ಐ ಫೋನ್ ಗಿಫ್ಟ್ : ಬಿಗ್ ಟ್ವಿಸ್ಟ್ ಪಡೆದ ವಿವಾದ

By Kannadaprabha NewsFirst Published Jul 20, 2018, 8:14 AM IST
Highlights

ರಾಜ್ಯ ಸಂಸದರಿಗೆ ದುಬಾರಿ ಮೌಲ್ಯದ ಆ್ಯಪಲ್ ಐ ಫೋನ್ ಗಿಫ್ಟ್ ವಿವಾದವು ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ. 

ಬೆಂಗಳೂರು: ರಾಜ್ಯ ಸಂಸದರಿಗೆ ದುಬಾರಿ ಮೌಲ್ಯದ ಆ್ಯಪಲ್ ಐ ಫೋನ್ ಗಿಫ್ಟ್ ವಿವಾದವು ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ. ಐ  ಫೋನನ್ನು ‘ನನ್ನ ಸ್ವಂತ ಹಣದಿಂದ ಕೊಟ್ಟಿದ್ದೇನೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಹೇಳಿಕೊಂಡಿದ್ದರು. ಇದರ ನಡುವೆಯೇ ಕಾವೇರಿ ನೀರಾವರಿ ನಿಗಮದ ವತಿಯಿಂದ ತಲಾ 1 ಲಕ್ಷ ರು. ಮೌಲ್ಯದ ಆ್ಯಪಲ್ ಐ ಫೋನ್ ಹಾಗೂ ಲೆದರ್ ಬ್ಯಾಗ್ 
ಗಿಫ್ಟ್ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕುರಿತು ನಡೆದ ಸಂಸದರ ಸಭೆಯಲ್ಲಿ ಸಂಸದರಿಗೂ ತಲಾ ೧ ಲಕ್ಷ ರು. ಮೌಲ್ಯದ ೬೪ ಜಿಬಿ ಸಾಮರ್ಥ್ಯದ ಐ-ಫೋನ್ ಟೆನ್ ಉಡುಗೊರೆಯಾಗಿ ನೀಡಲಾಗಿದ್ದು, ಈ ಉಡುಗೊರೆಯನ್ನು ತಲುಪಿಸಿದ್ದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ವೊಬ್ಬರು ಎನ್ನಲಾಗಿದೆ. ಹೀಗಾಗಿ ನೀರಾವರಿ ನಿಗಮದ ಮೇಲೆ ಅನುಮಾನ ಹುಟ್ಟಲು ಕಾರಣವಾಗಿದೆ. ಇದು ತೀವ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ‘ರಾಜ್ಯ ಸರ್ಕಾರದಿಂದ ಈ ಉಡುಗೊರೆ ಕೊಟ್ಟಿಲ್ಲ. ಇದು ನನ್ನ ಗಮನಕ್ಕೂ ಬಂದಿಲ್ಲ’ ಎಂದಿದ್ದರು. ಬೆನ್ನಲ್ಲೇ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ‘ನನ್ನ ಸ್ವಂತ ಹಣದಿಂದ ಫೋನ್ ಉಡುಗೊರೆ ನೀಡಲಾಗಿದೆ’ ಎಂದು ಸಮರ್ಥನೆ  ನೀಡಿದ್ದರು. 

ಇತರ ಜಲನಿಗಮದ ಮೇಲೂ ಗುಮಾನಿ: ಮತ್ತೊಂದು ಮೂಲದ ಪ್ರಕಾರ ಐ-ಫೋನ್‌ನ್ನು ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಗೆ ಬರುವ ಕಾವೇರಿ ನೀರಾವರಿ ನಿಗಮ, ಕೃಷ್ಣಾ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮಗಳ ವತಿಯಿಂದ ವಿತರಣೆ ಮಾಡಲಾಗಿದೆ ಎಂಬ ಆರೋಪಿಸಲಾಗುತ್ತಿದ್ದು, ಈ ಆರೋಪಕ್ಕೆ ಪೂರಕವಾಗಿ ಕಾವೇರಿ ನಿಗಮದ ಸದಸ್ಯರು ಹಾಗೂ ನಿಗಮದ ಇಂಜಿನಿ ಯರ್‌ಗಳು ಸಂಸದರಿಗೆ ಐ-ಫೋನ್ ಹಂಚಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ‘ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ಒಬ್ಬರು ನಮ್ಮ ಮನೆಗೆ ಬಂದು ಕಾವೇರಿ ನದಿಗೆ ಸಂಬಂಧಪಟ್ಟ ದಾಖಲೆಗಳಿವೆ ಎಂದು ಹೇಳಿ ಬ್ಯಾಗ್‌ನ್ನು ನೀಡಿದರು. ಅದರಲ್ಲಿ ಫೋನ್ ಕೂಡ ಇದೆ ಎಂದು ಹೇಳಿದ್ದರು’ ಎಂದು ಸಂಸದರೊಬ್ಬರು ತಿಳಿಸಿದ್ದಾರೆ.

click me!