
ಬೆಂಗಳೂರು : ಹಲವು ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಂಬಲ ಬೆಲೆ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ನೇರವಾಗಿ ರೈತರಿಗೆ ತಲುಪಿಸುವ ಉದ್ದೇಶದಿಂದ ಈ ತಿಂಗಳ ಅಂತ್ಯ ಅಥವಾ ಬರುವ ಆಗಸ್ಟ್ ಮೊದಲ ವಾರದಲ್ಲಿ ರಾಜ್ಯಕ್ಕೆ ಆಗಮಿಸಿ ಭಾಷಣ ಮಾಡಲಿದ್ದಾರೆ.
ಬೆಂಬಲ ಬೆಲೆ ಹೆಚ್ಚಿಸಿರುವ ಸಂಬಂಧ ದೇಶಾದ್ಯಂತ ಸುಮಾರು 20 ಪ್ರಮುಖ ರಾಜ್ಯಗಳಿಗೆ ತೆರಳಿ ರೈತರ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಮೋದಿ ಅವರು ಅದರನ್ವಯ ಕರ್ನಾಟಕಕ್ಕೂ ಭೇಟಿ ನೀಡುವುದು ಖಚಿತವಾಗಿದೆ. ಉತ್ತರ ಕರ್ನಾಟಕದ ಅದರಲ್ಲೂ ಮುಂಬೈ ಕರ್ನಾಟಕದ ಬೆಳಗಾವಿ ಅಥವಾ ಬೇರೊಂದು ಜಿಲ್ಲೆಯಲ್ಲಿ ರೈತ ಸಮಾವೇಶ ಆಯೋಜಿಸಲು ರಾಜ್ಯ ಬಿಜೆಪಿಯ ರೈತ ಮೋರ್ಚಾ ಸಿದ್ಧತೆ ಆರಂಭಿಸಿದೆ.
ಸುಮಾರು ಮೂರ್ನಾಲ್ಕು ಲಕ್ಷ ರೈತರನ್ನು ಸೇರಿಸುವ ಉದ್ದೇಶವನ್ನೂ ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ. ರೈತ ಮೋರ್ಚಾದ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಲಕ್ಷ್ಮಣ ಸವದಿ ಅವರು ಇತ್ತೀಚೆಗಷ್ಟೇ ನೇಮಕ ಗೊಂಡಿರುವುದರಿಂದ ತಮ್ಮ ಬೆಳಗಾವಿ ಜಿಲ್ಲೆಯಲ್ಲಿ ಸಮಾವೇಶ ನಡೆಯಲಿ ಎಂಬ ಭಾವನೆ ಹೊಂದಿದ್ದಾರೆ.
ಈ ತಿಂಗಳ 28ರಂದು ಜಿಲ್ಲೆಯ ಚಿಕ್ಕೋಡಿಯಲ್ಲಿ ಸಮಾವೇಶ ಆಯೋಜಿಸುವ ಸಂಬಂಧ ಪ್ರಧಾನಿ ಕಚೇರಿಗೂ ಸಂಪರ್ಕ ಮಾಡಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರು ಈ ಹಿಂದೆ ಬೆಳಗಾವಿ ಜಿಲ್ಲೆಗೆ ಹಲವು ಬಾರಿ ಆಗಮಿಸಿರುವುದರಿಂದ ಹಾವೇರಿ, ಬಾಗಲಕೋಟೆ ಸೇರಿದಂತೆ ಬೇರೊಂದು ಜಿಲ್ಲೆಯಲ್ಲಿ ಸಮಾವೇಶ ನಡೆಸುವುದು ಉತ್ತಮ ಎಂಬ ಅಭಿಪ್ರಾಯವೂ ಬಂದಿದೆ.
ಹೀಗಾಗಿ, ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇನ್ನೆರಡು ದಿನಗಳಲ್ಲಿ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಸ್ಥಳ ಮತ್ತು ದಿನಾಂಕದ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.