
ನವದೆಹಲಿ(ಜುಲೈ 02): ಭಾರತೀಯ ಸೇನೆಯು ಸಿಕ್ಕಿಂ-ಚೀನಾ ಗಡಿ ಬಳಿ ತನ್ನ ಕೆಲ ತುಕಡಿಗಳನ್ನು ಕಳುಹಿಸಿದೆ. ಚೀನೀ ಸೇನೆಯು ಸಿಕ್ಕಿಮ್ ಗಡಿ ಬಳಿ ಕಳೆದ ಒಂದು ತಿಂಗಳಿನಿಂದ ಕ್ಯಾತೆ ತೆಗೆದು ಕಾಲುಕೆರೆದುಕೊಂಡು ಜಗಳಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಈ ಕ್ರಮ ಕೈಗೊಂಡಿದೆ. ಗಡಿಯಲ್ಲಿ ಈಗಾಗಲೇ ತುಕಡಿಗಳಿದ್ದರೂ ಹೆಚ್ಚಿನ ಸುರಕ್ಷತೆಗಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಚೀನಾ ಸೇನೆ ಬಹಳ ಆಕ್ರಮಣಕಾರಿ ರೀತಿಯಲ್ಲಿ ಮಾತನಾಡುತ್ತಿದೆ. ಇಷ್ಟೇ ಆಗಿದ್ದರೆ ತುಸು ಲಘುವಾಗಿ ಪರಿಗಣಿಸಬಹುದಿತ್ತು. ಆದರೆ, ಡೋಕಾ ಲಾ ಸೆಕ್ಟರ್'ನ ಲಾಲ್ಟೆನ್'ನಲ್ಲಿ ಸ್ಥಾಪಿಸಲಾಗಿದ್ದ 2 ಭಾರತೀಯ ಸೇನಾ ಬಂಕರ್'ಗಳನ್ನು ಜೂನ್ 6ರಂದು ಚೀನಾದ ಬುಲ್'ಡೋಜರ್'ಗಳು ನೆಲಸಮಗೊಳಿಸಿವೆ.
ಡೋಕಾ ಲಾ ಪ್ರದೇಶವು ತನಗೆ ಸೇರಿದ್ದು ಎಂಬುದು ಚೀನಾದ ವಾದವಾಗಿದೆ. ಭೂತಾನ್'ದ್ದೆಂದು ಹೇಳಲಾಗುವ ಈ ಪ್ರದೇಶದಲ್ಲಿ ಭಾರತ ಮತ್ತು ಭೂತಾನ್ ದೇಶಗಳ ಸೈನಿಕರು ಜಂಟಿಯಾಗಿ ಹಲವು ವರ್ಷಗಳಿಂದ ಪಹರೆ ನಡೆಸಿಕೊಂಡು ಬಂದಿದ್ದಾರೆ. 2012ರಲ್ಲಿ ಹೆಚ್ಚಿನ ಭದ್ರತೆಯ ದೃಷ್ಟಿಯಿಂದ ಭಾರತೀಯ ಸೇನೆಯು ಇಲ್ಲಿ ಎರಡು ಬಂಕರ್'ಗಳನ್ನೂ ಸ್ಥಾಪಿಸಿತ್ತು. ಈಗ ಅವನ್ನು ಚೀನಾ ನಾಶ ಮಾಡಿದೆ. ಜೊತೆಗೆ ಚೀನಾ ಸಾಕಷ್ಟು ಸಂಖ್ಯೆಯಲ್ಲಿ ತನ್ನ ಸೇನಾ ತುಕಡಿಗಳನ್ನು ಸ್ಥಳಕ್ಕೆ ಕರೆತಂದಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಅನಿವಾರ್ಯವಾಗಿ ತನ್ನ ತುಕಡಿಗಳ ಬಲ ವೃದ್ಧಿಸಬೇಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.