
ನವದೆಹಲಿ[ಸೆ.17]: 370ನೇ ವಿಧಿ ರದ್ದು ಸಂಬಂಧ ಭಾರತದ ವಿರುದ್ಧ ಪಾಕಿಸ್ತಾನ ಕೆಂಡಕಾರುತ್ತಿರುವಾಗಲೇ, ಅದರ ಮಿತ್ರ ದೇಶವಾಗಿರುವ ಚೀನಾದ 7 ಯುದ್ಧ ನೌಕೆಗಳು ಹಿಂದು ಮಹಾಸಾಗರದಲ್ಲಿ ಕಂಡುಬಂದಿವೆ. ಪಿ-8ಐ ಎಂಬ ಬೇಹುಗಾರಿಕಾ ವಿಮಾನ ಹಾಗೂ ಇನ್ನಿತರೆ ಸರ್ವೇಕ್ಷಣಾ ಸಾಧನಗಳನ್ನು ಬಳಸಿಕೊಂಡು ಭಾರತೀಯ ನೌಕಾ ಪಡೆ ಚೀನಿ ಯುದ್ಧ ನೌಕೆಗಳನ್ನು ಸಮುದ್ರದಲ್ಲಿ ಪತ್ತೆ ಮಾಡಿದೆ.
ಚೀನಾದ ಕ್ಸಿಯಾನ್-32 ಎಂಬ ಯುದ್ಧ ನೌಕೆ ದಕ್ಷಿಣ ಹಿಂದು ಮಹಾಸಾಗರ ಮೂಲಕ ಹಾದು ಹೋಗಿ, ಶ್ರೀಲಂಕಾ ಜಲಸೀಮೆಯನ್ನು ಈ ಮಾಸಾರಂಭದಲ್ಲಿ ಪ್ರವೇಶಿಸಿರುವ ದೃಶ್ಯ ಸುದ್ದಿಸಂಸ್ಥೆಯೊಂದಕ್ಕೆ ಲಭ್ಯವಾಗಿದೆ. ಇತರೆ ಯುದ್ಧ ನೌಕೆಗಳ ಬಗ್ಗೆಯೂ ಭಾರತದ ಬೇಹುಗಾರಿಕಾ ವಿಮಾನಗಳು ಕಣ್ಣಿಟ್ಟಿವೆ.
ಯಾವುದೇ ಸಂದರ್ಭದಲ್ಲೂ ಹಿಂದು ಮಹಾಸಾಗರದಲ್ಲಿ ಚೀನಾ 6ರಿಂದ 7 ಯುದ್ಧ ನೌಕೆಗಳು ಇರುವಂತೆ ನೋಡಿಕೊಳ್ಳುತ್ತಿದೆ. ಆ ದೇಶದ ಉದ್ದೇಶ ಹಿಂದು ಮಹಾಸಾಗರ ವಲಯದಲ್ಲಿ ತನ್ನ ಅಧಿಪತ್ಯ ಸ್ಥಾಪಿಸುವುದಾಗಿದೆ ಎಂದು ಹೇಳಲಾಗಿದೆ.
ಸದ್ಯ ಭಾರತದ ಬಳಿ ಒಂದು ಯುದ್ಧ ನೌಕೆ ಮಾತ್ರವೇ ಇದ್ದು, ವಿಕ್ರಮಾದಿತ್ಯ ಈಗಾಗಲೇ ಸೇವೆ ಸಲ್ಲಿಸುತ್ತಿದೆ. ಮತ್ತೊಂದು ಯುದ್ಧ ನೌಕೆ ನಿರ್ಮಾಣ ಹಂತದಲ್ಲಿದೆ. ಮೂರನೆಯ ಯುದ್ಧ ನೌಕೆಯನ್ನು ಹೊಂದಲು ಭಾರತ ಬಯಸುತ್ತಿದೆ. ವರ್ಷದ ಯಾವುದೇ ಸಂದರ್ಭದಲ್ಲಿ ಎರಡು ನೌಕೆಗಳು ಸೇವೆಗೆ ಲಭ್ಯವಿರುವಂತಾಗಬೇಕಾದರೆ ಭಾರತ ಮೂರು ನೌಕೆಗಳನ್ನು ಹೊಂದಿರಬೇಕಾಗುತ್ತದೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.