ಐಟಿ ಅಧಿಕಾರಿಗಳ ಹತ್ಯೆಗೆ ರಾಜಕಾರಣಿಗಳ ಸಂಚು

First Published May 14, 2018, 8:38 AM IST
Highlights

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಕಾರ್ಯಾಚರಣೆ ನಡೆಸಿದ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳಿಗೆ ಜೀವ ಬೆದರಿಕೆ ಒಡ್ಡಲು ರಾಜಕೀಯ ಪಕ್ಷಗಳು ಮುಂದಾಗಿವೆ ಎಂಬ ಮಾಹಿತಿ ಸ್ಫೋಟಗೊಂಡಿದ್ದು, ಸಂಚಲನ ಉಂಟುಮಾಡಿದೆ.

ಬೆಂಗಳೂರು (ಮೇ 14) : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಕಾರ್ಯಾಚರಣೆ ನಡೆಸಿದ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳಿಗೆ ಜೀವ ಬೆದರಿಕೆ ಒಡ್ಡಲು ರಾಜಕೀಯ ಪಕ್ಷಗಳು ಮುಂದಾಗಿವೆ ಎಂಬ ಮಾಹಿತಿ ಸ್ಫೋಟಗೊಂಡಿದ್ದು, ಸಂಚಲನ ಉಂಟುಮಾಡಿದೆ.

‘ಚುನಾವಣಾ ಕಣದಲ್ಲಿರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಐಟಿ ಅಧಿಕಾ ರಿಗಳಿಗೆ ಬೆದರಿಕೆ ಹಾಕಲು ಮುಂದಾಗಿರುವ ಮಾಹಿತಿ ಗುಪ್ತಚರ ಮೂಲಗಳಿಂದ ಲಭ್ಯವಾಗಿದ್ದು, ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಐಟಿ ಇಲಾಖೆಯ ತನಿಖಾ ವಿಭಾಗದ ಮುಖ್ಯಸ್ಥ ಬಿ.ಆರ್. ಬಾಲಕೃಷ್ಣನ್ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮತದಾನಕ್ಕೂ ಒಂದು ದಿನ ಮೊದಲು ಅಂದರೆ, ಮೇ 11 ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದಾರೆ.

ಅದರ ಪ್ರತಿಯನ್ನು ರಾಜ್ಯ ಪೊಲೀಸ್  ಮಹಾನಿರ್ದೇಶಕರಿಗೆ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ರವಾನಿಸಿದ್ದಾರೆ. ಮತದಾನ ನಡೆದ ದಿನದ ತರುವಾಯದಿಂದ ಹೊಸ ಸರ್ಕಾರ ರಚನೆಯಾಗುವುದರೊಳಗೆ ಹಲ್ಲೆ, ಕೊಲೆಯ ಬಗ್ಗೆ ಬೆದರಿಕೆಗಳು ಬರುವ ಸಾಧ್ಯತೆ ಇದೆ
ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ.

ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಐಟಿ ಅಧಿಕಾರಿಗಳು ರಾಜ್ಯಾದ್ಯಂತ ವಿವಿಧ ರಾಜಕೀಯ ಮುಖಂಡರ, ಅವರ ಆಪ್ತರ ನಿವಾಸ ಮತ್ತು ಕಚೇರಿ ಮೇಲೆ ಸರಣಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದಾಖಲೆಗಳಿಲ್ಲದ ನಗದು ಸೇರಿದಂತೆ ಇತರೆ ವಸ್ತುಗಳು
ಲಭ್ಯವಾಗಿವೆ. ೩೪ ಕೋಟಿ ರು.ಗಳಷ್ಟು ನಗದು ಪತ್ತೆ ಹಚ್ಚಲಾಗಿದೆ. ದಾಳಿಗೆ ಒಳಗಾಗಿರುವ ರಾಜಕಾರಣಿಗಳು, ಚುನಾವಣಾ ಕಣಕ್ಕೆ ಇಳಿದಿರುವ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಐಟಿ ಅಧಿಕಾರಿಗಳ ಮೇಲೆ ಆಕ್ರೋಶಗೊಂಡಿದ್ದಾರೆ. 

ಇದಕ್ಕೆ ಪ್ರತಿಕಾರವಾಗಿ ಐಟಿ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಹಲ್ಲೆ ನಡೆಸಲು, ಕೊಲೆ ಮಾಡಲು ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ಸೇರಿ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. 

ಐಟಿ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಕುರಿತು ಗೊತ್ತಾಗಿದೆ. ಹೀಗಾಗಿ ಐಟಿ ತನಿಖಾಧಿಕಾರಿಗಳು ಎಚ್ಚರಿಕೆಯಿಂದ ಇರುವಂತೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಳಿ ಪ್ರಕ್ರಿಯೆ ನಡೆಸಬೇಕಾಗಿದೆ. ಅಲ್ಲದೇ, ರಾಜ್ಯ ಪೊಲೀಸ್ ಇಲಾಖೆಯು ಸಹ ಕೆಲವು ಮಾಹಿತಿಗಳನ್ನು ಗುಪ್ತಚರ ಇಲಾಖೆಯಿಂದ ಪಡೆದುಕೊಂಡಿದೆ ಎಂಬ ಸುದ್ದಿಯನ್ನು ಕೇಳಿದ್ದೇನೆ. ಅವರು ಬೆದರಿಕೆಯ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿಯು ಸಹ ಲಭ್ಯವಾಗಿದೆ. ಹೀಗಾಗಿ ಐಟಿ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಭ್ರಷ್ಟರ ವಿರುದ್ಧ ಇಲಾಖೆಯು ಸಮರ ಸಾರಿದ್ದು, ಹಲವು ಮಾಹಿತಿಗಳನ್ನು ಕ್ರೋಢೀಕರಿಸಲಾಗಿದೆ. ಹೊಸ ಸರ್ಕಾರ ರಚನೆಯಾದ ಬಳಿಕವೂ ದಾಳಿ ಪ್ರಕ್ರಿಯೆ ನಡೆಯಲಿದೆ. ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ. 

click me!