ತ್ರಿವಳಿ ತಲಾಖ್‌ ಮಸೂದೆ ಅಂಗೀಕಾರ ಸಂಭ್ರಮಿಸಿದ ಪತ್ನಿಗೆ ತಲಾಖ್‌ ಕೊಟ್ಟ ಪತಿ!

By Web DeskFirst Published Aug 5, 2019, 9:06 AM IST
Highlights

ತ್ರಿವಳಿ ತಲಾಖ್‌ ಮಸೂದೆ ಅಂಗೀಕಾರ ಸಂಭ್ರಮಿಸಿದ ಪತ್ನಿಗೆ ತಲಾಖ್‌ ಕೊಟ್ಟ ಪತಿ| ಪತಿ ವಿರುದ್ಧ ಠಾಣೆ ಮೆಟ್ಟಿಲೇರಿದ ಮಹಿಳೆ| ಉತ್ತರಪ್ರದೇಶದ ಜಗ್ನಿ ಗ್ರಾಮದಲ್ಲಿ ಘಟನೆ

ಬಂದಾ[ಆ.05]: ಮೂರು ಬಾರಿ ತಲಾಖ್‌ ಹೇಳುವ ಮುಸಲ್ಮಾನರ ಪದ್ಧತಿ ‘ತಲಾಖ್‌ ಎ ಬಿದ್ದತ್‌’ ಕಾನೂನು ಬಾಹಿರ ಎಂದು ಪರಿಗಣಿಸುವ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಳ್ಳಲಾದ ಸುದ್ದಿ ತಿಳಿದು ಸಂಭ್ರಮಿಸಿದ ಪತ್ನಿಯ ವಿರುದ್ಧ ಸಿಟ್ಟಾದ ವ್ಯಕ್ತಿಯೊಬ್ಬ ಪೋಷಕರ ಎದುರಲ್ಲೇ ಮೂರು ಬಾರಿ ತಲಾಖ್‌ ಎಂದು ಹೇಳಿ ವಿಚ್ಛೇದನ ನೀಡಿದ ಪ್ರಸಂಗ ಉತ್ತರ ಪ್ರದೇಶದ ಫತೇಪುರದಲ್ಲಿ ನಡೆದಿದೆ.

ಫತೇಪುರದ ಬಿಂದ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಜಿಗ್ನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮುಫೀದಾ ಖತುನ್‌ ಎಂಬಾಕೆ ಈಗ ಪತಿ ಶಂಶುದ್ದೀನ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ‘ಪತಿ ಶಂಶುದ್ದೀನ್‌ ಪೋಷಕರ ಎದುರಲ್ಲಿ ಮೂರು ಬಾರಿ ತಲಾಖ್‌ ಎಂದು ಕಾನೂನು ಬಾಹಿರವಾದ ಪದ್ಧತಿ ಮೂಲಕ ವಿಚ್ಛೇದನಕ್ಕೆ ಮುಂದಾಗಿದ್ದಾನೆ.

ಈ ಪದ್ಧತಿ ವಿರುದ್ಧ ರಾಜ್ಯಸಭೆಯಲ್ಲಿ ಮಸೂದೆ ಪಾಸ್‌ ಆಗಿದ್ದಕ್ಕೆ ನಾನು ಸಂಭ್ರಮಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದ್ದಾನೆ’ ಎಂದು ಮುಫೀದಾ ದೂರು ದಾಖಲಿಸಿದ್ದಾಳೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಬಿಂದ್ಕಿ ಠಾಣಾ ಪೊಲೀಸ್‌ ಅಧಿಕಾರಿ ಅಭಿಷೇಕ್‌ ತಿವಾರಿ ತಿಳಿಸಿದ್ದಾರೆ.

click me!