ಕಾಂಗ್ರೆಸ್ ಪದಾಧಿಕಾರಿ ಪಟ್ಟಿ ಮತ್ತಷ್ಟು ಉದ್ದ: ಅತೃಪ್ತರ ಸಮಾಧಾನಕ್ಕೆ ಹಲವರಿಗೆ ಅವಕಾಶ

By Suvarna Web DeskFirst Published Jul 17, 2017, 10:10 AM IST
Highlights

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಪದಾಧಿಕಾರಿಗಳ ಪಟ್ಟಿಗೆ ಮತ್ತಷ್ಟು ಹೆಸರು ಸೇರ್ಪಡೆಗೆ ಹಿರಿಯು ಮುಖಂಡರು ತೀವ್ರ ಒತ್ತಡ ಸೃಷ್ಟಿಸುತ್ತಿದ್ದು, ಇದರ ಪರಿಣಾಮ ಜಂಬೋ ಪಟ್ಟಿಯು ಮತ್ತಷ್ಟು ವಿಸ್ತರಣೆಯಾಗುವ ಸಾಧ್ಯತೆಗಳು ದಟ್ಟವಾಗುತ್ತಿವೆ.

ಬೆಂಗಳೂರು(ಜು.17): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಪದಾಧಿಕಾರಿಗಳ ಪಟ್ಟಿಗೆ ಮತ್ತಷ್ಟು ಹೆಸರು ಸೇರ್ಪಡೆಗೆ ಹಿರಿಯು ಮುಖಂಡರು ತೀವ್ರ ಒತ್ತಡ ಸೃಷ್ಟಿಸುತ್ತಿದ್ದು, ಇದರ ಪರಿಣಾಮ ಜಂಬೋ ಪಟ್ಟಿಯು ಮತ್ತಷ್ಟು ವಿಸ್ತರಣೆಯಾಗುವ ಸಾಧ್ಯತೆಗಳು ದಟ್ಟವಾಗುತ್ತಿವೆ.

ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ನಿರ್ಲಕ್ಷಿಸಲ್ಪಟ್ಟ ಕಾರಣಕ್ಕೆ ಭಿನ್ನ ಧ್ವನಿ ಎತ್ತಿರುವವರ ಸಮಾಧಾನಪಡಿಸಲು ಇನ್ನೂ ಹಲವು ಆಕಾಂಕ್ಷಿಗಳಿಗೆ ಪಟ್ಟಿಯಲ್ಲಿ ಅವಕಾಶ ನೀಡಲು ಚಿಂತಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಪಟ್ಟಿಯಷ್ಟು ಉದ್ದವಾದರೂ ಅಚ್ಚರಿಯಿಲ್ಲ ಎಂಬ ಮಾತು ಕೇಳಿ ಬಂದಿದೆ.

ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಬಗ್ಗೆ ಈಗಾಗಲೇ ಕೆ.ಎಚ್. ಮುನಿಯಪ್ಪ ನೇರವಾಗಿ ಆಕ್ಷೇಪ ಎತ್ತಿದ್ದಾರೆ. ಜತೆಗೆ ವಿಧಾನಸಭಾ ಸದಸ್ಯರಿಗಿಂತ ವಿಧಾನಪರಿಷತ್ ಸದಸ್ಯರಿಗೆ ಹೆಚ್ಚಿನ ಮಾನ್ಯತೆ ನೀಡಿರುವ ಬಗ್ಗೆ ಹಲವು ಶಾಸಕರು ಗರಂ ಆಗಿದ್ದಾರೆ ಎನ್ನಲಾಗಿದೆ. ಇದರೆ ಜತೆಗೆ ಮಲ್ಲಿಕಾರ್ಜುನ ಖರ್ಗೆಯಿಂದ ಹಿಡಿದು ಪ್ರತಿಯೊಬ್ಬ ಹಿರಿಯ ಮುಖಂಡರೂ ಚುನಾವಣಾ

ವರ್ಷವಾದ ಕಾರಣ ತಮ್ಮ ಬೆಂಬಲಿಗರಿಗೆ ಹಾಗೂ ಪಕ್ಷಕ್ಕಾಗಿ ದುಡಿಯುವವರಿಗೆ ಸೂಕ್ತ ಸ್ಥಾನ ಮಾನ ದೊರೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಪದಾಧಿಕಾರಿಗಳ ಪಟ್ಟಿಗೆ ಮತ್ತಷ್ಟು ಹೆಸರು ಸೇರ್ಪಡೆಯಾಗುವುದು ಬಹುತೇಕ ನಿಶ್ಚಿತವಾಗಿದೆ ಎನ್ನಲಾಗಿದೆ. ಇನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಸೂಚಿಸಿರುವ 20ಕ್ಕೂ ಹೆಚ್ಚು ಮಂದಿ ಹಾಗೂ ಎಸ್.ಆರ್. ಪಾಟೀಲ್ ಸೂಚಿಸಿರುವ ಸುಮಾರು ಆರು ಮಂದಿಗೆ ಈಗಾಗಲೇ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ದೊರೆತಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಗಳ ಮೇಲೂ ಒತ್ತಡ:

ಮುಖ್ಯಮಂತ್ರಿಗಳ ಆಪ್ತ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಹುದ್ದೆ ಆಕಾಂಕ್ಷಿಯಾಗಿದ್ದ ಎಚ್.ಎಂ. ರೇವಣ್ಣ ಹಾಗೂ ಮಾಜಿ ಮೇಯರ್ ರಾಮಚಂದ್ರಪ್ಪ ಅಂತಹವರು ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಹೀಗಾಗಿ ಕುರುಬ ಸಮುದಾಯದ ಮುಖಂಡರು ರೇವಣ್ಣ ಅವರಿಗೆ ಪಕ್ಷದಲ್ಲಿ ಸೂಕ್ತ ಹುದ್ದೆ ನೀಡಬೇಕು ಎಂದು ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುತ್ತಿದ್ದಾರೆ. ಈಗಾಗಲೇ ಕುರುಬ ಸಮುದಾಯದ ಸಂಘಟಿಸುತ್ತಿದ್ದ ಎಚ್. ವಿಶ್ವನಾಥ್ ಅವರು ಪಕ್ಷ ಬಿಟ್ಟಿದ್ದಾರೆ. ಹೀಗಾಗಿ ಸಮುದಾಯದೊಂದಿಗೆ ನೇರ ಸಂಪರ್ಕ ಹೊಂದಿರುವ ರೇವಣ್ಣ ಅವರಿಗೆ ಸೂಕ್ತ ಸ್ಥಾನ ಮಾನ ನೀಡಬೇಕು ಎಂಬ ಒತ್ತಡ ಹೆಚ್ಚಾಗಿದೆ.

ಪ್ರಸ್ತುತ ಕೆಪಿಸಿಸಿಗೆ 171 ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆದರೆ, ಎಲ್ಲಾ ವಿಭಾಗ ಹಾಗೂ ಸಮುದಾಯಗಳಿಗೂ ಸಮಾನ ಅವಕಾಶ ನೀಡಿಲ್ಲ ಎಂದು ಪ್ರಮುಖ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

click me!