
ರಾಯಚೂರು: ರಾಯಚೂರು ನ್ಯಾಯಾಲಯದಲ್ಲಿ ನಕ್ಸಲ್ ಹೆಸರಿನಲ್ಲಿ ಕರ ಪತ್ರ ಹಂಚಲಾಗಿದ್ದು, 'ಜೈ ನಕ್ಸಲ್, ಜೈ ನಕ್ಸಲ್' ಎಂಬ ಘೋಷಣೆಗಳೊಂದಿಗೆ ನ್ಯಾಯಾಧೀಶರು ಮತ್ತು ವಕೀಲರು ಭ್ರಷ್ಟರೆಂದು ಆರೋಪಿಸಿದ್ದಾರೆ.
ಎಂ.ಮಹದೇವಯ್ಯ ಹಾಗೂ ಭ್ರಷ್ಟ ವಕೀಲರ ವಿರುದ್ಧ ಪ್ರಜೆಗಳು ಹೋರಾಡಲು ಕರಪತ್ರದಲ್ಲಿ ಕರೆ ನೀಡಲಾಗಿದೆ. ಕೇಸಿಗನುಗುಣವಾಗಿ ನ್ಯಾಯಾಧೀಶರು ಲಕ್ಷ ಲಕ್ಷ ಹಣ ಲಂಚ ಪಡೆಯುತ್ತಿದ್ದಾರೆ. ರಾಯಚೂರಿನ ಪ್ರತಿಯೊಬ್ಬ ರಾಜಕಾರಣಿಯೂ ಇವರಿಗೆ ಆಪ್ತರಾಗಿದ್ದಾರೆ. ಇವರ ತಿಂಗಳ ಆದಾಯ ಸರ್ಕಾರಿ ಸಂಬಳದ 20 ಪಟ್ಟು ಹೆಚ್ಚಿದೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ನ್ಯಾಯಾಧೀಶರೂ ತಮ್ಮ ಬೆನ್ನಿಗೆ ಇದ್ದಾರೆಂದು ಹೇಳಿಕೊಂಡು ಓಡಾಡುತ್ತಿದ್ದಾರೆಂದು ಆರೋಪಿಸಲಾಗಿದೆ.
'ರಾಯಚೂರಿನ ಜನತೆ ಇಂಥ ನ್ಯಾಯಾಧೀಶನ ವಿರುದ್ಧ ಹೋರಾಡಬೇಕಿದೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದಾನೆ. ಇತ್ತೀಚಿನ ಪ್ರಕರಣವೊಂದಲ್ಲಿ ಲಕ್ಷ ಲಕ್ಷ ಹಣ ಪಡೆದು ಜಾಮೀನು ನೀಡಿರುತ್ತಾರೆ. ಯೋಚಿಸಿ ಪ್ರಜೆಗಳೇ ಹೋರಾಟಕ್ಕೆ ಮುನ್ನುಗ್ಗಿ,' ಎಂಬ ಘೋಷಣೆ ಒಳಗೊಂಡ ಕರಪತ್ರ ಕೋರ್ಟ್ ಆವರಣದಲ್ಲಿ ಹಂಚಲಾಗಿದೆ.
ಕರ ಪತ್ರ ಹಂಚಿರುವ ಹಿನ್ನೆಲೆಯಲ್ಲಿ ಇಂದು ಕಾರ್ಯ ಕಲಾಪದಿಂದ ವಕೀಲರು ದೂರ ಉಳಿದಿದ್ದರು. ಆದರೆ, ನ್ಯಾಯಾಧೀಶರ ಮನವಿ ಮೇರೆಗೆ ,ವಕೀಲರ ಸಂಘದ ನಿರ್ಧಾರದಂತೆ ಸಾಮಾನ್ಯರಿಗೆ ತೊಂದರೆ ಆಗಬಾರದೆಂದು ಚು. 20ರಂದು ಕಲಾಪಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ.
ನಕ್ಸಲರ ಆರೋಪ ಸುಳ್ಳು. ನಾವು ಇಂದು ಕಲಾಪದಿಂದ ದೂರ ವಿದ್ದು, ನಾಳೆ ಹಾಜರಾಗುವೆವು.
- ಭಾನುರಾಜ್, ವಕೀಲರ ಸಂಘದ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.