ಹ್ಯಾಂಗೋವರ್‌ ತಪ್ಪಿಸಲು ಮೈಸೂರು ಮದ್ದು!: ದಕ್ಷಿಣ ಏಷ್ಯಾ, ಬ್ರಿಟನ್‌ನಿಂದ ಭಾರಿ ಬೇಡಿಕೆ

By Web DeskFirst Published Mar 31, 2019, 8:23 AM IST
Highlights

ಹ್ಯಾಂಗೋವರ್‌ ತಪ್ಪಿಸಲು ಮೈಸೂರು ಮದ್ದು!| ಸಿಎಫ್‌ಟಿಆರ್‌ಐನಿಂದ ಹೊಸ ಉತ್ಪನ್ನ ಶೋಧ| ದಕ್ಷಿಣ ಏಷ್ಯಾ, ಬ್ರಿಟನ್‌ನಿಂದ ಭಾರಿ ಬೇಡಿಕೆ

ಭಾನುವಾರದ ರಜೆ ಎಂದು ರಾತ್ರಿ ಪೂರ್ತಿ ‘ಎಣ್ಣೆ ಪಾರ್ಟಿ’ ಮಾಡಿ ಸೋಮವಾರ ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮದ್ಯ ಪ್ರಿಯರಿಗೆ ‘ಹ್ಯಾಂಗೋವರ್‌’ ಬಹುವಾಗಿ ಕಾಡುವುದುಂಟು. ಹಾಸಿಗೆ ಬಿಟ್ಟು ಮೇಲೇಳಲು, ಹಿಡಿದ ಕೆಲಸ ಏಕಾಗ್ರತೆಯಿಂದ ಮಾಡಲು ಹ್ಯಾಂಗೋವರ್‌ ಅಡ್ಡಿಯಾಗಿ ಕಾಡುವುದುಂಟು. ಇಂಥ ಹ್ಯಾಂಗೋವರ್‌ ಸಮಸ್ಯೆ ನೀಗಿಸಲೆಂದೇ ಮೈಸೂರಿನ ಸಿಎಫ್‌ಟಿಆರ್‌ಐ ವಿಜ್ಞಾನಿಗಳು ಹೊಸ ನೈಸರ್ಗಿಕ ಉತ್ಪನ್ನವೊಂದನ್ನು ಆವಿಷ್ಕರಿಸಿದ್ದಾರೆ. ಅದೇ ‘ಎ-ಹ್ಯಾಂಗೋ’ ಪುಡಿ!

ಮಹಿಳೆಯರಿಗೆ ಸೆಕ್ಸ್‌ಗಿಂತ ಬೇರೇನು ಇಷ್ಟ?

ಇಷ್ಟುದಿನಗಳ ಕಾಲ ಸಾಮಾನ್ಯವಾಗಿ ಮದ್ಯಪಾನಿಗಳು ಹ್ಯಾಂಗೋವರ್‌ ತಪ್ಪಿಸಲು ಕೆಲ ಕ್ಯಾಪ್ಸೂಲ್‌ಗಳ ಮೊರೆ ಹೋಗುತ್ತಿದ್ದರು. ಆದರೆ, ಈಗ ಸಿಎಫ್‌ಟಿಆರ್‌ಐ ವಿಜ್ಞಾನಿಗಳು ಸಂಶೋಧಿಸಿರುವ ‘ಎ​-ಹ್ಯಾಂಗೋ’ ಪುಡಿ ರಾಸಾಯನಿಕ ರಹಿತ, ಸಂಪೂರ್ಣವಾಗಿ ಆಹಾರ ಉತ್ಪನ್ನಗಳಿಂದಲೇ ಸಿದ್ಧಪಡಿಸಿದ ಉತ್ಪನ್ನವಾಗಿದೆ. ವಿಶೇಷವೆಂದರೆ ಮದ್ಯ ಸೇವಿಸುವಾಗ ನಂಜಿಕೊಳ್ಳಲು ಬಳಸುವ ಚಿಫ್ಸ್‌, ಮಿಕ್ಸ್‌ಚರ್‌ ಇತ್ಯಾದಿ ಪದಾರ್ಥಗಳ ಜತೆಗೆ 5 ಮಿಲಿ ಗ್ರಾಂ. ಇರುವ ‘ಎ- ಹ್ಯಾಂಗೋ’ ಪುಡಿಯನ್ನು ಉದುರಿಸಿ ಸೇವಿಸಿದರೆ ಸಾಕು ಹ್ಯಾಂಗೋವರ್‌ನಿಂದ ಮುಕ್ತಿ ಪಡೆಯಬಹುದು.

