ಬೆಂಗಳೂರಿಗರಿಗೆ ಸಿಹಿಸುದ್ದಿ: ಇನ್ನು ಮುಂದೆ ಪೈಪ್ ಲೈನ್'ನಲ್ಲಿ ಬರಲಿದೆ ಗ್ಯಾಸ್

Published : Jun 19, 2017, 09:58 AM ISTUpdated : Apr 11, 2018, 12:37 PM IST
ಬೆಂಗಳೂರಿಗರಿಗೆ ಸಿಹಿಸುದ್ದಿ: ಇನ್ನು ಮುಂದೆ ಪೈಪ್ ಲೈನ್'ನಲ್ಲಿ ಬರಲಿದೆ ಗ್ಯಾಸ್

ಸಾರಾಂಶ

ಸಿಲಿಂಡರ್‌ ಬುಕ್‌ಮಾಡುವ, ಸಿಲಿಂಡರ್‌ಗಳನ್ನು ಮನೆಯಲ್ಲಿಟ್ಟು ಕೊಳ್ಳುವ ಮತ್ತು 2-3 ಮಹಡಿಗೆ ಹೊತ್ತೊಯ್ಯವ ಕಿರಿಕಿರಿಯಿಂದ ಕೆಲವೇ ವರ್ಷಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜನತೆಗೆ ಮುಕ್ತಿ ಸಿಗಲಿದೆ.

ಬೆಂಗಳೂರು(ಜೂ.19): ಸಿಲಿಂಡರ್‌ ಬುಕ್‌ಮಾಡುವ, ಸಿಲಿಂಡರ್‌ಗಳನ್ನು ಮನೆಯಲ್ಲಿಟ್ಟು ಕೊಳ್ಳುವ ಮತ್ತು 2-3 ಮಹಡಿಗೆ ಹೊತ್ತೊಯ್ಯವ ಕಿರಿಕಿರಿಯಿಂದ ಕೆಲವೇ ವರ್ಷಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜನತೆಗೆ ಮುಕ್ತಿ ಸಿಗಲಿದೆ.

 

ಈ ಯೋಜನೆಯಿಂದ ನಾಗರಿಕರು ಪೈಪ್‌ಲೈನ್‌ ಮೂಲಕ ಅಡುಗೆ ಅನಿಲ ಪಡೆಯಬಹುದಾಗಿದೆ. ಬೆಂಗಳೂರು ಸಿಟಿ ಗ್ಯಾಸ್‌ ಡಿಸ್ಟ್ರಿಬ್ಯೂಷನ್‌(ಸಿಜಿಡಿ) ಯೋಜನೆಯನ್ನು ಆರಂಭಿಸುವ ಮೂಲಕ ನಗರದಲ್ಲಿ ಹೊಸ ಮೈಲಿಗಲ್ಲು ಆರಂಭಿಸಿದೆ. ನಗರದಲ್ಲಿ ಮನೆ ಮನೆಗೆ ಪೈಪ್‌ಲೈನ್‌ನಲ್ಲಿ ಅನಿಲ ಪೂರೈಕೆ ಯೋಜನೆಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಭಾನುವಾರ ಚಾಲನೆ ನೀಡಿದ್ದು, ಮನೆ ಮನೆಗೆ ಪೈಪ್‌ಲೈನ್‌ನಲ್ಲಿ ಅನಿಲ ಪೂರೈಕೆ ಮಾಡುವ ಜವಾಬ್ದಾರಿಯನ್ನು ಗೇಲ್‌ ಗ್ಯಾಸ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆಯು ವಹಿಸಿಕೊಂಡಿದೆ.

ಬೆಂಗಳೂರು ಸಿಜಿಡಿ ಯೋಜನೆಯನ್ನು .6,283 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಈಗಾಗಲೇ 66 ಕಿ.ಮೀ. ಉದ್ದದ ಸ್ಟೀಲ್‌ ಮತ್ತು 452 ಕಿ.ಮೀ. ಉದ್ದ ಎಂಡಿಪಿಇ ಪೈಪ್‌ಲೈನ್‌ ಅಳವಡಿಕೆ ಪೂರ್ಣಗೊಂಡಿದೆ. ಕೇವಲ ಮನೆಗ ಳಿಗೆ ಮಾತ್ರವಲ್ಲದೇ, ಕೈಗಾರಿಕೆಗಳು ಮತ್ತು ವಾಣಿಜ್ಯ ಘಟಕಗಳಿಗೂ ಸಹ ಅನಿಲ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಮೂಲಕ ಆರ್ಥಿಕ, ಪರಿಸರಸ್ನೇಹಿ, ಸುರಕ್ಷಿತವಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಒಟ್ಟು 4,395 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ.

