ಬೆಂಗಳೂರಿನಲ್ಲಿರುವ ಬಹುತೇಕ ಕೆರೆಗಳು ಅವಸಾನದ ಅಂಚಿಗೆ ತಲುಪುತ್ತಿವೆ. ಇಂತಹ ಕೆರೆಗಳ ನೀರು ಸಂಪೂರ್ಣ ವಿಷಮಯವಾಗುತ್ತಿದೆ.
ಬೆಂಗಳೂರು : ‘ಸಾವಿರ ಕೆರೆಗಳ ನಗರ’ ಎಂದೇ ಪ್ರಸಿದ್ಧಿ ಗಳಿಸಿದ್ದ ಹಾಗೂ ಕೆರೆಗಳ ನೀರಿನಿಂದಲೇ ತನ್ನೊಡಲ ನಾಗರಿಕರ ದಾಹ ತೀರಿಸುತ್ತಿದ್ದ ಉದ್ಯಾನನಗರಿ ಕೆರೆಗಳು ಒತ್ತುವರಿ, ಸರ್ಕಾರ ಹಾಗೂ ಸಾರ್ವಜನಿಕರ ನಿರ್ಲಕ್ಷ್ಯದಿಂದಾಗಿ ಅವಸಾನದ ಕೊನೆ ಹಂತ ತಲುಪುತ್ತಿವೆ.
-ಬೆಂಗಳೂರು ನಗರ ಹಾಗೂ ಗ್ರಾಮೀಣ ಭಾಗದಲ್ಲಿದ್ದ 1,547 ಕೆರೆ ಹಾಗೂ 3000 ಕುಂಟೆಗಳಲ್ಲಿ ಬಹುತೇಕ ಕರೆಗಳು ಕೆರೆಗಳು ತಮ್ಮ ಕುರುಹು ಉಳಿಸದಂತೆ ಮಾಯವಾಗಿವೆ. ಇದರಲ್ಲಿ ನಗರದ 837 ಕೆರೆಗಳ ಪೈಕಿ ಸರ್ಕಾರಿ ದಾಖಲೆಗಳ ಪ್ರಕಾರವೇ 184 ಕೆರೆ ಮಾತ್ರ ಉಳಿದುಕೊಂಡಿದ್ದು, ಇವುಗಳಲ್ಲೂ ಶೇ.90ರಷ್ಟುಕೆರೆಗಳು ಭಾಗಶಃ ಒತ್ತುವರಿಗೆ ಗುರಿಯಾಗಿವೆ. ಜತೆಗೆ ಶೇ.98 ಕೆರೆಗಳು ತ್ಯಾಜ್ಯ ನೀರು ತುಂಬಿಕೊಂಡು ಸಂಪೂರ್ಣ ಕಲುಷಿತಗೊಂಡಿದ್ದು, ಕುಡಿಯಲು ಅಲ್ಲ ಕನಿಷ್ಠ ಸ್ನಾನಕ್ಕೂ ಯೋಗ್ಯವಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಪರಿಣಾಮ 16ನೇ ಶತಮಾನದಲ್ಲಿ ವ್ಯಾಪಕವಾಗಿ ನಿರ್ಮಾಣಗೊಂಡು ಮೂರು ಶತಮಾನಗಳ ಕಾಲ ಲಕ್ಷಾಂತರ ಬೆಂಗಳೂರಿಗರಿಗೆ ನೀರುಣಿಸಿದ್ದ ಕೆರೆಗಳು ಮನುಷ್ಯನ ಅನಾಗರಿಕ ವರ್ತನೆಗೆ ಜೀವ ಕಳೆದುಕೊಂಡಿವೆ. ನಗರೀಕರಣದ ಹೆಸರಿನಲ್ಲಿ ಖುದ್ದು ಸರ್ಕಾರವೇ 23ಕ್ಕೂ ಹೆಚ್ಚು ಕೆರೆಗಳನ್ನು ಮುಚ್ಚಿ ಬಸ್ ನಿಲ್ದಾಣ, ಕ್ರೀಡಾಂಗಣ, ಗಾಲ್‌್ಫಕೋರ್ಸ್, ಉದ್ಯಾನ ಅಭಿವೃದ್ಧಿಪಡಿಸಿದರೆ, ಉಳಿದಂತೆ 10ಕ್ಕೂ ಹೆಚ್ಚು ಕೆರೆಗಳನ್ನು ಬಡಾವಣೆ ಅಭಿವೃದ್ಧಿ, ಕೊಳಗೇರಿ ನಿವಾಸಿಗಳ ವಾಸಕ್ಕೆ ವಹಿಸಿದೆ. ಈ ಮೂಲಕ ಕೆರೆಗಳ ರಕ್ಷಕನ ಪಾತ್ರದಿಂದ ಭಕ್ಷಕ ಪಾತ್ರದತ್ತ ಜಾರಿ ಕೆರೆಗಳ ಸಂಪೂರ್ಣ ನಾಶಕ್ಕೆ ಕಾರಣವಾಗಿದೆ.
