ಪುತ್ರಿ ಕೊಂದು ಪೋಷಕರೊಂದಿಗೆ ತಾಯಿ ಆತ್ಮಹತ್ಯೆ!

By Web DeskFirst Published Nov 13, 2018, 9:25 AM IST
Highlights

25 ಲಕ್ಷ ಪಡೆದು ಹೋದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟ ಪರಿಣಾಮ ಕೊಟ್ಟ ಹಣ ವಾಪಸ್‌ ಬರಲಿಲ್ಲ ಎಂದು ಬೇಸತ್ತು ಮಹಿಳೆಯೊಬ್ಬರು ಆರು ವರ್ಷದ ಪುತ್ರಿ ಕೊಂದು ತನ್ನ ಪೋಷಕರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.

ಬೆಂಗಳೂರು[ನ.13]: ನಿವೇಶನ ಕೊಡಿಸುವುದಾಗಿ 25 ಲಕ್ಷ ರೂಪಾಯಿ ಪಡೆದು ಹೋದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟ ಪರಿಣಾಮ ಕೊಟ್ಟ ಹಣ ವಾಪಸ್‌ ಬರಲಿಲ್ಲ ಎಂದು ಬೇಸತ್ತು ಮಹಿಳೆಯೊಬ್ಬರು ಆರು ವರ್ಷದ ಮಗಳನ್ನು ಕೊಂದು ತನ್ನ ಪೋಷಕರೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.

ದೊಡ್ಡಬೊಮ್ಮಸಂದ್ರ ನಿವಾಸಿ ಜನಾರ್ದನ(52) ಮತ್ತು ಪತ್ನಿ ಸುಮಿತ್ರಾ(45) ದಂಪತಿ, ಇವರ ಪುತ್ರಿ ಸುಧಾರಾಣಿ(29) ಮತ್ತು ಮೊಮ್ಮಗಳು ಸೋನಿಕಾ(6) ಮೃತರು. ಸುಧಾರಾಣಿ ಪೋಷಕರು ಮೊದಲಿಗೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಬಳಿಕ ಸುಧಾರಾಣಿ ಪುತ್ರಿಯನ್ನು ಉಸಿರುಗಟ್ಟಿಸಿ ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಜನಾರ್ದನ ಕ್ಯಾಬ್‌ ಚಾಲಕರಾಗಿದ್ದು, ಪತ್ನಿ ಸುಮಿತ್ರಾ ಅವರ ಜತೆ ದೊಡ್ಡಬೊಮ್ಮಸಂದ್ರದಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದರು. ಪುತ್ರಿ ಸುಧಾರಾಣಿಯನ್ನು ಅರ್ಜುನ್‌ ಎಂಬುವರಿಗೆ ನೀಡಿ ವಿವಾಹ ಮಾಡಿಕೊಡಲಾಗಿತ್ತು. ಅರ್ಜುನ್‌ ಮೆಡಿಕಲ್‌ ಶಾಪ್‌ ಹೊಂದಿದ್ದು, ದಂಪತಿ ಪ್ರತ್ಯೇಕವಾಗಿ ಮತ್ತಿಕೆರೆಯಲ್ಲಿ ನೆಲೆಸಿದ್ದರು. ಸುಧಾರಾಣಿ ಎಲ್ಲರಂತೆ ಸಿಲಿಕಾನ್‌ ಸಿಟಿಯಲ್ಲಿ ನಿವೇಶನ ಖರೀದಿಸಬೇಕೆಂದು ಕನಸು ಕಂಡಿದ್ದರು. ಎರಡ್ಮೂರು ತಿಂಗಳ ಹಿಂದೆ ಸುಧಾರಾಣಿ ತಂದೆಗೆ ಪರಿಚಯಸ್ಥರೊಬ್ಬರನ್ನು ಭೇಟಿ ಮಾಡಿಸಿದ್ದರು. ಪರಿಚಯಸ್ಥನಿಗೆ ನಿವೇಶನ ಖರೀದಿಗೆಂದು ಸುಧಾರಾಣಿ .25 ಲಕ್ಷ ನೀಡಿದ್ದರು. ಒಬ್ಬಳೇ ಪುತ್ರಿಯಾದ ಕಾರಣ ಜನಾರ್ದನ ತಾವು ದುಡಿದು ಉಳಿಸಿದ್ದ ಹಣ ಇದಾಗಿತ್ತು. ವಿಪರ್ಯಾಸವೆಂದರೆ ಹಣಕೊಂಡು ಬೈಕ್‌ನಲ್ಲಿ ಹೋಗುವಾಗಲೇ ಪರಿಚಯಸ್ಥ ಅಪಘಾತದಲ್ಲಿ ಮೃತಪಟ್ಟಿದ್ದರು.

