ಲಂಡನ್ ಮಾದರಿಯಲ್ಲಿ ಬೆಂಗಳೂರಲ್ಲಿ ಪೊಲೀಸ್ ಕಂಟ್ರೋಲ್'ರೂಂ! ಎಲ್ಲಾ ಎಮರ್ಜೆನ್ಸಿಗಳಿಗೆ ನಂ. 100

Published : Jun 11, 2017, 12:09 PM ISTUpdated : Apr 11, 2018, 12:50 PM IST
ಲಂಡನ್ ಮಾದರಿಯಲ್ಲಿ ಬೆಂಗಳೂರಲ್ಲಿ ಪೊಲೀಸ್ ಕಂಟ್ರೋಲ್'ರೂಂ! ಎಲ್ಲಾ ಎಮರ್ಜೆನ್ಸಿಗಳಿಗೆ ನಂ. 100

ಸಾರಾಂಶ

‘ನಮ್ಮ 100' ನಿಯಂತ್ರಣ ಕೊಠಡಿಗೆ ಚಾಲನೆ ನೀಡಿದ ಬಳಿಕ ಮುಖ್ಯಮಂತ್ರಿಗಳು ಮಹಿಳೆಯೊಬ್ಬರ ಕರೆ ಸ್ವೀಕರಿಸಿದರು. ಕರೆ ಮಾಡಿದ್ದ ಮಹಿಳೆ ಕಲಾಸಿಪಾಳ್ಯದಲ್ಲಿ ಪಾಸ್‌'ಪೋರ್ಟ್‌ ಕಳೆದುಹೋಗಿದೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ನಿಯಂತ್ರಣ ಕೊಠಡಿಯ ಸಿಬ್ಬಂದಿಯ ರೀತಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೂಡಲೇ ನಿಮ್ಮ ನೆರವಿಗೆ ಪೊಲೀಸ್‌ ಸಿಬ್ಬಂದಿ ಧಾವಿಸಲಿದ್ದಾರೆ. "ಇ-ಲಾಸ್ಟ್‌" ಆ್ಯಪ್‌'ನಲ್ಲಿ ಪಾಸ್‌'ಪೋರ್ಟ್‌ ಕಳೆದು ಹೋಗಿರುವ ಬಗ್ಗೆ ದೂರು ದಾಖಲಿಸಿ, ಸ್ವೀಕೃತಿ ಪತ್ರ ಪಡೆಯುವಂತೆ ಸಲಹೆ ನೀಡಿ ಕರೆ ಸ್ಥಗಿತಗೊಳಿಸಿದ್ದಾರೆ.

ಬೆಂಗಳೂರು: ಅಧಿಕಾರಿಗಳು ಪ್ರಾಮಾಣಿವಾಗಿ ಕೆಲಸ ಮಾಡಿದರೆ ಬೆಂಗಳೂರು ನಗರವನ್ನು ‘ಅಪರಾಧ ಮುಕ್ತ ರಾಜಧಾನಿ'ಯನ್ನಾಗಿಸಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ‘ನಮ್ಮ 100' ನಿಯಂತ್ರಣ ಕೊಠಡಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಸಂಪೂರ್ಣವಾಗಿ ಅಪರಾಧ ಮುಕ್ತವನ್ನಾಗಿಸಲು ಸಾಧ್ಯವಿಲ್ಲ. ಇನ್ಸ್‌'ಪೆಕ್ಟರ್‌, ಎಸಿಪಿ ಮತ್ತು ಡಿಸಿಪಿಗಳು ಪಣ ತೊಟ್ಟರೆ ‘ಗೂಂಡಾ ಮುಕ್ತ ನಗರ'ವನ್ನಾಗಿ ಮಾಡಬಹುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಪಣ ತೊಡಬೇಕು ಎಂದು ತಿಳಿಸಿದರು.

ಬೆಂಗಳೂರು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದ್ದು ಅನೇಕ ಅಂತಾರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಲ್ಲಿ ಹೂಡಿಕೆ ಮಾಡಿವೆ. ಈ ಹಿಂದೆ ಜಾಗತಿಕ ಮಟ್ಟದಲ್ಲಿ ಮದ್ರಾಸ್‌, ಹೈದರಾಬಾದ್‌ ಹೆಸರಗಳು ಕೇಳಿ ಬರುತ್ತಿದ್ದವು. ಎಕನಾಮಿಕ್‌ ಸರ್ವೆಯಲ್ಲಿ ಬೆಂಗಳೂರನ್ನು ‘ಮೋಸ್ಟ್‌ ಡೈನಾಮಿಕ್‌ ಸಿಟಿ' ಎಂದು ಹೇಳಲಾಗಿದೆ. ಅಷ್ಟರ ಮಟ್ಟಿಗೆ ನಗರದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ. ಬೆಂಗಳೂರಿನಲ್ಲಿ 1.10 ಕೋಟಿ ಜನರಿದ್ದಾರೆ. ನಿತ್ಯ 25ರಿಂದ 30 ಲಕ್ಷ ಜನ ಬಂದು-ಹೋಗುವವರಿದ್ದಾರೆ. ಎಲ್ಲರಿಗೂ ರಕ್ಷಣೆ ಒದಗಿಸಬೇಕಾದದ್ದು ಪೊಲೀಸರ ಕರ್ತವ್ಯ ಎಂದರು. 