ಇನ್ನು ಭೂಮಿಗೆ ಬೆಲೆ ಬಂದಂತೆಲ್ಲಾ ಭೂಗಳ್ಳರ ಅಟ್ಟಹಾಸಕ್ಕೆ ವೇಗವಾಗಿ ಕೆರೆಗಳು ಬಲಿಯಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯ 837 ಕೆರೆ ಪೈಕಿ 23,366 ಎಕರೆ ಒತ್ತುವರಿಗೆ ಗುರಿಯಾಗಿದೆ. ಕಣ್ಣೊರೆಸುವ ತಂತ್ರವಾಗಿ ಅಪರೂಪಕ್ಕೊಮ್ಮೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಸರ್ಕಾರ ಬಹುತೇಕ ಕೆರೆಗಳನ್ನು ಅಧಿಕೃತವಾಗಿ ನಿರ್ಜೀವ ಕೆರೆಗಳು ಎಂದು ಘೋಷಿಸಿ ಡಿನೋಟಿಫೈ ಮಾಡಿದೆ. ಈ ಮೂಲಕ ಕೆರೆ ನುಂಗಣ್ಣರ ಬೆನ್ನು ತಟ್ಟಿಪ್ರೋತ್ಸಾಹ ನೀಡಿದೆ.
ಪರಿಣಾಮ ನಗರದ ಕೆರೆಗಳು ಸಂಪೂರ್ಣ ನಾಶವಾಗಿ, ಅಳಿದುಳಿದ ಕೆರೆಗಳು ಸೂಕ್ತ ನಿರ್ವಹಣೆಯಿಲ್ಲದ ತ್ಯಾಜ್ಯ ಗುಂಡಿಗಳಾಗಿ ಪರಿವರ್ತನೆಯಾಗಿವೆ. ರಾಸಾಯನಿಕಗಳ ಆಗರವಾದ ಪರಿಣಾಮ ಜಲಚರಗಳಿಗೂ ವಾಸಯೋಗ್ಯವಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ತೂರು, ಬೆಳ್ಳಂದೂರಿನಂತಹ ಕೆರೆಗಳು ಆ್ಯಸಿಡ್ ಕೆರೆಗಳಾಗಿ ಬೆಂಕಿ ಉಗುಳುವ ಮಟ್ಟಕ್ಕೆ ರಸಾಯನ ತ್ಯಾಜ್ಯದಿಂದ ತುಂಬಿಕೊಂಡಿವೆ. ಪರಸ್ಪರ ಕೊಂಡಿಯಂತಿದ್ದ ಕೆರೆಗಳ ನಡುವಿನ ಕಾಲುವೆಗಳ ಒತ್ತುವರಿ ಮೂಲಕ ಮಳೆ ನೀರು ಕೆರೆಗಳಿಗೆ ಸೇರದಂತಾಗಿದೆ. ಕೆಲವು ಕೆರೆಗಳನ್ನು ಅಭಿವೃದ್ಧಿ ಹೆಸರಿನಲ್ಲಿ ವಿಸ್ತೀರ್ಣ ಕುಗ್ಗಿಸಲಾಗಿದೆ. ಕೆರೆಗಳ ನಾಶದಿಂದ ಅಂತರ್ಜಲ ಮಟ್ಟವು ಪಾತಾಳಕ್ಕೆ ಕುಸಿದಿದೆ.
