‘ಬನ್ನೇರುಘಟ್ಟ ಸೂಕ್ಷ್ಮ ವಲಯ ಕಡಿತ ಕರಡು ಹಿಂಪಡೆಯಿರಿ’ : ಆರ್‌ಸಿ ಪತ್ರ

By Web DeskFirst Published Dec 21, 2018, 9:39 AM IST
Highlights

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯ ಕಡಿತಗೊಳಿಸಿ ಹೊರಡಿಸಿರುವ ಕರಡನ್ನು ಹಿಂಪಡೆಯುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವ ಡಾ. ಹರ್ಷವರ್ಧನ್‌ ಅವರಿಗೆ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಪತ್ರ ಬರೆದಿದ್ದಾರೆ.

ಬೆಂಗಳೂರು :  ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯ (ಇಎಸ್‌ಝಡ್‌) ಕಡಿತಗೊಳಿಸಿ ಹೊರಡಿಸಿರುವ ಕರಡನ್ನು ಹಿಂಪಡೆಯುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವ ಡಾ. ಹರ್ಷವರ್ಧನ್‌ ಅವರಿಗೆ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪರಿಸರ ಸಮತೋಲನ ಕಾಪಾಡುವಲ್ಲಿ ಹಾಗೂ ಬೆಂಗಳೂರು ನಗರದ ಸುಸ್ಥಿರತೆ, ಉಷ್ಣಾಂಶ, ಮಾಲಿನ್ಯ ಪ್ರಮಾಣ ಕಡಿಮೆ ಮಾಡುವಲ್ಲಿ ಒಟ್ಟಾರೆ ನಗರ ನಿವಾಸಿಗಳ ಜೀವನ ಗುಣಮಟ್ಟಕಾಪಾಡುವಲ್ಲಿ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನ ಪ್ರಮುಖ ಪಾತ್ರ ವಹಿಸುತ್ತಿದೆ. ಬೆಂಗಳೂರು- ಮೈಸೂರು ನಿವಾಸಿಗಳ ಹಲವು ಪ್ರಯತ್ನಗಳ ಹೊರತಾಗಿಯೂ ಉದ್ಯಾನದ ಸುತ್ತಮುತ್ತ ಅಕ್ರಮ ಗಣಿಗಾರಿಕೆ ಮತ್ತು ಕ್ವಾರಿಗಳು ಮುಂದುವರಿದಿವೆ.

ಅನಧಿಕೃತ ಚಟುವಟಿಕೆಗಳಿಂದಾಗಿ ಪರಿಸರ ನಾಶವಾಗುತ್ತಿದೆ. ಕೃಷಿಕರ ಸಮುದಾಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನಾಗರಿಕರ ಒತ್ತಾಯದ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಇಲಾಖೆಯು ಹಲವಾರು ಅಕ್ರಮ ಗಣಿಗಾರಿಕೆ, ಕ್ವಾರಿ ಘಟಕಗಳನ್ನು ಸ್ಥಗಿತಗೊಳಿಸಿದೆ. ಆದರೂ ಕೆಲ ಕ್ವಾರಿಗಳು ಮತ್ತೆ ಕಾರ್ಯ ಆರಂಭಿಸಿವೆ. ಈ ಬಗ್ಗೆ ವರದಿ ಮಾಡಿದ ಮಹಿಳಾ ಪತ್ರಕರ್ತೆ ಮತ್ತು ಆಕೆಯ ತಂಡದ ವಿರುದ್ಧ ಗಣಿ ಮಾಫಿಯಾ ದಾಳಿ ಮಾಡಿದ್ದಾರೆ.

ಇಂತಹ ಸಂದರ್ಭದಲ್ಲಿ ಕೇಂದ್ರ ಪರಿಸರ ಇಲಾಖೆಯು ಬನ್ನೇರುಘಟ್ಟಸುತ್ತಲಿನ ಪರಿಸರ ಸೂಕ್ಷ್ಮ ವಲಯದ ವಿಸ್ತೀರ್ಣವನ್ನು 268.96 ಚ.ಕಿಮೀ.ನಿಂದ 169.84 ಚಕಿಮೀ.ಗೆ ಕಡಿತಗೊಳಿಸಿ ಅ.30ರಂದು ಕರಡು ಅಧಿಸೂಚನೆ ಹೊರಡಿಸಿರುವುದು ಆಘಾತಕಾರಿಯಾಗಿದೆ. ಈ ಕ್ರಮವು ಅರಣ್ಯ ವಿಸ್ತೀರ್ಣವನ್ನು ಕಡಿತಗೊಳಿಸುವ ಜತೆಗೆ ಗಣಿಗಾರಿಕೆ ಹೆಚ್ಚಳಕ್ಕೆ ಕಾರಣವಾಗಲಿದೆ. ಗಣಿಗಾರಿಕೆ ಪ್ರಭಾವದಿಂದ ಸುತ್ತಲಿನ ಗ್ರಾಮೀಣ ಜೀವನ ನಾಶವಾಗಲಿದೆ. ಆನೆಗಳ ವಲಸೆ ದಾರಿ, ವನ್ಯಜೀವಿಗಳ ಕಾರಿಡಾರ್‌ ಮತ್ತು ಬೆಂಗಳೂರು ನಗರದ ಮೇಲೆ ಗಾಢವಾದ ಪರಿಣಾಮ ಬೀರಲಿದೆ. ಈ ಅಂಶಗಳನ್ನು ಪರಿಗಣಿಸಿ ಕಡಿತಗೊಳಿಸುವ ವಿಷಯವನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ.

click me!