ಪರಿಚಯಸ್ಥ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟವಿಷಯವನ್ನು ಸುಧಾರಾಣಿ ಪೋಷಕರಿಗೆ ತಿಳಿಸಿದ್ದರು. ಹಣ ಸಿಗಬಹುದು ಎಂದು ಜನಾರ್ದನ ಪೋಷಕರು ಪುತ್ರಿಗೆ ಸಮಾಧಾನ ಹೇಳಿದ್ದರು. ಕೆಲ ದಿನಗಳ ಬಳಿಕ ಸುಧಾರಾಣಿ ಮೃತ ವ್ಯಕ್ತಿಯ ಮನೆಗೆ ತೆರಳಿ ಹಣದ ವಿಷಯ ಪ್ರಸ್ತಾಪಿಸಿದ ವೇಳೆ ಮೃತನ ಪೋಷಕರು ‘ಮಗನೇ ಇಲ್ಲ, ಹಣ ಎಲ್ಲಿಂದ ಕೊಡುವುದು’ ಎಂದಿದ್ದರು. ಹಣ ಕೊಟ್ಟಬಳಿಕ ಸುಧಾರಾಣಿ ಹಲವರ ಬಳಿ ಹೇಳಿಕೊಂಡಿದ್ದರು. ಆದರೆ ಹಣ ವಾಪಸ್‌ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಹಣ ಕೊಟ್ಟವಿಷಯವನ್ನು ಮಹಿಳೆ ಪತಿ ಅರ್ಜುನ್‌ ಬಳಿ ಹೇಳಿಕೊಂಡಿರಲಿಲ್ಲ. ತಾವು ಕಷ್ಟಪಟ್ಟು ಕೂಡಿಟ್ಟಿದ್ದ ಹಣ ಕೈ ಸೇರುವುದಿಲ್ಲ ಎಂಬುದನ್ನು ತಿಳಿದು ಸುಧಾರಾಣಿ, ಪೋಷಕರಾದ ಜನಾರ್ದನ ಮತ್ತು ಸುಮಿತ್ರಾ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ.

ಸುಳ್ಳು ಹೇಳಿ ಪಾಲಕರ ಮನೆಗೆ ಹೋಗಿದ್ದ ಸುಧಾರಾಣಿ:

ಶನಿವಾರ ಸಂಬಂಧಿಕರೊಬ್ಬರ ಮನೆಯಲ್ಲಿ ಕಾರ್ಯಕ್ರಮ ಇದೆ. ಪೋಷಕರೊಂದಿಗೆ ಹೋಗುವುದಾಗಿ ಪತಿ ಅರ್ಜುನ್‌ಗೆ ಸುಧಾರಾಣಿ ಸುಳ್ಳು ಹೇಳಿ ಪೋಷಕರ ದೊಡ್ಡಬೊಮ್ಮಸಂದ್ರದ ಮನೆಗೆ ಹೋಗಿದ್ದರು. ಸೋಮವಾರ ಜನಾರ್ದನ ಅವರ ಮನೆಯಿಂದ ದುರ್ವಾಸನೆ ಬರತೊಡಗಿತ್ತು. ಇದರಿಂದ ಅನುಮಾನಗೊಂಡ ನೆರೆಮನೆ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿದ್ಯಾರಣ್ಯಪುರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡೆತ್‌ನೋಟ್‌ನಲ್ಲಿ ವಿಷದ ಮಾತ್ರೆ ಸೇವಿಸಿ ಜನಾರ್ದನ, ಸುಮಿತ್ರಾ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಿದ್ದು, ಯಾವ ಮಾತ್ರೆ ಎಂದು ಗೊತ್ತಿಲ್ಲ. ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಹಲವು ಮಾಹಿತಿ ಸಂಗ್ರಹಿಸಿದ್ದಾರೆ. ಡೆತ್‌ನೋಟ್‌ನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಉಲ್ಲೇಖವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ಬಳಿಕ ಯಾವ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ತಿಳಿಯಲಿದೆ. ಡೆತ್‌ನೋಟ್‌ನಲ್ಲಿರುವ ಬರಹ ಸುಧಾರಾಣಿಯವರದ್ದೆ ಎಂಬ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ಪತಿ ಅರ್ಜುನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೂರು ದಿನವಾದರೂ ಪತ್ನಿ ಮನೆಗೆ ಬಾರದ ಬಗ್ಗೆ ಅರ್ಜುನ್‌ ಸಂಪರ್ಕಿಸಿಲ್ಲವೇ, ಶನಿವಾರ ಮನೆಗೆ ಬಂದು ಅಡುಗೆ ಮಾಡಿಟ್ಟು ಹೋಗಿದ್ದ ವಿಚಾರವನ್ನು ಹೇಳಿಲ್ಲವೇ ಎಂಬ ಪ್ರಶ್ನೆ ಮಾಡಲಾಗುತ್ತಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಡೆತ್‌ನೋಟ್‌ನಲ್ಲಿ ಸಾವಿನ ರಹಸ್ಯ