ಈಗಾಗಲೇ ಬೆಂಗಳೂರು ನಾಗರಿಕರಿಗೆ 150 ಕಿ.ಮೀ. ದೂರದ ಕಾವೇರಿ ನದಿಯಿಂದ ಕುಡಿಯುವ ನೀರು ಪಡೆಯುವ ಅನಿವಾರ್ಯತೆ ಸೃಷ್ಟಿಯಿದೆ. ಇನ್ನು ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಅಳಿದುಳಿದ ಕೆರೆಗಳೂ ಮಾಯವಾಗಿ ಸಾವಿರ ಕೆರೆಗಳ ನಗರ ಕೆರೆಯೇ ಇಲ್ಲದ ವಿಶ್ವದ ಏಕೈಕ ನಗರವಾಗಿ ಬದಲಾಗಿದೆ. ಕೆರೆಗಳ ಅವಸಾನದಿಂದ ಬೆಂಗಳೂರಿಗೆ ಕುಡಿಯುವ ನೀರಿಲ್ಲದೆ, ವಾಸಯೋಗ್ಯ ಪರಿಸರವಿಲ್ಲದೆ, ಜೈವಿಕ ತಾಪಮಾನ ಹೆಚ್ಚಾಗಿ ನೂರಾರು ಸಮಸ್ಯೆ ಸೃಷ್ಟಿಯಾಗಲಿವೆ ಎಂದು ಪರಿಸರವಾದಿಗಳು ಎಚ್ಚರಿಕೆ ನೀಡಿದ್ದಾರೆ.
50 ವರ್ಷದಿಂದ ಕೆರೆಗಳ ವ್ಯಾಪಕ ಕೊಲೆ
ನಗರೀಕರಣದ ಪರಿಣಾಮದಿಂದಾಗಿ ಕಳೆದ 50 ವರ್ಷದಿಂದ ಕೆರೆಗಳ ವ್ಯಾಪಕ ಕೊಲೆ ಶುರುವಾಗಿದೆ. ಪ್ರಸ್ತುತ ತಕ್ಕಮಟ್ಟಿಗೆ ಜಲಚರ ಜೀವಿಸುವಷ್ಟುಆರೋಗ್ಯ ಉಳಿಸಿಕೊಂಡಿರುವ ಕೆರೆಗಳು 18 ಮಾತ್ರ. ಬೆಳ್ಳಂದೂರು, ವರ್ತೂರು ಕೆರೆ ಸೇರಿದಂತೆ ನಗರದ ಬಹುತೇಕ ಕೆರೆ ನೀರು ಮತ್ತು ಹೂಳಿನಲ್ಲಿ ಸುಮಾರು 16 ರಿಂದ 18 ಬಗೆಯ ವಿಷಕಾರಿ ಲೋಹಗಳು ಕರಗಿವೆ.
ಕೆರೆಯ ಪ್ರತಿ ಲೀಟರ್ ನೀರಿನಲ್ಲಿ ಶೇ.55 ಎಂಜಿಗಿಂತ ಹೆಚ್ಚಿನ ಪ್ರಮಾಣ ನೈಟ್ರೈಟ್ ಅಂಶವಿದೆ. ಇಂತಹ ನೀರು ಸೇವನೆ ಮಾಡುವುದರಿಂದ ಕ್ಯಾನ್ಸರ್ ಸಂಬಂಧಿ ಕಾಯಿಲೆಗಳು ಹಾಗೂ ಬ್ಲೂಬೇಬಿ ಸಿಂಡ್ರೋಮ್‌ನಂತಹ ಮಾರಣಾಂತಿಕ ಕಾಯಿಲೆಗಳು ಬರುತ್ತಿವೆ. ಇಂತಹ ನೀರು ಅಂತರ್ಜಲ ಸೇರ್ಪಡೆಯಿಂದಾಗಿ ಬೋರ್‌ವೆಲ್ ನೀರು ಸೇವನೆಯೂ ಆರೋಗ್ಯಕ್ಕೆ ಮಾರಕವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕತ್ತಲೆ ಕೋಣೆಗೆ ಕೆರೆ ಸಂರಕ್ಷಣಾ ವರದಿಗಳು
