ಪಾಕ್'ನ ಮೂರು ಮಂದಿಗೆ 100 ಮಕ್ಕಳು!

By Suvarna Web DeskFirst Published Jun 11, 2017, 10:57 AM IST
Highlights

ಭಾರತದಲ್ಲಿ ಎರಡನೇ ಮಗು ಮಾಡಿಕೊಳ್ಳುವುದಕ್ಕೇ ಪೋಷಕರು ಹಿಂದೆ-ಮುಂದೆ ನೋಡುವಾಗ ಪಾಕಿಸ್ತಾನದ ಕೆಲವೊಂದು ಮನೆಗಳಲ್ಲಿ ಒಬ್ಬನೇ ವ್ಯಕ್ತಿ 30ಕ್ಕಿಂತ ಅಧಿಕ ಮಕ್ಕಳಿಗೆ ತಂದೆಯಾಗಿರುವ ಪ್ರಕರಣಗಳು ಕಂಡುಬಂದಿವೆ. ಹೀಗಾಗಿ 19 ವರ್ಷದ ಬಳಿಕ ಇದೇ ಮೊದಲ ಬಾರಿಗೆ ನಡೆದ ಜನಗಣತಿಯಲ್ಲಿ ಪಾಕ್‌ನ ಜನಸಂಖ್ಯೆ 20 ಕೋಟಿಯನ್ನು ಮುಟ್ಟುವ ಸಾಧ್ಯತೆ ಕಂಡುಬರುತ್ತಿದೆ.

ಇಸ್ಲಾಮಾಬಾದ್‌(ಜೂ.11): ಭಾರತದಲ್ಲಿ ಎರಡನೇ ಮಗು ಮಾಡಿಕೊಳ್ಳುವುದಕ್ಕೇ ಪೋಷಕರು ಹಿಂದೆ-ಮುಂದೆ ನೋಡುವಾಗ ಪಾಕಿಸ್ತಾನದ ಕೆಲವೊಂದು ಮನೆಗಳಲ್ಲಿ ಒಬ್ಬನೇ ವ್ಯಕ್ತಿ 30ಕ್ಕಿಂತ ಅಧಿಕ ಮಕ್ಕಳಿಗೆ ತಂದೆಯಾಗಿರುವ ಪ್ರಕರಣಗಳು ಕಂಡುಬಂದಿವೆ. ಹೀಗಾಗಿ 19 ವರ್ಷದ ಬಳಿಕ ಇದೇ ಮೊದಲ ಬಾರಿಗೆ ನಡೆದ ಜನಗಣತಿಯಲ್ಲಿ ಪಾಕ್‌ನ ಜನಸಂಖ್ಯೆ 20 ಕೋಟಿಯನ್ನು ಮುಟ್ಟುವ ಸಾಧ್ಯತೆ ಕಂಡುಬರುತ್ತಿದೆ.

1998ರ ಜನಗಣತಿ ಪ್ರಕಾರ ಪಾಕಿಸ್ತಾನದಲ್ಲಿ 13.5 ಕೋಟಿ ಜನರು ಇದ್ದರು. ಇದೀಗ ನಡೆದಿರುವ ಜನಗಣತಿಯ ಪ್ರಾಥಮಿಕ ಫಲಿತಾಂಶ ಜುಲೈಗೆ ಹೊರಬೀಳಲಿದೆಯಾದರೂ, ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ವೃದ್ಧಿಯಾಗಿರುವ ಲಕ್ಷಣಗಳು ಕಂಡುಬರುತ್ತಿವೆ. ‘ಅಲ್ಲಾಹ್‌ ಇದ್ದಾನೆ' ಎನ್ನುತ್ತಾ ಕುಟುಂಬ ಕಲ್ಯಾಣ ಕ್ರಮಗಳನ್ನು ಜನರು ಗಾಳಿಗೆ ತೂರಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಆಂಗ್ಲ ಸುದ್ದಿಸಂಸ್ಥೆಯೊಂದು ಮಾತನಾಡಿಸಿರುವ ಮೂವರು ವ್ಯಕ್ತಿಗಳು ಸುಮಾರು 100 ಮಕ್ಕಳಿಗೆ ತಂದೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಗುಲ್ಜಾರ್‌ ಖಾನ್‌ ಎಂಬಾತ 36 ಮಕ್ಕಳಿಗೆ ತಂದೆಯಾಗಿದ್ದಾನೆ. ಈ ಬಗ್ಗೆ ಪ್ರಶ್ನಿಸಿದರೆ, ಇಡೀ ವಿಶ್ವ ಹಾಗೂ ಮಾನವರನ್ನು ದೇವರು ಸೃಷ್ಟಿಸಿದ್ದಾನೆ. ಮಕ್ಕಳು ಜನಿಸುವ ಸ್ವಾಭಾವಿಕ ಪ್ರಕ್ರಿಯೆಯನ್ನು ನಾನೇಕೆ ತಪ್ಪಿಸಲಿ ಎಂದು 57ರ ಪ್ರಾಯದ ಈ ವ್ಯಕ್ತಿ ಹೇಳುತ್ತಾನೆ. ಈತನ ಮೂರನೇ ಪತ್ನಿ ಈಗ ಗರ್ಭವತಿಯಾಗಿದ್ದಾಳೆ. 
57 ವರ್ಷದ ಗುಲ್ಜಾರ್‌ ‘ನನ್ನ ಮಕ್ಕಳು ಕ್ರಿಕೆಟ್‌ ಆಡಲು ಸ್ನೇಹಿತರೇ ಬೇಕಾಗಿಲ್ಲ' ಎಂದು ಗಹಗಹಿಸಿ ನಗುತ್ತಾನೆ.

ಇನ್ನು ಗುಲ್ಜಾರ್‌ನ ಸೋದರ ಮಸ್ತಾನ್‌ ಖಾನ್‌ ವಾಜಿರ್‌ ಎಂಬಾತ 22 ಮಕ್ಕಳ ತಂದೆಯಾಗಿದ್ದಾನೆ. ಈತನಿಗೆ ಈಗ 70 ವರ್ಷ. ‘ದೇವರು ನಮಗೆಲ್ಲ ಆಹಾರ ನೀಡುವ ಭರವಸೆ ನೀಡಿದ್ದಾನೆ' ಎಂದು ಆತ್ಮವಿಶ್ವಾಸ ಪ್ರದರ್ಶಿಸುತ್ತಾರೆ.
ಇದೇ ರೀತಿ ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ಜಾನ್‌ ಮೊಹಮ್ಮದ್‌ ಎಂಬ ವ್ಯಕ್ತಿ ಇದ್ದು ಆತನಿಗೆ 38 ಮಕ್ಕಳಿದ್ದಾರೆ. ಇವರ ಬಂಧುಗಳೆಲ್ಲಾ 20ಕ್ಕಿಂತ ಅಧಿಕ ಮಕ್ಕಳಿಗೆ ತಂದೆಯಂದಿರಾಗಿದ್ದಾರೆ. ‘ಮುಸ್ಲಿಮರ ಜನಸಂಖ್ಯೆ ಹೆಚ್ಚಬೇಕು. ಇದರಿಂದ ಅವರ ವೈರಿಗಳು ಹೆದರುತ್ತಾರೆ. ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರಬೇಕು' ಎಂದು ಆತ ಹೇಳುತ್ತಾನೆ.

click me!