ದೇಶದಲ್ಲಿ ಬದಲಾಗುತ್ತಾ ಶಿಕ್ಷಣ ನೀತಿ ? ಮಕ್ಕಳು ಹೇಗೆ ಕಲಿಯುತ್ತಾರೆ?

By Web DeskFirst Published Jun 2, 2019, 8:18 AM IST
Highlights

ದೇಶದಲ್ಲಿ ಸದ್ಯ ಇರುವ ಶಿಕ್ಷಣ ಪದ್ಧತಿಯನ್ನು ಬದಲಾಯಿಸುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.

ನವದೆಹಲಿ: ದಶಕಗಳ ಹಿಂದೆ ರಚಿಸಲಾಗಿರುವ ದೇಶದ ಶಿಕ್ಷಣ ನೀತಿಯನ್ನು ಅಮೂಲಾಗ್ರ ರೀತಿಯಲ್ಲಿ ಸುಧಾರಣೆ ಮಾಡುವಂತೆ ಉನ್ನತ ಮಟ್ಟದ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ವಿದ್ಯಾರ್ಥಿಗಳನ್ನು 21 ನೇ ಶತಮಾನದ ಬೇಡಿಕೆಗಳಿಗೆ ಅನ್ವಯವಾಗಿ ಸಜ್ಜುಗೊಳಿಸಬೇಕು ಎಂಬ ಆಶಯ ಹೊಂದಿರುವ ಈ ಶಿಫಾರಸುಗಳಲ್ಲಿ ಕೇವಲ ಪಠ್ಯಪುಸ್ತಕ ಆಧರಿತ ಕಲಿಕೆಗಿಂತ ಆಡುತ್ತಾ, ನಲಿಯುತ್ತಾ ಕಲಿಯುವ ಸಂಪ್ರದಾಯವನ್ನು ಅಳವಡಿಸಿಕೊಳ್ಳಬೇಕೆಂದು ಹೇಳಲಾಗಿದೆ.

ಜೊತೆಗೆ ಹಾಲಿ ಜಾರಿಯಲ್ಲಿರುವ 10 ಪ್ಲಸ್ 2 ಪದ್ಧತಿಯ ಬದಲಾಗಿ 5 + 3 + 3+ 4 ಮಾದರಿಯ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಇಸ್ರೋದ ನಿವೃತ್ತ ಮುಖ್ಯಸ್ಥ ಕೆ. ಕಸ್ತೂರಿರಂಗನ್ ನೇತೃತ್ವದ 8 ತಜ್ಞರ ಸಮಿತಿ ತನ್ನ ಕರಡು ವರದಿಯಲ್ಲಿ  ಹೇಳಿದೆ. 

ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಸಚಿವರಾಗಿರುವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಳ್ಳುತ್ತಿ ದ್ದಂತೆ ವರದಿಯನ್ನು ಸಮಿತಿ ಸಲ್ಲಿಕೆ ಮಾಡಿದೆ.

ವರದಿಯಲ್ಲಿ ಏನಿದೆ?: ದೇಶದಲ್ಲಿ ಸದ್ಯ ಇರುವ ಶಿಕ್ಷಣ ನೀತಿ 1986 ರಲ್ಲಿ ಜಾರಿಯಾದದ್ದು. 1992 ರಲ್ಲಿ ಅದನ್ನು ಪರಿಷ್ಕರಿಸಲಾಗಿತ್ತು. ಇದು 10+2 ಮಾದರಿಯನ್ನು ಅನುಸರಿಸುತ್ತದೆ. ಆದರೆ ಹೊಸ ಶಿಕ್ಷಣ ನೀತಿಯ ಅನ್ವಯ 12 ನೇ ತರಗತಿವರೆಗಿನ ಶಿಕ್ಷಣವನ್ನು 5 ಹಂತಗಳಲ್ಲಿ ವಿಂಗಡಿಸಬೇಕು. ಅದನ್ನು 5 + 3 + 3+ 4  ಮಾದರಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. 3 ನೇ ವರ್ಷದಿಂದ 18 ನೇ  ವಯಸ್ಸಿನವರೆಗೆ ಮಕ್ಕಳು ಹಂತ ಹಂತವಾಗಿ ವಿಷಯ ವಾರು ಪ್ರೌಢಿಮೆ ಬೆಳೆಸಿಕೊಳ್ಳುವಂತೆ ಮಾಡಬೇಕು. ಜೊತೆಗೆ ಇಂಥ ಶಿಕ್ಷಣವು ನಲಿಯುತ್ತಾ ಕಲಿಯುವಂತಿರಬೇಕು ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ. 