ಕೆರೆ ಒತ್ತುವರಿ ಹಾಗೂ ಸಂರಕ್ಷಣೆ ಬಗ್ಗೆ ಸಾಲು-ಸಾಲು ಅಧ್ಯಯನ ವರದಿ ಮಂಡಿಸಿದರೂ ಸರ್ಕಾರ ವರದಿ ಅನ್ವಯ ಯಾವುದೇ ಕ್ರಮ ಕೈಗೊಂಡಿಲ್ಲ. 2012ರಲ್ಲಿ ಲೆಕ್ಕಪರಿಶೋಧನಾ ವರದಿಯಲ್ಲಿ 1969ರಿಂದ 2002ರ ವರೆಗೆ ಬೆಂಗಳೂರಿನ 1,039 ಕೆರೆಗಳು ಅತಿಕ್ರಮಣಕ್ಕೆ ಒಳಗಾಗಿವೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿದೆ. 1985ರ ಲಕ್ಷ್ಮಣ್‌ರಾಯ ವರದಿಯಲ್ಲಿ ಬೆಂಗಳೂರಿನಲ್ಲಿ ಒಟ್ಟು 262 ಕೆರೆಗಳಿವೆ. ಅದರಲ್ಲಿ 46 ಕೆರೆಗಳು ನಿರುಪಯುಕ್ತ ಕೆರೆಗಳು 81 ಕೆರೆಗಳನ್ನು ತ್ವರಿತವಾಗಿ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಶಿಫಾರಸು ಮಾಡಲಾಗಿತ್ತು.
ಇನ್ನು 2007ರಲ್ಲಿ ಎ.ಟಿ.ರಾಮಸ್ವಾಮಿ ಅಧ್ಯಕ್ಷತೆಯ ಸಮಿತಿಯಲ್ಲಿ ಕಳೆದ 20 ವರ್ಷದ ಕೆರೆಗಳನ್ನು ಭೂಗಳ್ಳರು ಹಂತ ಹಂತವಾಗಿ ಲೂಟಿ ಮಾಡಿದ್ದಾರೆ. ಈ ಕಾರ್ಯದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. 33 ಸಾವಿರ ಒತ್ತುವರಿದಾರರಿಂದ 27 ಸಾವಿರ ಎಕರೆ ಪ್ರದೇಶ ಒತ್ತುವರಿ ಆಗಿದೆ. ಬೆಂಗಳೂರಿನಲ್ಲಿ 1961ರಲ್ಲಿ 261 ಕೆರೆಗಳಿದ್ದವು. ಅದರಲ್ಲಿ ಈಗ 33 ಕೆರೆಗಳು ಮಾತ್ರ ಕಾಣಬರುತ್ತವೆ. ಉಳಿದ ಕೆರೆಗಳು ಮಾಲಿನ್ಯ ಹಾಗೂ ಒತ್ತುವರಿಯಿಂದ ಮಾಯವಾಗಿವೆ ಎಂದು ವರದಿ ನೀಡಿತ್ತು. ಆದರೆ, ಸರ್ಕಾರದಿಂದ ಕೆರೆ ಸಂರಕ್ಷಣೆ ಮತ್ತು ಪುನಜ್ಜೀವನಗೊಳಿಸಲಿಲ್ಲ. ಅಲ್ಲದೇ 2014ರಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಮತ್ತು ಸುತ್ತಮುತ್ತಲಿನ ಕೆರೆ ಒತ್ತುವರಿ ಆಧ್ಯಯನ ಸದನ ಸಮಿತಿ ರಚನೆ ಮಾಡಲಾಯಿತು. ಆದರೆ ಯಾವುದೇ ಕ್ರಮ ಜರುಗಿಸಿಲ್ಲ.
