
ಬೆಂಗಳೂರು : ಇತ್ತೀಚೆಗೆ ಉದ್ಯಮಿ ಪುತ್ರ ವಿದ್ವತ್ ಮೇಲೆ ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಆತನ ಸಹಚರರು ನಡೆಸಿದ ಹಲ್ಲೆ ಪ್ರಕರಣದ ಬಿಸಿ ಈಗ ಲೋಕೋಪಯೋಗಿ ಇಲಾಖೆಯ ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರನಿಗೂ ತಟ್ಟಿದೆ.
ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಸಿಸಿಬಿ ತನಿಖಾಧಿಕಾರಿ ಅಶ್ವತ್ ಗೌಡ ಅವರ ಮುಂದೆ ಮಂಗಳವಾರ ಸಚಿವರ ಪುತ್ರ ಸುನೀಲ್ ಬೋಸ್ ಹಾಜರಾಗಿದ್ದು, ಸತತ ಮೂರು ತಾಸಿಗೂ ಅಧಿಕ ಹೊತ್ತು ಅವರನ್ನು ತನಿಖಾಧಿಕಾರಿಗಳು ಪ್ರಶ್ನಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ವಿದ್ವತ್ ಮೇಲಿನ ಹಲ್ಲೆಗೂ ತನಗೂ ಯಾವುದೇ ಸಂಬಂಧವಿಲ್ಲ. ಆ ದಿನ ನನ್ನ ಕೆಲ ಸ್ನೇಹಿತರ ಜತೆ ಊಟಕ್ಕೆ ಹೋಗಿದ್ದೆ. ಗಲಾಟೆ ಬಳಿಕ ಅಲ್ಲಿಂದ ನಾವು ಹೊರಟು ಬಂದಿದ್ದೆವು ಎಂದು ಬೋಸ್ ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆ ಹಿನ್ನೆಲೆಯಲ್ಲಿ ಬೋಸ್ ಅವರನ್ನು ಪ್ರಕರಣದ ಸಾಕ್ಷಿಯಾಗಿ ಪರಿಗಣಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಘಟನೆ ನಡೆದಿದ್ದ ಫರ್ಜಿ ಕೆಫೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಯಿತು. ಅದರಲ್ಲಿ ಕೃತ್ಯ ನಡೆದ ದಿನ ಸಚಿವರ ಪುತ್ರ ಸುನೀಲ್ ಬೋಸ್ ಅವರು ಸಹ ಕೆಫೆಯಲ್ಲಿ ಉಪಸ್ಥಿತರಿದ್ದ ದೃಶ್ಯಾವಳಿಗಳು ಪತ್ತೆಯಾದವು. ಹೀಗಾಗಿ ಘಟನೆ ಕುರಿತು ಅವರನ್ನು ಕರೆಸಿ ಹೇಳಿಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟುಗಣ್ಯರ ಮಕ್ಕಳಿಗೆ ತನಿಖೆ ಬಿಸಿ:
ಲೋಕೋಪಯೋಗಿ ಸಚಿವರ ಬಳಿಕ ಮತ್ತಷ್ಟುಗಣ್ಯರ ಮಕ್ಕಳಿಗೂ ಸಿಸಿಬಿ ತನಿಖೆ ಬಿಸಿ ತಟ್ಟಲಿದ್ದು, ಇದರಲ್ಲಿ ಪ್ರಮುಖವಾಗಿ ಸಂಸದ ಪಿ.ಸಿ.ಮೋಹನ್, ಶಾಸಕ ಆರ್.ವಿ.ದೇವರಾಜ್, ಹಿರಿಯ ನಟ, ಮಾಜಿ ಸಚಿವ ಅಂಬರೀಷ್ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಪುತ್ರರು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ನಡೆದ ವೇಳೆ ಇವರೆಲ್ಲ ಫರ್ಜಿ ಕೆಫೆಯಲ್ಲಿ ಇದ್ದರು ಎನ್ನಲಾಗುತ್ತಿದೆ.
ಫೆ.17ರಂದು ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಉದ್ಯಮಿ ಲೋಕನಾಥನ್ ಪುತ್ರ ವಿದ್ವತ್ ಮೇಲೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹಾಗೂ ಆತನ ಬೆಂಬಲಿಗರು ಗೂಂಡಾಗಿರಿ ನಡೆಸಿದ್ದರು. ಈ ಪ್ರಕರಣದಲ್ಲಿ ಜಾಮೀನು ಸಿಗದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆರೋಪಿಗಳು ಬಂಧನದಲ್ಲಿದ್ದಾರೆ. ಪ್ರಕರಣದ ತನಿಖೆಯನ್ನು ಸಿಸಿಬಿ ಚುರುಕಿನಿಂದ ಮುಂದುವರೆಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.