5 ವರ್ಷಗಳ ಮೊದಲ ಹಂತದಲ್ಲಿ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಪಠ್ಯಕ್ಕಿಂತ ಆಟದ ಮೂಲಕವೇ ಹೆಚ್ಚಿನ ಶಿಕ್ಷಣವನ್ನು ಒದಗಿಸಬೇಕು. 3 ವರ್ಷಗಳ ಎರಡನೇ ಹಂತದಲ್ಲೂ ನಲಿ-ಕಲಿ ಮಾದರಿಯನ್ನು ಮುಂದುವರೆಸಬೇಕು. ಆದರೆ ಈ ಹಂತದಲ್ಲಿ ಪಠ್ಯಪುಸ್ತಕಗಳನ್ನು ಶಿಕ್ಷಣದಲ್ಲಿ ಹಂತಹಂತವಾಗಿ ಅಳವಡಿಸಬೇಕು.

ಈ ಹಂತ ಪೂರ್ಣಗೊಳ್ಳುವ ವೇಳೆ ಮಕ್ಕಳು ಓದುವುದು, ಬರೆಯುವುದು, ವಿವಿಧ ವಿಷಯಗಳ ಕುರಿತು ಮಾತನಾಡುವುದು, ಗಣಿತ, ವಿಜ್ಞಾನ ಮೊದಲಾದ ವಿಷಯಗಳ ಕುರಿತು ಸಾಮಾನ್ಯ ಜ್ಞಾನ ಹೊಂದುವ ಸ್ಥಿತಿ ತಲುಪಬೇಕು. ಈ ಹಂತದಲ್ಲಿ ನುರಿತ ಶಿಕ್ಷಕರ ಅವಶ್ಯಕತೆ ಇರುವುದಿಲ್ಲ. ಇನ್ನು 3 ವರ್ಷಗಳ ಮೂರನೇ ಹಂತದಲ್ಲಿ ಪೂರ್ಣವಾಗಿ ಪಠ್ಯ ಕ್ರಮ ಜಾರಿಗೆ ತರಬೇಕು. ಇಲ್ಲಿ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಪಾಠ ಕಲಿಸಿಕೊಡಬೇಕು. ಕಲಿಕೆಯ ಜೊತೆಗೆ ಹೊಸ ಅನ್ವೇಷನೆ ಮತ್ತು ಪ್ರಯೋಗಕ್ಕೆ ಆದ್ಯತೆ ನೀಡಬೇಕು ಎಂದು ಸಮಿತಿ ವರದಿ ಹೇಳಿದೆ.

4 ವರ್ಷಗಳ ಕೊನೆಯ ಹಂತದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಕುರಿತು ಆಳವಾದ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು. ಪಠ್ಯದ ಜೊತೆಗೆ ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿಯ ವಿಷಯ ಕಲಿಯಲು ಅವಕಾಶ ಮಾಡಿಕೊಡಬೇಕು. ಇದಲ್ಲದೇ ಪ್ರೌಢ ಶಿಕ್ಷಣ ಹಂತದಲ್ಲಿ ಸೆಮಿಸ್ಟರ್ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ವರದಿ ಹೇಳಿದೆ.

ಉಚಿತ ಶಿಕ್ಷಣ: ನರ್ಸರಿಯಿಂದ 12 ನೇ ತರಗತಿವರೆಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಬೇಕು. ಬಿಎ, ಬಿಎಸ್ಸಿ, ಬಿಕಾಂನಂತಹ ಪದವಿಗಳ ಅವಧಿಯನ್ನು 3 ರಿಂದ 4 ವರ್ಷಕ್ಕೆ ಹೆಚ್ಚಿಸಬೇಕು. ನರ್ಸರಿಯಿಂದ ಪ್ರಾಥಮಿಕ ಶಾಲೆವರೆಗಿನ ಮಕ್ಕಳಿಗೆ ಬಿಸಿಯೂಟದ ಜತೆಗೆ ಬೆಳಗ್ಗೆ ಉಪಾಹಾರ ನೀಡಬೇಕು ಎಂಬುದು ಸೇರಿದಂತೆ ಹಲವು ಮಹತ್ವದ ಶಿಫಾರಸುಗಳನ್ನು ಕರಡು ರಾಷ್ಟ್ರೀಯ ಶೈಕ್ಷಣಿಕ ನೀತಿಯಲ್ಲಿ ಮಾಡಲಾಗಿದೆ. 

ವರದಿ ಸ್ವೀಕರಿಸಿ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್ ಪೋಖ್ರಿಯಾಲ್, ವರದಿ ಸ್ವೀಕರಿಸಿದ್ದೇನೆ. ರಾಜ್ಯಗಳ ಜತೆ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ತಿಳಿಸಿದ್ದಾರೆ. ಈ ವರದಿ ಕುರಿತಂತೆ ಒಂದು ತಿಂಗಳ ಕಾಲ ಸಾರ್ವಜನಿಕರ ಸಲಹೆಗಳನ್ನು ಸ್ವೀಕರಿಸಲಾಗುತ್ತದೆ. ಜುಲೈ ಮೊದಲ ವಾರದಲ್ಲಿ ಅಂತಿಮ ಕರಡನ್ನು ಸಂಪುಟದಲ್ಲಿ ಮಂಡಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸುಬ್ರಮಣ್ಯಂ ತಿಳಿಸಿದ್ದಾರೆ. 

click me!