
ಮೈಸೂರು(ಆ.27): ಸಣ್ಣ ಸಣ್ಣ ಸಂಸ್ಥಾನಗಳು ಬ್ರಿಟಿಷರೊಂದಿಗೆ ರಾಜಿ ಮಾಡಿಕೊಳ್ಳದೆ ಹೋರಾಡಿದ್ದು ಸ್ಮರಣೀಯ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ವೀರವನಿತೆ ರಾಣಿ ಚೆನ್ನಮ್ಮ ಸ್ವಯಂ ಸೇವಾ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ದೊಡ್ಡ ದೊಡ್ಡ ಸಂಸ್ಥಾನಗಳು ತಮ್ಮ ಸಾಮ್ರಾಜ್ಯ ಕಳೆದುಕೊಳ್ಳುವ ಭೀತಿಯಿಂದ ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡರು. ಆದರೆ ಸಣ್ಣ ಸಣ್ಣ ಪುಟ್ಟ ಸಂಸ್ಥಾನಗಳು ಬ್ರಿಟಿಷರ ವಿರುದ್ಧ ಹೋರಾಡಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರ ಅವಿಸ್ಮರಣೀಯ. ಆದರೆ ಇತಿಹಾಸ ಅವರನ್ನು ಸರಿಯಾಗಿ ಗುರುತಿಸಿಲ್ಲ. ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವು ಮಂದಿ ವನಿತೆಯರು ಈ ನಾಡಿಗಾಗಿ ಜೀವವನ್ನೇ ಅರ್ಪಿಸಿದ್ದಾರೆ. ಈ ಬಗ್ಗೆ ಸಂಶೋಧನಾ ಪ್ರಬಂಧಗಳು ಮಂಡನೆ ಆಗಬೇಕು ಎಂದು ಹೇಳಿದರು.
ವಿಶ್ವದ ಗಮನ:
ಸುತ್ತೂರು ಮಠದ ಇಂದು ವಿಶ್ವದ ಗಮನ ಸೆಳೆದಿದೆ. ಇಂಥ ಮಠದ ಮಾರ್ಗದರ್ಶನದಲ್ಲಿ ವೀರ ವನಿತೆ ರಾಣಿ ಚೆನ್ನಮ್ಮ ಸ್ವಯಂ ಸೇವಾ ಸಂಘ ಪ್ರಾರಂಭಿಸಿರುವುದು ಶ್ಲಾಘನೀಯ. ಸಮಾಜದ ಪರವಾಗಿ ಕೆಲಸ ಮಾಡುವ ಸಂಸ್ಥೆಯನ್ನು ಜನರು ಮರೆಯುವಂತಿಲ್ಲ. ಸಾರ್ವಜನಿಕರ ಕಷ್ಟಕ್ಕೆ ಸಾಮಾಜಿಕ ಸೇವೆಯ ಮೂಲಕ ಸ್ಪಂದಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಅಧಿಕಾರಕ್ಕೆ ಬರುವುದಕ್ಕಾಗಿ ರಾಜಕಾರಣಿಗಳು ಸಂಘ, ಸಂಸ್ಥೆಗಳನ್ನು ಹುಟ್ಟುಹಾಕುತ್ತಾರೆ. ಆದರೆ ಸಂಘಕ್ಕೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಸಮಾಜ ಸೇವೆಯನ್ನೇ ತನ್ನ ಗುರಿಯಾಗಿಸಿಕೊಂಡಿರುವುದು ಶ್ಲಾಘನೀಯ ಎಂದು ಅವರು ತಿಲಿಸಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ, ವಚನಾನಂದ ಸ್ವಾಮಿ, ಶಾಸಕಿ ಡಾ. ಗೀತಾ ಮಹದೇವಪ್ರಸಾದ್, ಮೈಸೂರು ವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಇಂದುಮತಿ, ಸಂಘದ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ಉಪಾಧ್ಯಕ್ಷ ಎ.ಪಿ. ವಿರೂಪಾಕ್ಷ, ಪ್ರಧಾನ ಕಾರ್ಯದರ್ಶಿ ಕೆ. ವಸಂತಕುಮಾರ್, ಕಾರ್ಯದರ್ಶಿ ಎನ್.ಜಿ. ಗಿರೀಶ್, ಪ್ರಧಾನ ಸಂಚಾಲಕ ಎಸ್. ಶಿವಮೂರ್ತಿ ಕಾನ್ಯ, ಕಾನೂನು ಸಲಹೆಗಾರ ಕೆ.ಎಸ್. ಮಹದೇವಪ್ರಸಾದ್, ಖಜಾಂಚಿ ಎಲ್.ವಿ. ಲೋಕೇಶ್‌ಕುಮಾರ್ ಇದ್ದರು.
(ಸಾಂದರ್ಭಿಕ ಚಿತ್ರ)
--
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.