ಕುಡಿತವೊಂದು ರೋಗಿ, ಇದಕ್ಕಿದೆ ಮದ್ದು

ಸಿಎಫ್‌ಟಿಆರ್‌ಐ ವಿಜ್ಞಾನಿ ಡಾ.ಅವಿನಾಶ್‌ ಪ್ರಹ್ಲಾದ್‌ ಸತ್ತೂರ್‌ ಈ ಉತ್ಪನ್ನ ಆವಿಷ್ಕರಿಸಿದ್ದಾರೆ. ಸಾಮಾನ್ಯವಾಗಿ ಹೆಚ್ಚು ಮದ್ಯ ಸೇವಿಸುವ 110 ಮಂದಿಯನ್ನು ಆಯ್ಕೆ ಮಾಡಿ ಅವರಿಗೆ ‘ಎ-ಹ್ಯಾಂಗೋ’ ಉತ್ಪನ್ನ ಬಳಸಲು ನೀಡಿದ್ದರು. ಶೇ.92 ರಷ್ಟುಮಂದಿಯಿಂದ ಶೇ.80ರಷ್ಟುಹ್ಯಾಂಗೋವರ್‌ ತಪ್ಪಿತೆಂಬ ಉತ್ತರ ಬಂತು. ಇದೀಗ ಈ ಉತ್ಪನ್ನಕ್ಕೆ ಪೇಟೆಂಟ್‌ ಪಡೆಯಲಾಗಿದ್ದು, ಬೆಂಗಳೂರು ಮೂಲದ ಪ್ರಾರ್ಸ್‌ ಬಯೋಸೈನ್ಸ್‌ ಸಂಸ್ಥೆಯವರು ಸಿಎಫ್‌ಟಿಆರ್‌ಐನೊಂದಿಗೆ ಒಡಂಡಿಕೆ ಮಾಡಿಕೊಂಡು ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದ್ದಾರೆ.

ದಕ್ಷಿಣ ಏಷ್ಯಾ, ಬ್ರಿಟನ್‌ನಿಂದ ಭಾರಿ ಬೇಡಿಕೆ

ಸಿಎಫ್‌ಟಿಆರ್‌ಐ ‘ಎ- ಹ್ಯಾಂಗೋ’ ಉತ್ಪನ್ನದ ಬಗ್ಗೆ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸುತ್ತಿದ್ದಂತೆ ಹೊರ ದೇಶಗಳಿಂದ ಭಾರೀ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಆದಾಗ್ಯೂ ಸಿಎಫ್‌ಟಿಆರ್‌ಐ ವಿಜ್ಞಾನಿಗಳು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಮಾತ್ರ ಈ ಉತ್ಪನ್ನದ ಸ್ಯಾಂಪಲ್‌ ನೀಡಿದ ಪರಿಣಾಮ ವಿಯೆಟ್ನಾಂ ದೇಶದ ಮದ್ಯಪಾನಿಗಳು ‘ಎ- ಹ್ಯಾಂಗೋ’ನ ಫಲಿತಾಂಶಕ್ಕೆ ಮನಸೋತು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಅಲ್ಲದೆ, ಬ್ರಿಟನ್‌ನಿಂದಲೂ ಒಳ್ಳೆಯ ಪ್ರತಿಕ್ರಿಯೆ ಬಂದಿದೆ ಎನ್ನುತ್ತಾರೆ ವಿಜ್ಞಾನಿ ಅವಿನಾಶ್‌ ಪ್ರಹ್ಲಾದ ಸತ್ತೂರ್‌.

-ಉತ್ತನಹಳ್ಳಿ ಮಹದೇವ, ಕನ್ನಡಪ್ರಭ

click me!