ಸಾವಿಗೆ ಮುನ್ನ ಸುಧಾರಣಿ ಬರೆದಿಟ್ಟಿದ್ದರು ಎನ್ನಲಾದ ಡೆತ್‌ನೋಟ್‌ನಲ್ಲಿ, ನಮ್ಮ ಸಾವಿಗೆ ನಾವೇ ಕಾರಣ. ನನಗೆ ಒಂದು ಮನೆ ಖರೀದಿಸುವ ಕನಸಿತ್ತು. ಈ ವಿಚಾರವಾಗಿ ಓರ್ವ ವ್ಯಕ್ತಿಯನ್ನು ನಂಬಿದ್ದೆ. ನಂಬಿಕೆ ಮೇಲೆ ಆಸ್ತಿ ಖರೀದಿಗೆ ಆತನಿಗೆ 25 ಲಕ್ಷ ರೂಪಾಯಿ ನೀಡಿದ್ದೆ. ಆ ವ್ಯಕ್ತಿ ಹಣ ತೆಗೆದುಕೊಂಡು ಹೋಗುವಾಗಲೇ ಅಪಘಾತದಲ್ಲಿ ಮೃತಪಟ್ಟಿದ್ದರು. ಕೊಟ್ಟಹಣದ ಮೃತ ವ್ಯಕ್ತಿಯ ಪೋಷಕರಿಗೂ ತಿಳಿಸಿದ್ದೆ. ಹಣ ಸಿಗುವುದಿಲ್ಲ ಎಂಬುದನ್ನು ತಿಳಿದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆವು.

ಬಳಿಕ ಶನಿವಾರ ಪೋಷಕರಿಗೆ ಮಾತ್ರೆ ನೀಡಿದ್ದೆ. ಮಾತ್ರೆ ತೆಗೆದುಕೊಂಡ ಬಳಿಕ ನಾವು ಸಾಯದಿದ್ದರೆ ನೀನೇ ಕೊಂದು ಬಿಡು ಎಂದಿದ್ದರು. ಅವರು ಮಾತ್ರೆ ತೆಗೆದುಕೊಂಡ ಬಳಿಕ ಮನೆಗೆ ಬೀಗ ಹಾಕಿ ಮಗಳೊಂದಿಗೆ ಪತಿಯ ಮನೆಗೆ ತೆರಳಿ, ಪತಿಗೆ ಅಡುಗೆ ಮಾಡಿಟ್ಟು ಸಂಜೆ ವಾಪಸ್‌ ಬಂದೆ. ಅಷ್ಟೋತಿಗೆ ಪೋಷಕರು ಕೊಠಡಿಯಲ್ಲಿ ಜೀವ ಬಿಟ್ಟಿದ್ದರು. ಬಳಿಕ ನಾನು ಮಗಳನ್ನು ಉಸಿರುಗಟ್ಟಿಸಿ ಕೊಂದೆ. ಈಗ ನಾನು ಸಾಯುತ್ತೇನೆ ಎಂದು ಬರೆದಿರುವುದಾಗಿ ಪೊಲೀಸರು ಹೇಳಿದ್ದಾರೆ.

click me!
Last Updated Nov 13, 2018, 9:24 AM IST
click me!