
ಬೆಂಗಳೂರು[ಆ.12] ಸಭಾಂಗಂಣದಲ್ಲಿ ಕುಳಿತುಕೊಳ್ಳಲು ಜಾಗವಿಲ್ಲ ಅದಕ್ಕೆ ಕಾರಣ ಪ್ರಾಣೇಶ್.. ಗಂಗಾವತಿ ಪ್ರಾಣೇಶ್.. ಪ್ರಾಣೇಶ್ ವಿರಚಿತ ಪುಸ್ತಕ ಬಿಡುಗಡೆಗೆ ಸಹೃದಯರು ಒಂದೆಡೆ ಸೇರಿದ್ದರು. ಪ್ರಾಣೇಶ್ ಹಾಸ್ಯ ಪ್ರಸಂಗಳನ್ನು ಮತ್ತೆ ಸವಿಯಲು ಕಾಯುತ್ತಲೇ ಇದ್ದರು.
ಸಾವಣ್ಣ ಪ್ರಕಾಶನದಲ್ಲಿ ಮೂಡಿಬಂದಿರುವ ‘ನಕ್ಕಾಂವ ಗೆದ್ದಾಂವ' ಪುಸ್ತಕ ಲೋಕಾರ್ಪಣೆಯಾಗಿತ್ತು. ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ನಟ ನೆನಪಿರಲಿ ಪ್ರೇಮ್ ಪ್ರಾಣೇಶರ ಪುಸ್ತಕ ಅನಾವರಣ ವೇದಿಕೆಯಲ್ಲಿದ್ದರು. "ಥಟ್ ಅಂಥ ಹೇಳಿ" ಖ್ಯಾತಿಯ ಸೋಮೇಶ್ವರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
‘ನಕ್ಕಾಂವ ಗೆದ್ದಾಂವ'-ದಾಖಲೆಯಾಗುವಂತಹ ಲೇಖನಗಳನ್ನು ಒಳಗೊಂಡ ಪುಸ್ತಕ ಇದಲ್ಲ, ಇದನ್ನು ಕೊಂಡು ಓದಿದರೆ ನಮ್ಮ ಕನ್ನಡಿಗರು ಮಾರಾಟದಲ್ಲಾದರೂ ದಾಖಲೆ ಸ್ಥಾಪಿಸಿಕೊಡಲಿ ಎಂಬುದು ಪ್ರಾಣೇಶರ ವಿನಂತಿ. 30 ವಿಭಿನ್ನ ಅಂಕಣಗಳನ್ನು ಒಳಗೊಂಡ ಪುಸ್ತಕವೇ ‘ನಕ್ಕಾಂವ ಗೆದ್ದಾಂವ'.. ಇಲ್ಲಿ ನಗೆ ಬುಗ್ಗೆಯಿದೆ, ಜತೆಗೆ ಪರಿಸರ ಕಾಳಜಿಯಿದೆ.. ಒಮ್ಮೆಮ್ಮೆ ಕಣ್ಣಲ್ಲಿ ನೀರು ತರಿಸುವ ಭಾವನೆಗಳು ಇವೆ.
ಕನ್ನಡಿಗರನ್ನು ನೆನೆಸಿಕೊಂಡ ಪ್ರಾಣೇಶ್ ಒಂದು ಧನ್ಯವಾದ ಹೇಳುತ್ತಾ ಬರವಣಿಗೆಯ ಹಿಂದಿನ ಶಕ್ತಿ ಓದು.. ಓದು.. ಹೆಚ್ಚು ಹೆಚ್ಚು ಓದಿದರೆ ಉತ್ತಮವಾಗಿ ಬರೆಯಲು ಸಾಧ್ಯ ಎಂದು ಓದಿನ ಮಹತ್ವ ಮತ್ತೆ ಒತ್ತಿ ಹೇಳಿದರು. ಪ್ರಾಣೇಶರೊಂದಿಗಿನ ಬಾಂಧವ್ಯ ಮೆಲುಕು ಹಾಕಿದ ವಿಶ್ವೇಶ್ವರ ಭಟ್, ಪ್ರಾಣೇಶ್ ಯಾವ ಸೂಪರ್ ಸ್ಟಾರ್ ಗೂ ಕಮ್ಮಿ ಇಲ್ಲ. ಜನ ಸೇರಿದ್ದಾರೆ ಅಂದರೆ ಅಲ್ಲಿ ಪ್ರಾಣೇಶ್ ಇದ್ದಾರೆ ಎಂದರ್ಥ ಎಂದು ಬಣ್ಣಿಸಿದರು.
ಪುಸ್ತಕಗಳ ಒಳ-ಹೊರಗನ್ನು ತೆರೆದಿಟ್ಟ ಜೋಗಿ. ಯಾವ ಕಾರಣಕ್ಕೆ ಪುಸ್ತಕ ಓದಬೇಕು.. ಪ್ರಾಣೇಶ್ ಸವೆಸಿದ ಹಾದಿ ಮತ್ತು ಹಾಸ್ಯ ಲೋಕದ ಇಂದಿನ ನೈಜತೆಗಳ ಬಗ್ಗೆ ಮಾತನಾಡಿದರು. ಬರೆಯುವುದೇ ಗೊತ್ತಿಲ್ಲ ಎಂದು ಕೊಂಡಿದ್ದ ನನ್ನ ಬಳಿಯೂ ಬರೆಯಲು ಸಾಧ್ಯವಿದೆ ಅಂಥ ನಿರೂಪಿಸಿದ್ದು ಪ್ರಾಣೇಶ್ ಎಂದು ಪ್ರೇಮ್ ನೆನಪು ಮಾಡಿಕೊಂಡರು.
ಸಹೃದಯರ ಒಕ್ಕೂಟಕ್ಕೆ ಒಂದು ಸಂದೇಶ, ಒಂದಿಷ್ಟು ನಗು, ಒಂದಿಷ್ಟು ಚಿಂತನೆ, ಒಂದಿಷ್ಟು ಕನ್ನಡ ಅಭಿಮಾನ ಹಂಚುವುದಕ್ಕೆ ಭಾನುವಾರದ ಬೆಳಗಿನ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ವೇದಿಕೆಯಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.