ಧಾರವಾಡ, ಹಾವೇರಿಯಲ್ಲಿ 1500 ಮನೆ ಕುಸಿದು ಹಾನಿ| ಮಲಪ್ರಭಾ, ಬೆಣ್ಣಿಹಳ್ಳ ಪ್ರವಾಹದ ಭೀತಿ| 13,398 ಜನರ ಸ್ಥಳಾಂತರ
ಹುಬ್ಬಳ್ಳಿ[ಆ.08]: ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಸತತ ಐದನೇ ದಿನವೂ ಮಳೆಯ ಆರ್ಭಟ ಮುಂದುವರಿದಿದ್ದು, ಬುಧವಾರ ಸಂಜೆಯ ನಂತರ ಅಬ್ಬರ ಸ್ವಲ್ಪ ಕಡಿಮೆಯಾಗಿದೆ. ಧಾರವಾಡ ಜಿಲ್ಲೆಯಲ್ಲಿ ಸುಮಾರು 1243 ಮನೆಗಳು ಕುಸಿದಿವೆ. ಹಾವೇರಿ ಜಿಲ್ಲೆಯಲ್ಲಿ 389 ಮನೆಗಳಿಗೆ ಹಾನಿಯಾಗಿದೆ. ಧಾರವಾಡ ಜಿಲ್ಲೆಯಲ್ಲಿ 3, ಹಾವೇರಿ ಜಿಲ್ಲೆಯಲ್ಲಿ 2 ದಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕ್ಯಾಲಕೊಂಡ ಗ್ರಾಮದಲ್ಲಿ ಮನೆಯೊಂದು ಬಿದ್ದು ಮೂವರು ಗಾಯಗೊಂಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 6, ಹಾವೇರಿಯಲ್ಲಿ 3 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.
ಗದಗದಲ್ಲಿ ಪ್ರವಾಹ ಭೀತಿ:
ಮಲಪ್ರಭಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕಿನ ನದಿಯಂಚಿನ ಗ್ರಾಮಗಳಲ್ಲಿ ಪ್ರವಾಹದ ಅಪಾಯ ಎದುರಾಗಿದ್ದು, ಎರಡೂ ತಾಲೂಕಿನ 2,857 ಕುಟುಂಬಗಳ 13,398 ಸಾವಿರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ನರಗುಂದ, ರೋಣ ತಾಲೂಕು ಹಾಗೂ ಶಿರಹಟ್ಟಿತಾಲೂಕಿನ ಗ್ರಾಮಾಂತರ ಪ್ರದೇಶದ ಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ. ನವಲಗುಂದ ತಾಲೂಕಿನ ಬೆಣ್ಣಿಹಳ್ಳ- ತುಪರಿಹಳ್ಳ ಅಪಾಯದ ಮಟ್ಟಮೀರಿ ಹರಿಯುತ್ತಿದ್ದು, 4 ಸೇತುವೆಗಳು ಮುಳುಗಡೆಯಾಗಿವೆ. ಅಳ್ನಾವರದಲ್ಲಿ 270ಕ್ಕೂ ಹೆಚ್ಚು ಮಂದಿಯನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಶವವಾಗಿ ಪತ್ತೆ:
ಮಂಗಳವಾರ ಸಂಜೆ ಧಾರವಾಡದ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಕಾಶಯ್ಯ ಹೊಸಳ್ಳಿಮಠ (57) ಶವ ಬುಧವಾರ ಬೆಳಗ್ಗೆ ಪತ್ತೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ವರದಾ, ತುಂಗಭದ್ರಾ, ಧರ್ಮಾ, ಕುಮುದ್ವತಿ ನದಿಗಳು ಅಪಾಯದ ಮಟ್ಟಮೀರಿ ಹರಿಯುತ್ತಿದ್ದು, ಸಾವಿರಾರು ಎಕರೆ ಕೃಷಿ ಜಮೀನು ಜಲಾವೃತಗೊಂಡಿದೆ.
ಮಳೆಯಬ್ಬರಕ್ಕೆ ತತ್ತರಿಸಿದ ಕರ್ನಾಟಕ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಾರ್ಗ ಬದಲಾವಣೆ:
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಮಾರ್ಗದ ನಿಪ್ಪಾಣಿ ಹತ್ತಿರ ಬಿರುಕು ಬಿಟ್ಟು ಸಂಚಾರ ಸ್ಥಗಿತಗೊಂಡಿರುವ ಕಾರಣ ಹಾವೇರಿಯಿಂದ ಧಾರವಾಡ ಕಡೆಗೆ ಹೋಗುವ ಮಾರ್ಗದ ವಾಹನಗಳನ್ನು ಶಿಗ್ಗಾಂವಿ, ಲಕ್ಷ್ಮೇಶ್ವರ ಮುಖಾಂತರ ಗದಗ ಮಾರ್ಗವಾಗಿ ವಿಜಯಪುರ ಮುಂತಾದ ಕಡೆ ಸಂಚರಿಸಲು ಸೂಚಿಸಲಾಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ನಿಪ್ಪಾಣಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 4 ಬಿರುಕು ಬಿಟ್ಟಕಾರಣ ಪುಣೆ-ಬೆಂಗಳೂರು ಮಾರ್ಗದ ವಾಹನಗಳ ಸಂಚಾರ ಸಂಪೂರ್ಣ ನಿಲುಗಡೆಯಾಗಿದೆ. ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲಿ ಇಡೀ ದಿನ ತುಂತುರು ಮಳೆ ಸುರಿಯಿತು.