1930ರ ಅವಧಿಯಲ್ಲಿ ಕುಡಿಯಲು ಕೆರೆಯ ನೀರು
ಕೆರೆಗಳು 1930ರ ದಶಕದಲ್ಲಿ ಬೆಂಗಳೂರಿನ ಜನತೆಗೆ ಕುಡಿಯುವ ನೀರು ಪೂರೈಸುತ್ತಿದ್ದವು. ಧರ್ಮಾಂಬುದಿ ಕೆರೆ, ಮಿಲ್ಲರ್ಸ್ ಟ್ಯಾಂಕ್, ಸ್ಯಾಂಕಿ, ಹಲಸೂರು ಕೆರೆಗಳಿಂದ ಸಾರ್ವಜನಿಕರು ನೀರು ಕುಡಿಯುತ್ತಿದ್ದರು. ಬಳಿಕ ಕೆರೆಗಳು ಹಾಳಾಗುತ್ತಿದ್ದಂತೆ ಪರ್ಯಾಯ ಮೂಲಗಳ ಮೊರೆ ಹೋದ ಆಡಳಿತಗಳು 1896ರಲ್ಲಿ ಹೆಸರುಘಟ್ಟ, 1933ರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಕುಡಿಯುವ ನೀರು ಪೂರೈಸಲು ಶುರು ಮಾಡಲಾಯಿತು. ವಿಪರ್ಯಾಸವೆಂದರೆ ತಿಪ್ಪಗೊಂಡನಹಳ್ಳಿ ಹಾಗೂ ಹೆಸರುಘಟ್ಟಜಲಾಶಯಗಳೂ ಕಲುಷಿತಗೊಂಡಿದ್ದು, ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಈಗ ಕೇವಲ ಕಾವೇರಿ ನೀರನ್ನೇ ನೆಚ್ಚಿಕೊಳ್ಳುವಂತಾಗಿದೆ.
ಕೆರೆಯಿಂದ ಕೇವಲ ಕುಡಿಯುವ ಬಳಕೆಗೆ ಅಲ್ಲದೆ ರೈತರು ಬೆಳೆ ಬೆಳಯಲು, ಜೀವ ವೈವಿಧ್ಯತೆ ಕಾಪಾಡುವ ಜತೆಗೆ ದೋಬಿಘಾಟ್ ಮೂಲಕ ಮಡಿವಾಳರಿಗೆ ಉದ್ಯೋಗ ಸೃಷ್ಟಿಸೇರಿದಂತೆ ಹಲವು ರೀತಿಯಲ್ಲಿ ಕೆರೆಗಳು ನೆರವಾಗಿದ್ದವು. ವಿಚಿತ್ರವೆಂದರೆ ಕೆರೆ ನೀರಿನಲ್ಲಿ ಬೆಳೆಯುತ್ತಿದ್ದ ಬೆಂಗಳೂರು ಆ್ಯಪಲ್ (ಸೇಬು) ದೇಶದ ಪ್ರಸಿದ್ಧಿ ಸೇಬಿನಲ್ಲಿ ಒಂದಾಗಿತ್ತು. ಅಲ್ಲದೇ ಕೆರೆಯಲ್ಲಿ ಮೀನುಗಾರಿಕೆ ಸಹ ಮಾಡಲಾಗುತ್ತಿತ್ತು.
