
ಮುಂಬೈ (ಸೆ.30): ಎಲ್ಫಿನ್'ಸ್ಟೋನ್ ರೈಲ್ವೆ ಸ್ಟೇಷನ್’ನಲ್ಲಿ ಕಾಲ್ತುಳಿತದಿಂದ ನಿನ್ನೆ 23 ಮಂದಿ ಸಾವನ್ನಪ್ಪಿರುವುದರಿಂದ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ಥಳೀಯ ರೈಲ್ವೇ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸುವವರೆಗೆ ಬುಲೆಟ್ ಟ್ರೇನ್ ನಿರ್ಮಾಣಕ್ಕೆ ಒಂದು ಇಟ್ಟಿಗೆಯನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಮೊದಲು ಮುಂಬೈನ ಸಮಸ್ಯೆಗಳನ್ನು, ಸ್ಥಳೀಯ ರೈಲ್ವೇಯನ್ನು ಅಭಿವೃದ್ಧಿಪಡಿಸಲಿ. ಅಭಿವೃದ್ಧಿಯಾಗುವವರೆಗೂ ಬುಲೆಟ್ ಟ್ರೇನ್ ಯೋಜನೆಗೆ ಒಂದು ಇಟ್ಟಿಗೆಯನ್ನು ತೆಗೆದುಕೊಂಡು ಹೋಗಲು ನಾವು ಬಿಡುವುದಿಲ್ಲ. ಒಂದು ವೇಳೆ ಬಲಪ್ರಯೋಗ ಮಾಡಿದರೆ ನಾವು ಕೂಡಾ ಪ್ರತಿಕಾರ ತೆಗೆದುಕೊಳ್ಳುತ್ತೇವೆ. ಪ್ರಧಾನಿಯವರಿಗೆ ಬೇಕೆಂದರೆ ಅವರ ತವರು ರಾಜ್ಯ ಗುಜರಾತ್’ನಲ್ಲಿ ಮಾಡಿಕೊಳ್ಳಲಿ ಎಂದು ಠಾಕ್ರೆ ಹೇಳಿದ್ದಾರೆ.
ನರೇಂದ್ರ ಮೋದಿ ಮಹಾನ್ ಸುಳ್ಳುಗಾರ. 2014 ರ ಚುನಾವಣೆಗೂ ಮುನ್ನ ಹೇಳಿದ ಭರವಸೆಗಳನ್ನು ಈಡೇರಿಸಿಲ್ಲ. ಇಂಥ ಮಹಾನ್ ಸುಳ್ಳು ಹೇಳುವ ಪ್ರಧಾನಿಯವರನ್ನು ನಾವು ಹಿಂದೆಂದೂ ನೋಡಿಲ್ಲ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮೆಟ್ರೋ ಪ್ರಾಜೆಕ್ಟ್’ಗೆ ಸುರೇಶ್ ಪ್ರಭು ಬದಲು ಪಿಯೂಶ್ ಗೋಯಲ್’ರನ್ನು ತಂದು ಕೂರಿಸಿದ್ದಾರೆ. ಪಿಯೂಶ್ ಗೋಯಲ್ ಯೂಸ್’ಲೆಸ್. ಪ್ರಭುರವರು ಉತ್ತಮವಾಗಿ ಕೆಲಸ ಮಾಡುತ್ತಿದ್ದರು ಎಂದು ಠಾಕ್ರೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.