ಲಂಡನ್‌ ವ್ಯವಸ್ಥೆ ಜಾರಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಮಾತನಾಡಿ, ಲಂಡನ್‌'ನಲ್ಲಿನ ಪೊಲೀಸ್‌ ವ್ಯವಸ್ಥೆ ನೋಡಲು ತೆರಳಿದ್ದೆವು. ಲಂಡನ್‌'ನಲ್ಲಿ ‘ಡಯಲ್‌ 100' ಕರೆ ಸ್ವೀಕರಿಸಲು 1700 ಮಂದಿ ಇದ್ದು, ಐದು ಸೆಕೆಂಡ್‌'ನಲ್ಲಿ ಕರೆ ಸ್ವೀಕರಿಸುತ್ತಾರೆ. ಅಲ್ಲಿನ ವ್ಯವಸ್ಥೆಯನ್ನು ನಗರದಲ್ಲಿ ಪ್ರಥಮ ಬಾರಿಗೆ ಅಳವಡಿಸಿಕೊಳ್ಳಲಾಗಿದೆ. ಈ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ನಗರ ಖ್ಯಾತಿಗೆ ಬೆಂಗಳೂರು ಒಳಗಾಗಿದೆ ಎಂದು ಹೇಳಿದರು. 

ಸಚಿವ ರೋಷನ್‌ ಬೇಗ್‌, ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ. ದತ್ತ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭಾಷ್‌ಚಂದ್ರ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ಸೂದ್‌ ಹಾಗೂ ನಗರ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳು ಹಾಜರಿದ್ದರು. 

ದೂರು ಸ್ವೀಕರಿಸಿದ ಸಿಎಂ!
‘ನಮ್ಮ 100' ನಿಯಂತ್ರಣ ಕೊಠಡಿಗೆ ಚಾಲನೆ ನೀಡಿದ ಬಳಿಕ ಮುಖ್ಯಮಂತ್ರಿಗಳು ಮಹಿಳೆಯೊಬ್ಬರ ಕರೆ ಸ್ವೀಕರಿಸಿದರು. ಕರೆ ಮಾಡಿದ್ದ ಮಹಿಳೆ ಕಲಾಸಿಪಾಳ್ಯದಲ್ಲಿ ಪಾಸ್‌'ಪೋರ್ಟ್‌ ಕಳೆದುಹೋಗಿದೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ನಿಯಂತ್ರಣ ಕೊಠಡಿಯ ಸಿಬ್ಬಂದಿಯ ರೀತಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೂಡಲೇ ನಿಮ್ಮ ನೆರವಿಗೆ ಪೊಲೀಸ್‌ ಸಿಬ್ಬಂದಿ ಧಾವಿಸಲಿದ್ದಾರೆ. "ಇ-ಲಾಸ್ಟ್‌" ಆ್ಯಪ್‌'ನಲ್ಲಿ ಪಾಸ್‌'ಪೋರ್ಟ್‌ ಕಳೆದು ಹೋಗಿರುವ ಬಗ್ಗೆ ದೂರು ದಾಖಲಿಸಿ, ಸ್ವೀಕೃತಿ ಪತ್ರ ಪಡೆಯುವಂತೆ ಸಲಹೆ ನೀಡಿ ಕರೆ ಸ್ಥಗಿತಗೊಳಿಸಿದ್ದಾರೆ. ತನ್ನೊಂದಿಗೆ ಮಾತನಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದು ಮಹಿಳೆಗೆ ತಿಳಿಯಲಿಲ್ಲ.

ನಮ್ಮ 100 ಕುರಿತು ಕನ್ನಡಪ್ರಭ ವಿಶೇಷ ವರದಿ:
ಬೆಂಗಳೂರು ಜನತೆ ಸುರಕ್ಷತೆಯಿಂದ ಜಾರಿಗೆ ತರಲಾಗಿ ರುವ ‘ನಮ್ಮ 100' ಸಹಾಯವಾಣಿಯನ್ನು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದು, ‘ಎಲ್ಲಾ ತುರ್ತು ಸೇವೆಗೆ ಒಂದೇ ಸಂಖ್ಯೆ ನಮ್ಮ 100' ಎಂಬ ಶೀರ್ಷಿಕೆಯಡಿ ‘ಕನ್ನಡಪ್ರಭ' ಜೂ.6ರಂದುವಿಶೇಷ ವರದಿ ಪ್ರಕಟಿಸಿತ್ತು. 