ರಾಜರು, ಬ್ರಿಟಿಷರ ಶ್ರಮ ಮಣ್ಣುಪಾಲು
ಕೆರೆಗಳ ನಿರ್ಮಾಣದಲ್ಲಿ ರಾಜಮಹಾರಾಜರು ಸೇರಿದಂತೆ ನಾಡಪ್ರಭು ಕೆಂಪೇಗೌಡರು, ಬ್ರಿಟಿಷ್ ಅಧಿಕಾರಿಗಳ ಪಾತ್ರ ಮಹತ್ವದಾಗಿದೆ. ಕೆಂಪೇಗೌಡ ತನ್ನ ಕುಲದೇವತೆಯಾಗಿದ್ದ ಕೆಂಪಮ್ಮನ ಹೆಸರಿನಲ್ಲಿ ಕೆಂಪಾಂಬುಧಿ ಕೆರೆಯನ್ನೂ, ಧರ್ಮದೇವತೆಯ ಹೆಸರಿನಲ್ಲಿ ಧರ್ಮಾಂಬುಧಿ ಕೆರೆಯನ್ನೂ ಕಟ್ಟಿಸಿದರು. ಬ್ರಿಟಿಷರೂ ತಮ್ಮ ಆಡಳಿತದ ಕಾಲದಲ್ಲಿ ಬೆಂಗಳೂರಿನ ಕೆರೆಗಳ ಬಗ್ಗೆ ಸಾಕಷ್ಟುಆಸಕ್ತಿ ತಳೆದಿದ್ದರು. 1866ರ ಕಾಲದಲ್ಲಿ ಚೀಫ್ ಕಮಿಷನರ್ ಆಗಿದ್ದ ಲೂಯಿಸ್ ಬೆಂಥಮ್ ಬೌರಿಂಗ್ ಯೋಜಿಸಿದ ನಗರದ ಚರಂಡಿ ವ್ಯವಸ್ಥೆ ಮಳೆಗಾಲದಲ್ಲಿ ನೀರು ಸಾಗಿಸುವ ಕಾಲುವೆಯಂತೆ ಕೆಲಸ ಮಾಡಿ, ಅನೇಕ ಕೆರೆಗಳನ್ನು ತುಂಬಿಸುತ್ತಿತ್ತು. ಈ ಕಾಮಗಾರಿಗಾಗಿಯೇ 1866-67ರಲ್ಲಿ .11,600 ವೆಚ್ಚ ಮಾಡಿದ್ದರು ಎಂಬ ಇತಿಹಾಸವಿದೆ.
ಯಾವ ಪ್ರಮುಖ ಕೆರೆ, ಏನಾಯಿತು?
ಸಿದ್ದಿಕಟ್ಟೆಕೆರೆ- ಕೆ.ಆರ್.ಮಾರುಕಟ್ಟೆ
ಧರ್ಮಾಂಬುಧಿ ಕೆರೆ - ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ
ಸಂಪಂಗಿ ಕೆರೆ- ಕಂಠೀರವ ಕ್ರೀಡಾಂಗಣ
ಕೋರಮಂಗಲ ಕೆರೆ- ರಾಷ್ಟ್ರೀಯ ಕ್ರೀಡಾಗ್ರಾಮ
ಕಾರಂಜಿ ಕೆರೆ- ಗಾಂಧಿಬಜಾರ್
ಕಾಡುಗೊಂಡನಹಳ್ಳಿ ಕೆರೆ- ಅಂಬೇಡ್ಕರ್ ವೈದ್ಯಕೀಯ ಕಾಲೇಜು
ದೊಮ್ಮಲೂರು ಕೆರೆ- ಬಿಡಿಎ ಬಡಾವಣೆ
ಮಿಲ್ಲರ್ಸ್ ಕೆರೆ- ಬ್ಯಾಡ್ಮಿಂಟನ್ ಕ್ರೀಡಾಂಗಣ
ಬಿಡಿಎಯಿಂದಲೇ 23 ಕೆರೆ ಡಿನೋಟಿಫಿಕೇಷನ್
ಕೆರೆಗಳ ಒತ್ತುವರಿ ಮತ್ತು ಅತಿಕ್ರಮಣದಲ್ಲಿ ಸರ್ಕಾರದ ಸಂಸ್ಥೆಗಳು ಹಿಂದೆ ಬಿದ್ದಿಲ್ಲ. ರಸ್ತೆ, ವಸತಿ, ಶುದ್ಧ ನೀರಿನ ಘಟಕ, ಪಾರ್ಕ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಒಟ್ಟು 23 ಕೆರೆಗಳನ್ನು ಡಿನೋಟಿಫಿಕೇಷನ್ ಮಾಡಿದೆ. ಇನ್ನು 18 ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವುದಾಗಿ ಎಂದು ಒಪ್ಪಿಕೊಂಡಿದೆ.
ನಗರದಲ್ಲಿ 148 ಕೆರೆ ಜೀವಂತ!
ನಗರದಲ್ಲಿ 167 ಕೆರೆಗಳನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ. ಅದರಲ್ಲಿ 29 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. 93 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 26 ಕೆರೆಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಟೆಂಡರ್ ಆಹ್ವಾನಿಸಲಾಗಿದೆ. 19 ಕೆರೆಗಳು ಇತರೆ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಒಟ್ಟಾರೆ 148 ಕೆರೆಗಳು ಮಾತ್ರ ನಗರದಲ್ಲಿ ಜೀವಂತವಾಗಿವೆ ಎಂದು ಮಾಹಿತಿ ನೀಡಿದೆ.
