ನಂದನ್‌ ನಿಲೇಕಣಿ ಮಂತ್ರಿ ಮಾಡ್ತೀನಿ ಎಂದು ಕೈ ಕೊಟ್ಟ ರಾಹುಲ್!

By Web DeskFirst Published Jun 6, 2019, 7:34 AM IST
Highlights

ನಂದನ್ ನೀಲೇಕಣಿ ಅವರನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡುವ ಆಶ್ವಾಸನೆ ನೀಡಿ ಕಾಂಗ್ರೆಸ್ ಕೈ ಕೊಟ್ಟಿತ್ತು ಎನ್ನುವ ಅಂಶವೊಂದು ಇದೀಗ ಬೆಳಕಿಗೆ ಬಂದಿದೆ. 

ನವದೆಹಲಿ: ವಿದೇಶಾಂಗ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದ ಎಸ್‌. ಜೈಶಂಕರ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಾಂಗ ಮಂತ್ರಿ ಮಾಡಿದ್ದರ ಬಗ್ಗೆ ದೇಶವೇ ಅಚ್ಚರಿಗೆ ಒಳಗಾಗಿದೆ. ಸರಿಯಾಗಿ 10 ವರ್ಷಗಳ ಹಿಂದೆ ಇಂತಹದ್ದೇ ಮಹಾನ್‌ ಅಚ್ಚರಿಯೊಂದನ್ನು ನೀಡಲು ಹಾಲಿ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ರಾಹುಲ್‌ ಗಾಂಧಿ ಪ್ರಯತ್ನಿಸಿದ್ದರು. ವಿಶಿಷ್ಟಗುರುತಿನ ಸಂಖ್ಯೆ ‘ಆಧಾರ್‌’ ಯೋಜನೆಯ ರೂವಾರಿ, ಬೆಂಗಳೂರು ಮೂಲದ ಇಸ್ಫೋಸಿಸ್‌ ಕಂಪನಿಯ ಸಹಸಂಸ್ಥಾಪಕ ನಂದನ್‌ ನಿಲೇಕಣಿ ಅವರನ್ನು ಮಾನವ ಸಂಪನ್ಮೂಲ ಸಚಿವರನ್ನಾಗಿ ಮಾಡಲು ಮುಂದಾಗಿದ್ದರು. ಆದರೆ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನ ಕಡೆಯ ಕ್ಷಣದಲ್ಲಿ ಅವರ ಹೆಸರನ್ನು ಕಾಂಗ್ರೆಸ್‌ ಕೈಬಿಟ್ಟಿತ್ತು ಎಂಬ ಕುತೂಹಲಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಪತ್ರಕರ್ತೆ ಸೋನಿಯಾ ಸಿಂಗ್‌ ಅವರು ಬರೆದಿರುವ ‘ಡಿಫೈನಿಂಗ್‌ ಇಂಡಿಯಾ ಥ್ರೂ ದೇರ್‌ ಐಯ್‌್ಸ’ ಎಂಬ ಗಣ್ಯ ನಾಯಕರ ಅನುಭವ ಕಥನವಿರುವ ಪುಸ್ತಕದಲ್ಲಿ ಈ ರೋಚಕ ಮಾಹಿತಿ ಇದೆ. ಈ ಬಗ್ಗೆ ಸ್ವತಃ ನಿಲೇಕಣಿ ಅವರು ಈ ರೀತಿ ಹೇಳಿಕೊಂಡಿದ್ದಾರೆ.

ರಾಹುಲ್‌ ಕರೆ ಬಂತು.

2009ರ ಲೋಕಸಭೆ ಚುನಾವಣೆಯ ಫಲಿತಾಂಶದ ದಿನ ರಾಹುಲ್‌ ಗಾಂಧಿ ನನಗೆ ಕರೆ ಮಾಡಿದರು. ದೇಶದ ಮಾನವ ಸಂಪನ್ಮೂಲ ಸಚಿವರಾಗಲು ಆಸಕ್ತಿ ಇದೆಯಾ? ಬೇರೆ ಕ್ಷೇತ್ರದವರು ನಮಗೆ ಬೇಕು ಎಂದು ಹೇಳಿದರು. ಇಸ್ಫೋಸಿಸ್‌ ಕಂಪನಿಯಲ್ಲಿನ ಸಹೋದ್ಯೋಗಿಗಳ ಜತೆ ಈ ಬಗ್ಗೆ ಮಾತನಾಡಿದೆ. ಅವರೆಲ್ಲರೂ ‘ಠೀಕ್‌ ಹೇ ಯಾರ್‌’ ಎಂದು ಹೇಳಿದರು. ಹೀಗಾಗಿ ಹುದ್ದೆ ನಿರ್ವಹಿಸಲು ನಾನು ಸಿದ್ಧ ಎಂದು ರಾಹುಲ್‌ಗೆ ಹೇಳಿದೆ.

ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ದಿನ ನಾನು ಬೆಂಗಳೂರಿನಲ್ಲಿದ್ದೆ. ಅಂತಹ ದಿನ ದೆಹಲಿಯಲ್ಲಿರಬೇಕು, ನಿಮ್ಮ ಹೆಸರು ಕೂಗುವವರೆಗೆ ಕಾಯಬೇಕು ಎಂಬ ರಾಜಕೀಯ ತಂತ್ರಗಳು ನನಗೆ ಗೊತ್ತಿರಲಿಲ್ಲ. ಬೆಳಗ್ಗೆ 11ರ ವೇಳೆಗೆ ನನಗೆ ಕರೆ ಬಂತು. ದೆಹಲಿಯಲ್ಲಿದ್ದೀರಾ ಎಂದು ಕರೆ ಮಾಡಿದವರು ಕೇಳಿದರು. ಇಲ್ಲ, ಬೆಂಗಳೂರಿನಲ್ಲಿದ್ದೇನೆ ಎಂದು ಹೇಳಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭವಿದೆ. ಸಂಜೆ 5ರೊಳಗೆ ದೆಹಲಿಗೆ ಬರಲು ಸಾಧ್ಯವೇ ಎಂದು ಕೇಳಿದರು. ನನ್ನ ಬಳಿ ಸ್ವಂತ ವಿಮಾನ ಇಲ್ಲ ಎಂದು ಹೇಳಿದೆ.

ನಂತರ ದೆಹಲಿಗೆ ಹೋಗುವ ಸಲುವಾಗಿ ವಿಮಾನ ಹುಡುಕಲು ಪರದಾಡಿದೆ. ಎಸ್‌.ಎಂ. ಕೃಷ್ಣ ಅವರು ವಿದೇಶಾಂಗ ಸಚಿವರಾಗಲು ಆಯ್ಕೆಯಾಗಿದ್ದರು. ಅದೇ ಸಮಯದಲ್ಲಿ ಅವರು ಬೆಂಗಳೂರಿನಲ್ಲಿದ್ದರು. ಆದರೆ ಅವರ ಮನೆ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿತ್ತು. ಹೀಗಾಗಿ ಅವರು ಸುಲಭವಾಗಿ ಹೋಗಲು ಸಾಧ್ಯವಿತ್ತು.

ನಾನು ವಿಮಾನಕ್ಕೆ ವ್ಯವಸ್ಥೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ ರಾಹುಲ್‌ರಿಂದ ಕರೆ ಬಂದು. ‘ಕ್ಷಮಿಸಿ, ಆಗುತ್ತಿಲ್ಲ’ ಎಂದು ಹೇಳಿದರು. ಆನಂತರ ನನಗೆ ಅರ್ಥವಾಯಿತು. ನಾನೊಬ್ಬ ಕಾರ್ಪೋರೆಟ್‌ ಕ್ಷೇತ್ರದ ವ್ಯಕ್ತಿ. ಬಡವರು ಹಾಗೂ ಅವರ ಸಮಸ್ಯೆ ನನಗೆ ಅರ್ಥವಾಗುವುದಿಲ್ಲ ಎಂದು ಸೋನಿಯಾಗೆ ಅನ್ನಿಸಿರಬೇಕು. ನಾನು ರಾಜಕಾರಣಿಯಲ್ಲ. ಮಾನವ ಸಂಪನ್ಮೂಲ ಸಚಿವಾಲಯದ ರಾಜಕೀಯವನ್ನು ನನ್ನಿಂದ ನಿರ್ವಹಿಸಲು ಆಗುವುದಿಲ್ಲ ಎಂದು ಡಾ

ಮನಮೋಹನ ಸಿಂಗ್‌ ಅವರೂ ಭಾವಿಸಿರಬೇಕು. ನನ್ನನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳುವುದು ರಾಹುಲ್‌ ಆಲೋಚನೆಯಾಗಿತ್ತು. ಅವರೇ ಕೈಬಿಟ್ಟರು. ಹೀಗಾಗಿ ನಾನು ದೈನಂದಿನ ಕೆಲಸದಲ್ಲಿ ವ್ಯಸ್ತನಾದೆ ಎಂದು ನಿಲೇಕಣಿ ಹೇಳಿಕೊಂಡಿದ್ದಾರೆ.

click me!