷಿತವಾಗಿ ಮನೆ ಸೇರಿಕೊಳ್ಳಿ ಎಂಬ ಸಲಹೆ ನೀಡುವುದನ್ನು ಪೊಲೀಸರು ಮರೆಯಲಿಲ್ಲ.
ಹೊಸ ವರ್ಷವನ್ನು ಹೆಚ್ಚಿನ ಜನ ‘ಮದ್ಯ'ದ ಜತೆ ಆಚರಿಸಿದರೆ, ಮತ್ತೆ ಕೆಲವರು ಮನೆಯಲ್ಲಿಯೇ ಕೇಕ್ ಕತ್ತರಿಸುವ ಮೂಲಕ ವರ್ಷಾರಂಭದ ಕ್ಷಣವನ್ನು ಆನಂದಿಸಿದರು. ಮದ್ಯದ ನಶೆಯಲ್ಲಿ ಹುಚ್ಚೆದ್ದು ಕುಣಿದ ಯುವ ಜನತೆ ನಾನಾ ಬಗೆಯಲ್ಲಿ ಸಂಭ್ರಮಿಸಿದರು.
ನಗರದ ಪ್ರಮುಖ ರಸ್ತೆಗಳಾದ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ ಹೊಸ ವರ್ಷದ ಮೊದಲ ಕ್ಷಣಕ್ಕೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಪ್ರೇಮಿಗಳು, ಯುವ ಜನತೆ ವರ್ಷದ ಕೊನೆ ಗಳಿಗೆಯಲ್ಲಿ ಸಾಧ್ಯವಾದಷ್ಟುಮಟ್ಟಿಗೆ ಸಂತೋಷ ಪಟ್ಟು, ಅಷ್ಟೇ ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡರು. 12 ಗಂಟೆಗೆ ಸರಿಯಾಗಿ ಬಾಣ ಬಿರುಸುಗಳು, ಸಿಡಿಮದ್ದುಗಳನ್ನು ಸಿಡಿಸಿದ ಜನರ ಸಂಭ್ರಮ ಮುಗಿಲುಮುಟ್ಟಿತ್ತು.
ನಗರದ ಹೋಟೆಲ್'ಗಳು, ಪಬ್'ಗಳು, ಕ್ಲಬ್, ಡಿಸ್ಕೋಥೆಕ್'ಗಳಲ್ಲಿ ಹೊಸ ವರ್ಷಾರಂಭ ಸಂಭ್ರಮಿಸಿದರೆ, ಮತ್ತೆ ಕೆಲವರು ಸ್ನೇಹಿತರು, ಬಂಧುಗಳೊಂದಿಗೆ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಜೊತೆಗೆ ರಸ್ತೆಮಧ್ಯದಲ್ಲಿ ಸಿಹಿ ಹಂಚಿ ಆಪ್ತರಿಗಲ್ಲದೆ, ಇತರರಿಗೂ ನೀಡಿ ಹೊಸ ವರ್ಷವನ್ನು ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.