
ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಮಂಗಳವಾರವೇ ಘೋಷಣೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಶನಿವಾರ ಪ್ರಧಾನಿ ನರೇಂದ್ರ ಮೋದಿಯ ವರು ಜೂ.24ರಿಂದ ಅಮೆರಿಕ ಪ್ರವಾಸ ಕೈಗೊಳ್ಳಲಿರುವುದರಿಂದ, ಶುಕ್ರವಾರ (ಜೂ.23) ಎನ್‌ಡಿಎ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಬಿಜೆಪಿ ಸಂಸದೀಯ ಸಮಿತಿ ಸಭೆ ಮಂಗಳವಾರ ನಡೆಯುವ ಸಾಧ್ಯತೆಯಿದ್ದು, ಅಂದು ಅಥವಾ ಅದರ ಮರುದಿನವಾದ ಬುಧವಾರ (ಜೂ.20 ಅಥವಾ 21ರಂದು) ರಾಷ್ಟ್ರಪತಿ ಅಭ್ಯರ್ಥಿ ಘೋಷಣೆ ಆಗಬಹುದು ಎಂದು ಮುಖಂಡರೊಬ್ಬರು ಹೇಳಿದ್ದಾರೆ. ಈ ನಡುವೆ 19 ಮತ್ತು 20ರಂದು ಬಿಜೆಪಿ ಸಂಸದರ ಸಭೆಯನ್ನು ಕರೆಯಲಾಗಿದ್ದು, ಅಂದು ರಾಷ್ಟ್ರಪತಿ ಚುನಾವಣೆಯ ಪ್ರಕ್ರಿಯೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಸಚಿವರು ಅಭ್ಯರ್ಥಿಯ ಹೆಸರು ಸೂಚಿಸಲಿದ್ದರೆ, ಸಂಸದರು ಅನುಮೋದಿಸಲಿದ್ದಾರೆ.
ಆಯ್ಕೆ ಪ್ರಕ್ರಿಯೆ ಬಿರುಸು: ಈ ನಡುವೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳಿಂದ ಬಿರುಸಿನ ಚಟುವಟಿಕೆಗಳು ಮುಂದುವರಿದಿದೆ.
ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಒಮ್ಮತ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಭಾನುವಾರ ತೃಣಮೂಲ ಕಾಂಗ್ರೆಸ್ ಮತ್ತು ಬಿಜು ಜನತಾ ದಳದ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮತ್ತೋರ್ವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಸಮಾಜವಾದಿ ಪಕ್ಷದ ಮುಖಂಡರುಗಳಾದ ರಾಮ್ ಗೋಪಾಲ್ ಯಾದವ್, ನರೇಶ್ ಅಗರ್ವಾಲ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇನ್ನೊಂದೆಡೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯೊಂದಿಗೆ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿ ಗೌಪ್ಯ ಮಾತುಕತೆ ನಡೆಸಿದ್ದಾರೆ. ‘ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯನ್ನು ಪ್ರಧಾನಿ ಮೋದಿ ನಿರ್ಧರಿಸುತ್ತಾರೆ. ನೀವು ಬೆಂಬಲಿಸಬೇಕು' ಎಂದು ಠಾಕ್ರೆಗೆ ಶಾ ತಿಳಿಸಿದರು ಎನ್ನಲಾಗಿದೆ. ಆದರೆ, ‘ಮೊದಲು ನೀವು ಅಭ್ಯರ್ಥಿ ನಿರ್ಧರಿಸಿ. ಆಮೇಲೆ ಬೆಂಬಲದ ಬಗ್ಗೆ ನಿರ್ಣಯಿಸುತ್ತೇವೆ' ಎಂದು ಠಾಕ್ರೆ ಉತ್ತರಿಸಿದ್ದಾರೆ.
ಮಾತುಕತೆಯ ವೇಳೆ ಶಾರೊಂದಿಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಉಪಸ್ಥಿತರಿದ್ದರು. ಎನ್‌ಡಿಎ ಕಡೆಯಿಂದ ಸ್ಪಷ್ಟಅಭ್ಯರ್ಥಿಯ ಪ್ರಸ್ತಾಪವಿಲ್ಲದಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಒಮ್ಮತದ ಅಭ್ಯರ್ಥಿಗೆ ಬೆಂಬಲ ಸೂಚಿಸುವ ಕುರಿತಂತೆ ಇನ್ನೂ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.