ಜೂ.4ರಂದು ಕೇರಳಕ್ಕೆ ಮುಂಗಾರು: ರಾಜ್ಯ ಕರಾವಳಿ ಭಾಗದಲ್ಲಿ ಉತ್ತಮ ಮಳೆ

By Web DeskFirst Published May 15, 2019, 11:51 AM IST
Highlights

ಜೂ.4ರಂದು ಕೇರಳಕ್ಕೆ ಮುಂಗಾರು, ಆದರೆ ಈ ಬಾರಿ ಮಳೆ ಪ್ರಮಾಣ ಕಡಿಮೆ| ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಳೆ ಕೊರತೆ| ಕರಾವಳಿ ಕರ್ನಾಟಕ, ಕೇರಳದಲ್ಲಿ ಉತ್ತಮ ಮಳೆ

ನವದೆಹಲಿ[ಮೇ.15]: ಕೃಷಿ, ಕುಡಿಯುವ ನೀರು, ವಿದ್ಯುತ್‌ ಉತ್ಪಾದನೆಗೆ ಅತ್ಯಂತ ಅಗತ್ಯವಾಗಿರುವ ಹಾಗೂ ದೇಶದ ಆರ್ಥಿಕಾಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುವ ಮುಂಗಾರು ಮಾರುತಗಳು ಈ ಬಾರಿ ಜೂ.4ರಂದು ಕೇರಳವನ್ನು ಪ್ರವೇಶಿಸಲಿವೆ. ಆದರೆ ಈ ಬಾರಿ ಸರಾಸರಿಗಿಂತ ಕಡಿಮೆ ಮಳೆಯಾಗುವ ನಿರೀಕ್ಷೆ ಇದೆ ಎಂದು ದೇಶದ ಏಕೈಕ ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ಭವಿಷ್ಯ ನುಡಿದಿದೆ.

ಈ ಬಾರಿ ಮುಂಗಾರು ಮಾರುತಗಳ ಮೇಲೆ ‘ಎಲ್‌ ನಿನೋ’ ಹವಾಮಾನ ವಿದ್ಯಮಾನ ಪರಿಣಾಮ ಬೀರುವುದರಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಜೂ.1ರಂದು ಕೇರಳಕ್ಕೆ ಪ್ರವೇಶಿಸುವ ಮುಂಗಾರು ಮಾರುತಗಳು ಈ ಬಾರಿ ಸ್ವಲ್ಪ ತಡವಾಗಲಿದೆ. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಕ್ಕೆ ಮುಂಗಾರು ಮಾರುತಗಳ ಮೇ 22ರ ವೇಳೆಗೆ ಪ್ರವೇಶ ಮಾಡಲಿದ್ದು, ಜೂ.4ರ ವೇಳೆಗೆ ದೇಶದ ಕರಾವಳಿ ರಾಜ್ಯ ಕೇರಳವನ್ನು ಪ್ರವೇಶಿಸಲಿವೆ. ಬಳಿಕ ಜುಲೈ ಮಧ್ಯಭಾಗದೊಳಗೆ ಇಡೀ ಭಾರತವನ್ನು ವ್ಯಾಪಿಸುತ್ತವೆ. ದೀರ್ಘಾವಧಿ ಸರಾಸರಿಯಲ್ಲಿ ದೇಶದಲ್ಲಿ ಶೇ.93ರಷ್ಟುಮಳೆಯಾಗುವ ನಿರೀಕ್ಷೆ ಇದೆ ಎಂದು ಸ್ಕೈಮೆಟ್‌ ತಿಳಿಸಿದೆ.

ದಕ್ಷಿಣ ಪರಾರ‍ಯಯ ದ್ವೀಪದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಶೇ.95ರಷ್ಟುಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ಶೇ.92ರಷ್ಟುಮಳೆಯಾಗಲಿದೆ ಎಂದು ಹೇಳಿದೆ. ಇನ್ನು ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ಉತ್ತಮ ಮಳೆಯಾಗಲಿದ್ದರೆ, ಕರ್ನಾಟಕದ ಉತ್ತರ ಒಳಭಾಗದಲ್ಲಿ ಮಳೆ ಕೊರತೆಯಾಗಲಿದೆ. ಅದೇ ರೀತಿ ವಿದರ್ಭ, ಮರಾಠವಾಡ, ಪಶ್ಚಿಮ ಮಧ್ಯಪ್ರದೇಶ, ಗುಜರಾತ್‌ನಲ್ಲಿ ಮಳೆ ಪ್ರಮಾಣ ಕಡಿಮೆ ಇರಲಿದೆ ಎಂದು ಸ್ಕೈಮೆಟ್‌ ಹೇಳಿದೆ.

ದೇಶದಲ್ಲಿ ಆಗುವ ಮಳೆಯಲ್ಲಿ ಶೇ.70ರಷ್ಟನ್ನು ಮುಂಗಾರು ಮಾರುತಗಳೇ ನೀಡುತ್ತವೆ. ಕೃಷಿ ಕ್ಷೇತ್ರದ ಯಶಸ್ಸು ಮುಂಗಾರು ಮಳೆಯಲ್ಲೇ ಅಡಗಿದೆ. ಬರಗಾಲ, ಕುಡಿಯುವ ನೀರಿನ ಸಮಸ್ಯೆಗೂ ಈ ಮಳೆ ದೇಶಕ್ಕೆ ಅತ್ಯಂತ ಅವಶ್ಯಕವಾಗಿದೆ.

ಏನಿದು ಎಲ್‌ ನಿನೋ:

ಪೆಸಿಫಿಕ್‌ ಸಾಗರದ ಮೇಲ್ಮೈನಲ್ಲಿ ತಾಪಮಾನ ಹೆಚ್ಚಾಗಿ, ತೇವಾಂಶ ಮಿಶ್ರಿತ ಮಾರುತಗಳು ಭಾರತದತ್ತ ಹೋಗುವುದಕ್ಕೆ ಅಡ್ಡಿಯಾಗುತ್ತದೆ. ಇದನ್ನೇ ಎಲ್‌ ನಿನೋ ಪರಿಣಾಮ ಎನ್ನುತ್ತಾರೆ. ಈ ಪರಿಣಾಮ ಉಂಟಾದಾಗ ಸಾಮಾನ್ಯವಾಗಿ ಮಳೆ ಕಡಿಮೆಯಾಗುತ್ತದೆ.

click me!