ಮುಂಬೈ ಪೊಲೀಸ್ ಶ್ವಾನ ಸೀಸರ್ ಇನ್ನಿಲ್ಲ

By Web DeskFirst Published Oct 14, 2016, 10:08 AM IST
Highlights

ಮುಂಬೈ ಉಗ್ರ ದಾಳಿ ವೇಳೆ ತಾಜ್ ಹೊಟೆಲ್ ನಲ್ಲಿ ಅಡಗಿದ್ದ ಉಗ್ರರ ಜಾಡು ಹಿಡಿಯುವಲ್ಲಿ ಸೀಸರ್ ಪ್ರಮುಖ ಪಾತ್ರ ವಹಿಸಿತ್ತು.

ಮುಂಬೈ(ಅ.14): 26/11 ಮುಂಬೈ ದಾಳಿ ವೇಳೆ ಉಗ್ರದಾಳಿಯನ್ನು ಪತ್ತೆ ಮಾಡಿ ನೂರಾರು ನಾಗರಿಕರ ಸಾವನ್ನು ತಪ್ಪಿಸಿದ್ದ ಮುಂಬೈ ಪೊಲೀಸ್ ಶ್ವಾನ ಸೀಸರ್ ಸಾವನ್ನಪ್ಪಿದೆ.

ಹನ್ನೊಂದು ವರ್ಷ ವಯಸ್ಸಿನ ಸೀಸರ್ ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿತ್ತು. ಕಳೆದ ಕೆಲ ದಿನಗಳ ಹಿಂದೆ ನಾಯಿ ಆರೋಗ್ಯ ತೀರಾ ಹದಗೆಟ್ಟು ನಡೆಯಲೂ ಆಗದ ಸ್ಥಿತಿಯಲ್ಲಿತ್ತು ಎಂದು ಸಿಬ್ಬಂದಿ ತಿಳಿಸಿದ್ದಾರೆ. ಮುಂಬೈ ಉಗ್ರ ದಾಳಿ ವೇಳೆ ತಾಜ್ ಹೊಟೆಲ್ ನಲ್ಲಿ ಅಡಗಿದ್ದ ಉಗ್ರರ ಜಾಡು ಹಿಡಿಯುವಲ್ಲಿ ಸೀಸರ್ ಪ್ರಮುಖ ಪಾತ್ರ ವಹಿಸಿತ್ತು.

ಸೀಸರ್ ನೊಂದಿಗೆ ಇಲಾಖೆಯ ಇತರೆ ಶ್ವಾನಗಳಾದ ಮ್ಯಾಕ್ಸ್, ಸುಲ್ತಾನ್ ಮತ್ತು ಟೈಗರ್ ಎಂಬ ನಾಯಿಗಳು ಸಹಾಯ ಮಾಡಿದ್ದವು. ಈ ನಾಲ್ಕು ಪೊಲೀಸ್ ನಾಯಿಗಳಲ್ಲಿ ಮ್ಯಾಕ್ಸ್ ಮತ್ತು ಸುಲ್ತಾನ್ ನಾಯಿಗಳು ಈ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ  ಸಾವನ್ನಪ್ಪಿದ್ದವು. ಇತ್ತೀಚೆಗಷ್ಟೇ ಟೈಗರ್ ಎಂಬ ನಾಯಿ ಕೂಡ ಸಾವನ್ನಪ್ಪುವುದರೊಂದಿಗೆ ಸೀಸರ್ ಒಂಟಿಯಾಗಿತ್ತು.

ಸೀಸರ್ ಸಾವಿಗೆ ಮುಂಬೈ ಪೊಲೀಸ್ ಇಲಾಖೆ ಕಂಬನಿ ಮಿಡಿದಿದ್ದು, ಇಲಾಖೆಯ ವತಿಯಿಂದ ಶೋಕಾಚರಣೆಗೆ ಆದೇಶ  ನೀಡಲಾಗಿದೆ. ಅಂತೆಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಸೀಸರ್ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!