
ಬೆಂಗಳೂರು(ಮಾ.07): ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೇ ಎಚ್ಚರ. ಈ ಬಾರಿ ಪರೀಕ್ಷೆಗೆ ಐದು ನಿಮಿಷ ತಡವಾಗಿ ಹೋದರೂ ನಿಮಗೆ ಪರೀಕ್ಷೆ ಬರೆಯುವ ಅವಕಾಶ ಸಿಗುವುದಿಲ್ಲ!. ಹೌದು, ಇಂತಹ ಆದೇಶವನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರತ್ಯೇಕವಾಗಿ ಹೊರಡಿಸಿವೆ.
ಈ ಆದೇಶಗಳ ಪ್ರಕಾರ ಪ್ರಕಾರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭಕ್ಕೂ 15 ನಿಮಿಷ ಮೊದಲು ಪರೀಕ್ಷಾ ಕೊಠಡಿಯಲ್ಲಿ ಹಾಜರಿರು ವುದು ಕಡ್ಡಾಯ. ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ.
ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸಾಮಾನ್ಯವಾಗಿ ಬೆಳಗ್ಗೆ 9.30ಕ್ಕೆ ಮತ್ತು ಪಿಯುಸಿ ಪರೀಕ್ಷೆಗಳು ಬೆಳಗ್ಗೆ 10.15ಕ್ಕೆ ಪ್ರಾರಂಭವಾಗುತ್ತವೆ. 15 ನಿಮಿಷ ಮುಂಚಿತವಾಗಿ ಕೊಠಡಿ ಪ್ರವೇಶಿಸಬೇಕು. ಕೊನೇ ಪಕ್ಷ ಪರೀಕ್ಷೆಗೆ ನಿಗದಿಗೊಳಿಸಿರುವ ಸಮಯದೊಳಗೆ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿ ಹಾಜರಿರಬೇಕು. 9.35ಕ್ಕೆ ಬಂದರೂ ವಿದ್ಯಾರ್ಥಿಯನ್ನು ಪರೀಕ್ಷಾ ಕೊಠಡಿಯೊಳಗೆ ಬಿಟ್ಟುಕೊಳ್ಳುವುದಿಲ್ಲವೆಂದು ತಿಳಿಸಿದೆ.
ಈ ನಿಯಮವೇಕೆ?: ಸಾಮಾನ್ಯವಾಗಿ ಪರೀಕ್ಷೆ ಆರಂಭವಾದ ಮೂವತ್ತು ನಿಮಿಷಗಳವರೆಗೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿ ಪ್ರವೇಶಿಸಲು ಈ ಹಿಂದೆ ಅವಕಾಶ ನೀಡಲಾಗುತ್ತಿತ್ತು. ಸಾರಿಗೆ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳು ಮತ್ತು ದೂರದ ಊರಿನಿಂದ ಬರುವಂತಹ ವಿದ್ಯಾರ್ಥಿಗಳಿಗೆ ತೊಂದರೆಯಾಗದೆ ಇರಲಿ ಎಂಬ ಉದ್ದೇಶ ಇದರ ಹಿಂದೆಯಿತ್ತು. ಆದರೆ, ಕಳೆದ ಬಾರಿಯ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಮುಜುಗರಕ್ಕೆ ಈಡಾಗಿರುವ ಶಿಕ್ಷಣ ಇಲಾಖೆ ಕೆಲವೊಂದು ಬದಲಾವಣೆ ಮಾಡಿಕೊಂಡಿದೆ.
ಅದರ ಪ್ರಕಾರ ಪರೀಕ್ಷಾ ಸಮಯ ಆರಂಭಕ್ಕೂ 15 ನಿಮಿಷ ಮೊದಲೇ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಇರಬೇಕು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಯನ್ನು ನೀಡಲಾಗುತ್ತದೆ.
ಈ 15 ನಿಮಿಷದ ಅವಧಿಯಲ್ಲಿ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯನ್ನು ಸಂಪೂರ್ಣವಾಗಿ ಓದಿಕೊಳ್ಳಲು ಬಳಸಿಕೊಳ್ಳಬಹುದು.
ಅನಂತರ ಪರೀಕ್ಷಾ ಸಮಯ ಬಂದ ಕೂಡಲೇ ಪ್ರಶ್ನೆ ಪತ್ರಿಕೆಗೆ ವಿದ್ಯಾರ್ಥಿಗಳು ಉತ್ತರ ನೀಡುವುದನ್ನು ಆರಂಭಿಸಬೇಕು.
ಹೀಗೆ, ಪರೀಕ್ಷೆ ಪ್ರಾರಂಭಕ್ಕೂ 15 ನಿಮಿಷ ಮುನ್ನ ಪ್ರಶ್ನೆಪತ್ರಿಕೆಗಳನ್ನು ಓದಿಕೊಳ್ಳಲು ಅವಕಾಶ ನೀಡಲಿರುವುದ ರಿಂದ ಅಕಸ್ಮಾತ್ ಪ್ರಶ್ನೆಪತ್ರಿಕೆ ಬಹಿರಂಗವಾದರೆ, ವಿದ್ಯಾರ್ಥಿಗಳು ಉತ್ತರಗಳನ್ನು ನೋಡಿಕೊಂಡು ನಂತರ ಹಾಜರಾಗುವ ಸಂದರ್ಭಗಳಿರುತ್ತವೆ. ಇಂತಹ ಸಂಭವನೀಯತೆಯನ್ನು ತಡೆಯುವ ಉದ್ದೇಶದಿಂದ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಬಹಳ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋದಾ ಬೋಪಣ್ಣ ತಿಳಿಸಿದ್ದಾರೆ.
ವರದಿ: ಕನ್ನಡ ಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.