
ಬೆಂಗಳೂರು(ಎ.19): ನಾಗ ಅಲಿಯಾಸ್ ನಾಗರಾಜನ ಕಣ್ಣಾ- ಮುಚ್ಚಾಲೆ ಆಟ ಆರಂಭವಾಗಿದೆ. ಪೊಲೀಸರ ಕೈಗೆ ಸಿಗದೇ ತಿರುಗಾಡುತ್ತಿರುವ ನಾಗರಾಜ, ಸದ್ದಿಲ್ಲದೇ ನ್ಯಾಯಾಲಯಕ್ಕೆ ನಿರೀಕ್ಷಣಾ ಅರ್ಜಿ ಸಲ್ಲಿಸಿದ್ದಾನೆ. ನಾಗ ಜಾಮೀನು ಅರ್ಜಿಯಲ್ಲಿ ತನ್ನ ಬಗ್ಗೆ ಹೇಳಿಕೊಂಡಿರುವ ಸಮರ್ಥನೆಗಳು ಸುವರ್ಣನ್ಯೂಸ್ಗೆ ಲಭ್ಯವಾಗಿವೆ.
ಪೊಲೀಸರಿಗೀಗ ನಾಗ ಅಲಿಯಾಸ್ ನಾಗರಾಜನದ್ದೇ ಚಿಂತೆ. ಮೂರ್ನಾಲ್ಕು ದಿನಗಳಿಂದ ನಾಗನಿಗಾಗಿ ಪೊಲೀಸರು ಹುಡುಕಾಟ ನಡೆಸ್ತಾನೇ ಇದ್ರೂ ನಾಗನ ಸುಳಿವು ಮಾತ್ರ ಸಿಕ್ಕಿಲ್ಲ. ಪೊಲೀಸರ ಹುಡುಕಾಟದ ನಡುವೆಯೇ ನಾಗ ಸೈಲೆಂಟಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.
ಹನ್ನೊಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಜಾಮೀನು ಪಡೆಯಲು ನಾಗ ನೀಡಿರುವ ಕಾರಣಗಳನ್ನು ನೋಡಿದ್ರೆ ಒಂದು ಕ್ಷಣ ಹುಬ್ಬೇರಿಸುತ್ತೀರಿ. ಯಾಕೆಂದರೆ ನಾಗ ನೀಡಿರುವ ಕಾರಣಗಳು ಕುತೂಹಲಕಾರಿಯಾಗಿವೆ. ಆತ ನೀಡಿರುವ ಕಾರಣಗಳು ಹೀಗಿವೆ.
1) ನಾನು ಈ ಪ್ರಕರಣದಲ್ಲಿ ಭಾಗಿಯಾಗಿರುವುದಿಲ್ಲ .
2) ದೂರಿನ ಪ್ರಕಾರ ಘಟನೆ ನಡೆದಿರುವುದು ಶ್ರೀರಾಮಪುರದಲ್ಲಿ. ಹೆಣ್ಣೂರು ಠಾಣೆಗೂ ಈ ಪ್ರಕರಣಕ್ಕೂ ಸಂಬಂಧವಿರುವುದಿಲ್ಲ.
3) ನಾನು ಹಲವು ವರ್ಷಗಳಿಂದ ಸಕ್ರಿಯವಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದೇನೆ.
4) ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿಲ್ಲ.
5) ದೂರು ಕೊಟ್ಟ ವ್ಯಕ್ತಿ ಯಾರೆಂಬುದೇ ನನಗೆ ಗೊತ್ತಿಲ್ಲ.
6) ದೂರಿನಲ್ಲಿ ದಾಖಲಾಗಿರುವ ಘಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ
7) ದೂರುದಾರ ಈಗಾಗಲೇ ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾದ ವ್ಯಕ್ತಿ
8) ಅಂಥವನ ದೂರಿನ ಆಧಾರದ ಮೇಲೆ ನನಗೆ ಕಿರುಕುಳ ಕೊಡುವುದು ಸರಿಯೇ..?
9) ನಾನು ಆರ್ಥಿಕವಾಗಿ ಸಬಲನಾಗಿದ್ದು, ಸಮಾಜ ವಿರೋಧಿ ಚಟುವಟಿಕೆಗಳಿಂದ ಹಣಗಳಿಸುವ ಉದ್ದೇಶ ಹೊಂದಿಲ್ಲ.
ಸದ್ಯ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ನಾಗ ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದಾನೆ. ಅಷ್ಟರಲ್ಲಿ ಪೊಲೀಸರು ನಾಗನನ್ನು ಬಂಧಿಸುತ್ತಾರಾ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.