4 ರೀತಿಯಲ್ಲಿ ಸಂಪರ್ಕ: ನೈಸರ್ಗಿಕ ಅನಿಲ ಪೂರೈಕೆಯನ್ನು 4 ರೀತಿಯಲ್ಲಿ ವಿಂಗಡಿಸಲಾಗಿದೆ. ವಾಹನಗಳಿಗಾಗಿ ಪೂರೈಕೆ (ಸಿಎನ್‌ಜಿ), ಗೃಹ ಬಳಕೆ (ಪಿಎನ್‌ಜಿ), ವಾಣಿಜ್ಯ ಬಳಕೆ ಮತ್ತು ಕೈಗಾರಿಕೆಗಳ ಬಳಕೆ ಎಂಬುದಾಗಿ ಬೇರ್ಪಡಿಸಿ ಗೇಲ್‌ ಸಂಸ್ಥೆಯು ಅನಿಲ ಪೂರೈಕೆ ಮಾಡುತ್ತಿದೆ.

34,500 ಮನೆಗಳ ಪೈಕಿ 23 ಸಾವಿರ ಮನೆಗಳಿಗೆ ಈ ಸಂಪರ್ಕ ಕಲ್ಪಿಸಲಾಗಿದೆ. ಪ್ರಸ್ತುತ 3 ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ಪೈಪ್‌ಲೈನ್‌ ಮೂಲಕ ಅಡುಗೆ ಅನಿಲ ಬಳಕೆ ಮಾಡಲಾಗುತ್ತಿದೆ. ಸಿಂಗಸಂದ್ರ, ಎಚ್‌ಎಸ್‌ಆರ್‌ ಲೇಔಟ್‌, ಡಾಲ​ರ್‍ಸ್ ಕಾಲೋನಿ, ಮಂಗಮ್ಮನ ಪಾಳ್ಯ, ಎಚ್‌ಆರ್‌ಬಿಆರ್‌ ಲೇಔಟ್‌, ಜಾಲಹಳ್ಳಿ ಸೇರಿದಂತೆ ಇತೆರೆಡೆಗಳಲ್ಲಿ ಪೈಪ್‌ಲೈನ್‌ ಅಳವಡಿಕೆ ಮಾಡಲಾಗಿದೆ. ಅಲ್ಲದೇ, 22 ವಾಣಿಜ್ಯ ಸಂಕೀರ್ಣಗಳು ಪಿಎನ್‌ಜಿ ಸಂಪರ್ಕವನ್ನು ಪಡೆದುಕೊಂಡಿವೆ.

ಪರಿಸರ ಮಾಲಿನ್ಯ ಮುಕ್ತ ವಾತಾವರಣ ನಿರ್ಮಾಣ ಮಾಡಲು ಸಿಎನ್‌ಜಿ ಸಹಕಾರಿಯಾಗಲಿದೆ. ಪ್ರಸ್ತುತ ಲಗ್ಗೆರೆಯ ಪ್ರೇಮ್‌ ನಗರದಲ್ಲಿ ಸಿಎನ್‌ಜಿ ಸ್ಟೇಶನ್‌ ಆರಂಭಿಸಲಾಗಿದೆ. ಮುಂದಿನ ದಿನದಲ್ಲಿ ಸುಮನಹಳ್ಳಿ, ಹೆಣ್ಣೂರು ಮತ್ತು ಪೀಣ್ಯದ ಬಿಎಂಟಿಸಿ ಬಸ್‌ ಡಿಪೋದಲ್ಲಿ ಇನ್ನು 3 ಸಿಎನ್‌ಜಿ ಸ್ಟೇಶನ್‌ ಆರಂಭವಾಗ ಲಿದೆ. ಈ ಮೂಲಕ ವಾಹನ ಸವಾರರು ಅಲ್ಲಿ ನೈಸರ್ಗಿಕ ಅನಿಲವನ್ನು ತುಂಬಿಸಿಕೊಳ್ಳಬಹುದಾಗಿದೆ. ನಗರದಲ್ಲಿ 60 ಸಿಎನ್‌ಜಿ ಸ್ಟೇಶನ್‌ಗಳನ್ನು ಆರಂಭ ಮಾಡುವ ಉದ್ದೇಶ ಹೊಂದಲಾಗಿದೆ.
ನೈಸರ್ಗಿಕ ಅನಿಲ ಪೈಪ್‌ಲೈನ್‌ ಸಂಪರ್ಕವನ್ನು ಇಂಟೆಲ್‌, ಬಾಷ್‌, ಬಿಎಚ್‌ಇಲ್‌, ಟಯೋಟ, ಗರುಡಾ ಪಾಲಿಫ್ಲೆಕ್ಸ್‌, ಜಿಟಿಆರ್‌ ಅಲ್ಯೂಮಿನಿಯಂ ಸೇರಿದಂತೆ ಹಲವು ಕಂಪನಿಗಳು ಪಡೆದುಕೊಂಡಿವೆ.