ಸರ್ಕಾರಿ, ಖಾಸಗಿ ಒತ್ತುವರಿ ವಿವರ (ಕೆರೆ ಒತ್ತುವರಿ ಅಧ್ಯಯನ ಸದನ ಸಮಿತಿ ವರದಿ)
(ಬೆಂಗಳೂರು ನಗರ ಕೆರೆ ಮಾತ್ರ)
ಒಟ್ಟು ಕೆರೆ 837
ಸರ್ಕಾರಿ ಒತ್ತುವರಿ ಸಂಖ್ಯೆ 975
ಖಾಸಗಿ ಒತ್ತುವರಿ ಸಂಖ್ಯೆ 4,146
ಒಟ್ಟು ಪ್ರದೇಶ 23,366 ಎಕರೆ
ಸರ್ಕಾರಿ ಒತ್ತುವರಿ ಪ್ರದೇಶ 2,194 ಎಕರೆ
ಖಾಸಗಿ ಒತ್ತುವರಿ ಪ್ರದೇಶ 2,340 ಎಕರೆ
ಒಟ್ಟು ಒತ್ತುವರಿ ಪ್ರದೇಶ 4,535 ಎಕರೆ
ಬಿಡಿಎ, ಬಿಬಿಎಂಪಿ ಸೇರಿದಂತೆ ವಿವಿಧ ಸಂಸ್ಥೆಗೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಬೇಕು. ಅಲ್ಲದೇ ನಗರದಲ್ಲಿ ಸದ್ಯ ಇರುವ ಕೆರೆಗಳನ್ನು ಪುರ್ನಶ್ಚೇತನಗೊಳಿಸಿದರೆ, ಬೆಂಗಳೂರಿನ ಜನತೆಗೆ ಕುಡಿಯುವುದಕ್ಕೆ ಕಾವೇರಿ ನೀರಿನ ಮೇಲೆ ಅವಲಂಬಿಸುವ ಅಶ್ಯಕತೆ ಇವರುವುದಿಲ್ಲ.
-ಎಚ್.ಎಸ್.ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರರು
ನಗರದಲ್ಲಿ ಶೇ.60ರಷ್ಟುಮಂದಿ ಅಂತರ್ಜಲದ ಮೇಲೆ ಅವಲಂಬಿತರಾಗಿದ್ದಾರೆ. ಶೇ.40ರಷ್ಟುಮಾತ್ರ ಕಾವೇರಿ ಸರಬರಾಜು ಮಾಡಲಾಗುತ್ತಿದೆ. ಕೆರೆಗಳಿಗೆ ತ್ಯಾಜ್ಯ ನೀರು ಹರಿಸುವುದನ್ನು ತಡೆಗಟ್ಟಬೇಕು. ಜತೆಗೆ ಮಳೆ ನೀರು ಕೊಯ್ಲು, ಇಂಗು ಗುಂಡಿಗಳನ್ನು ನಿರ್ಮಿಸುವ ಮೂಲಕ ಮಳೆ ನೀರನ್ನು ಹಿಡಿದಿಡುವ ಕೆಲಸ ತ್ವರಿತವಾಗಿ ಆಗಬೇಕಾಗಿದೆ. ಇಲ್ಲವಾದರೆ, ನಗರದಲ್ಲಿ ಭಾರೀ ನೀರಿನ ಸಮಸ್ಯೆ ಎದುರಾಗುವುದರಲ್ಲಿ ಅನುಮಾನವಿಲ್ಲ. ಕೇವಲ ಸರ್ಕಾರ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ ಅತಿ ಮುಖ್ಯವಾಗಿದೆ.
-ಜಗದೀಶ್ ರೆಡ್ಡಿ, ಕೆರೆ ಸಂರಕ್ಷಣಾ ಕಾರ್ಯಕರ್ತ.
ವರದಿ : ವಿಶ್ವನಾಥ ಮಲೇಬೆನ್ನೂರು