ಹದಿನೈದೇ ಸೆಕೆಂಡ್'ನಲ್ಲಿ ಕರೆ ಸ್ವೀಕಾರ, ಕ್ರಮ
ಅಪಘಾತ ಸೇರಿ ಯಾವುದೇ ತುರ್ತು ಸಂದರ್ಭದಲ್ಲಿ ಕರೆ ಮಾಡಿದರೆ 15 ಸೆಕೆಂಡ್‌ನಲ್ಲಿ ಕರೆ ಸ್ವೀಕರಿಸಲಾಗುತ್ತದೆ. ‘ನಮ್ಮ 100'ಕ್ಕೆ ಕರೆ ಮಾಡಿ ಸ್ಥಗಿತಗೊಳಿಸಿದ ಕೂಡಲೇ ಕರೆ ಮಾಡಿದವರ ಮೊಬೈಲ್‌ಗೆ ‘ಬೆಂಗಳೂರು ಪೊಲೀ ಸರನ್ನು ಸಂಪರ್ಕಿಸಿದ್ದಕ್ಕೆ ಧನ್ಯವಾದ' ಎಂಬ ಸಂದೇಶ ಬರಲಿದೆ. ನಿಯಂತ್ರಣ ಕೊಠಡಿಯಿಂದ ಮಾಹಿತಿ ಬಂದ ನಂತರ ಹೊಯ್ಸಳ ವಾಹನ ಸ್ಥಳಕ್ಕೆ ಹೋಗಲು ಮುಂದಾ ಗುತ್ತಿದ್ದಂತೆ ‘ಹೊಯ್ಸಳ ವಾಹನ ನೀವು ಮಾಹಿತಿ ನೀಡಿದ ಸ್ಥಳಕ್ಕೆ ಇಂತಿಷ್ಟುಸಮಯದಲ್ಲಿ ತಲುಪಲಿದೆ' ಎಂಬ ಸಂದೇಶ ಕೂಡ ಸಂತ್ರಸ್ತರಿಗೆ ಹೋಗಲಿದೆ.

ಪಾಸ್'ಪೋರ್ಟ್, ಸ್ವೀಕೃತಿ ಪತ್ರಕ್ಕೂ ಇಲ್ಲಿಗೇ ಕರೆ:
ಸಾರ್ವಜನಿಕರು ಪಾಸ್'ಪೋರ್ಟ್ ತಪಾಸಣೆ, ಯಾವುದೇ ಸ್ವೀಕೃತಿ ಪತ್ರ ಪಡೆಯಲು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಠಾಣೆಗೆ ಹೋಗುವ ಮುನ್ನ 'ನಮ್ಮ 100'ಗೆ ಕರೆ ಮಾಡಿದರೆ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಸಂಬಂಧಪಟ್ಟ ಠಾಣೆಗೆ ಕರೆ ಮಾಡಿ ಕಾನ್ಫರೆನ್ಸ್ ಕಾಲ್ ಹಾಕಲಾಗುತ್ತದೆ. ತಮಗೆ ಆಗಬೇಕಾದ ಕೆಲಸಕ್ಕೆ ಠಾಣೆಯಲ್ಲಿ ಯಾವ ಸಿಬ್ಬಂದಿ ಭೇಟಿ ಮಾಡಬೇಕು. ಎಷ್ಟು ಗಂಟೆಗೆ ಭೇಟಿಯಾಗಬೇಕು ಎಂದು ಸಮಯ ನಿಗದಿ ಮಾಡಲಾಗುತ್ತದೆ. ಬಳಿಕ ಸಾರ್ವಜನಿಕರು ನಿಗದಿಪಡಿಸಿದ ಸಮಯಕ್ಕೆ ಠಾಣೆಗೆ ಹೋಗಬಹುದು.

‘ಸಿ' ಮತ್ತು ‘ಡಿ' ದರ್ಜೆ ಹುದ್ದೆಗೆ ಸಂಪೂರ್ಣವಾಗಿ ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳಬೇಕೆಂಬ ನಿಯಮ ಇದೆ. ಪೊಲೀಸ್‌ ಇಲಾಖೆಯಲ್ಲಿ ‘ನಮ್ಮ 100' ಕರೆ ಸ್ವೀಕರಿಸುವ ಹುದ್ದೆಗೆ ನ್ಯ ಭಾಷಿಕರನ್ನು ನೇಮಿಸಿಕೊಂಡಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯಲಾಗುವುದು.
- ಎಸ್‌.ಜಿ. ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಕನ್ನಡಪ್ರಭ ವಾರ್ತೆ
epaper.kannadaprabha.in

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