ಸೌಲಭ್ಯ ಪಡೆದುಕೊಳ್ಳುವುದು ಹೇಗೆ?: ನೈಸರ್ಗಿಕ ಅನಿಲ ಸೌಲಭ್ಯ ಪಡೆದುಕೊಳ್ಳುವವರು ಗೇಲ್‌ ಗ್ಯಾಸ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಲಭ್ಯವಿದ್ದು, ಅಲ್ಲಿಂದ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲವಾದಲ್ಲಿ ನ್ಯೂ ಬಿಎಎಲ್‌ ರಸ್ತೆಯಲ್ಲಿನ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಬಹುದು. ಬಳಿಕ ಮನೆಗಳಿಗೆ ಪೈಪ್‌ ಅಳವಡಿಕೆ ಮಾಡಲು ಸಾಧ್ಯವಿದೆಯೇ ಎಂಬುದರ ಕುರಿತು ಸಂಸ್ಥೆಯ ಸಿಬ್ಬಂದಿ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ.

ಸಂಪರ್ಕ ಪಡೆಯುವವರು .300 ಪಾವತಿಸಿ ಅರ್ಜಿ ಪಡೆದು, .5,500 ಮುಂಗಡ ಠೇವಣಿ ಇಡಬೇಕಾಗುತ್ತದೆ. ಈ ಮೊತ್ತವು ಮರುಪಾವತಿಯಾಗಿರುತ್ತದೆ. ಮನೆಯಲ್ಲಿ ಬಳಕೆ ಮಾಡುವ ಅನಿಲದ ಆಧಾರದ ಮೇಲೆ 2 ತಿಂಗಳಿಗೊಮ್ಮೆ ಬಿಲ್‌ ಪಾವತಿಸಬೇಕಾಗುತ್ತದೆ.

ಮೊಬೈಲ್‌ ಆಪ್‌ನಲ್ಲಿ ಮಾಹಿತಿ: ಗೇಲ್‌ ಇಂಡಿಯಾ ಗ್ಯಾಸ್‌ ಸಂಸ್ಥೆಯು ತನ್ನ ಗ್ರಾಹಕರ ಅನುಕೂಲಕ್ಕಾಗಿ ಮೊಬೈಲ್‌ ಆಪ್‌ ಬಿಡುಗಡೆ ಮಾಡಿದೆ. ಆಪ್‌ನ ಮೂಲಕ ಗ್ರಾಹಕರು ತಾವು ಬಳಕೆ ಮಾಡಿದ ಇಂಧನದ ಪ್ರಮಾಣ ಮತ್ತು ಬಿಲ್‌ ಅನ್ನು ವೀಕ್ಷಿಸಬಹುದಾಗಿದೆ. ಅಲ್ಲದೇ. ತಮ್ಮ ಹತ್ತಿರದ ಸಿಎನ್‌ಜಿ ಸ್ಟೇಶನ್‌ಗಳನ್ನು ಪತ್ತೆ ಮಾಡಬಹುದು. ಸಿಎನ್‌ಜಿ ಮತ್ತು ಪಿಎನ್‌ಜಿ ಬಗ್ಗೆ ಮಾಹಿತಿ ಪಡೆಯುವುದರ ಜತೆಗೆ ತುರ್ತು ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಸೂಚನೆಗಳನ್ನು ಪಡೆಯಬಹುದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?