ಯಾರಾದ್ರೂ ಜಗಳಕ್ಕೆ ಬಂದ್ರೆ ಕೊಲೆ ಮಾಡಿ: ಕುಲಪತಿ ಸಲಹೆ!

By Web DeskFirst Published Dec 31, 2018, 7:51 AM IST
Highlights

ಮುಂದಿನದನ್ನು ನಾನು ನೋಡಿಕೊಳ್ತೇನೆ| ವಿದ್ಯಾರ್ಥಿಗಳಿಗೆ ಉ.ಪ್ರ. ಗಾಜಿಪುರ ವಿವಿ ಕುಲಪತಿ ಕರೆ| ಕುಲಪತಿ ಯಾದವ್‌ ವಿರುದ್ಧ ಶಿಸ್ತುಕ್ರಮ: ಸರ್ಕಾರ

ಗಾಜಿಪುರ[ಡಿ.31]: ‘ನಿಮ್ಮ ಜತೆ ಯಾರಾದರೂ ಜಗಳಕೆ ಬಂದರೆ ಅವರನ್ನು ಹೊಡೆಯಿರಿ, ಕೊಲೆ ಮಾಡಿ’ ಎಂದು ಉತ್ತರಪ್ರದೇಶದ ಪೂರ್ವಾಚಲ ವಿಶ್ವವಿದ್ಯಾಲಯದ ಕುಲಪತಿ ರಾಜಾರಾಮ ಯಾದವ್‌ ಕರೆ ನೀಡಿ ವಿವಾದ ಹುಟ್ಟುಹಾಕಿದ್ದಾರೆ. ಉತ್ತರ ಪ್ರದೇಶದಲ್ಲಿ ಪೊಲೀಸರು ಸೇರಿದಂತೆ ಜನಸಾಮಾನ್ಯರನ್ನು ಹಾಡಹಗಲೇ ಕೊಲೆ ಮಾಡುವ ಪ್ರವೃತ್ತಿ ಮುಂದುವರಿದಿರುವಾಗಲೇ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕುಲಪತಿಯೊಬ್ಬರು ಮಾಡಿದ ಈ ‘ಪಾಠ’ಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಗಾಜಿಪುರ ವಿವಿ ಅಡಿಯಲ್ಲಿ ಬರುವ ಸತ್ಯದೇವ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಯಾದವ್‌, ‘ನೀವು ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಯೇ ಆಗಿದ್ದರೆ ನನ್ನ ಮುಂದೆ ಕಣ್ಣೀರು ಹಾಕುತ್ತ ಬರಬೇಡಿ. ನಿಮ್ಮ ಜತೆ ಯಾರಾದರೂ ಜಗಳಕ್ಕೆ ಬಂದರೆ ಅವರನ್ನು ಚೆನ್ನಾಗಿ ಹೊಡೆಯಿರಿ. ಸಾಧ್ಯವಿದ್ದರೆ ಕೊಲೆ ಮಾಡಿ. ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ’ ಎಂದು ಕರೆ ನೀಡಿದ್ದಾರೆ. ಕುಲಪತಿಯವರ ಈ ಆಣಿಮುತ್ತುಗಳ ವಿಡಿಯೋ ಈಗ ಭಾರೀ ವೈರಲ್‌ ಆಗಿದೆ.

Get in to a fight, commit a murder as a result and this university VC will take care of things. This is what passes for an education in some places these days. Not surprisingly the audience even applauds his assertion. https://t.co/E8tI097uzN

— Omar Abdullah (@OmarAbdullah)

ಕ್ರಮದ ಎಚ್ಚರಿಕೆ:

ಕುಲಪತಿಯ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಉತ್ತರಪ್ರದೇಶದ ಹಿರಿಯ ಸಚಿವ ಸಿದ್ಧಾರ್ಥನಾಥ ಸಿಂಗ್‌ ಪ್ರತಿಕ್ರಿಯೆ ನೀಡಿದ್ದು, ‘ಕುಲಪತಿಯವರ ಹೇಳಿಕೆ ತಪ್ಪು. ಇಂತಹ ಹೇಳಿಕೆಯನ್ನು ಅವರು ನೀಡಕೂಡದು. ಅವರು ಶಾಂತಿ ಬೋಧನೆ ಮಾಡದೇ ಗೂಂಡಾರಾಜ್ಯ ಬೋಧನೆ ಮಾಡುತ್ತಿದ್ದಾರೆ. ಇಂತಹ ಮಾನಸಿಕತೆಯ ವ್ಯಕ್ತಿಗಳು ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ. ರಾಜ್ಯದ ಮುಖ್ಯಮಂತ್ರಿಗಳು ಈ ಸಂಬಂಧ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಆಶಾಭಾವನೆ ನನ್ನದು’ ಎಂದಿದ್ದಾರೆ.

click me!