ಮುಂಗಾರು ಪ್ರವೇಶ 2 ದಿನ ತಡ : ಉತ್ತಮ ಮಳೆ ಸಾಧ್ಯತೆ

By Web DeskFirst Published Jun 6, 2019, 9:12 AM IST
Highlights

ರಾಜ್ಯಕ್ಕೆ ಮುಂಗಾರು ಮಳೆ 2 ದಿನಗಳ ಕಾಲ ತಡವಾಗಿ ಪ್ರವೇಶಿಸಲಿದ್ದು, ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ಬೆಂಗಳೂರು :  ರಾಜ್ಯಕ್ಕೆ ಮುಂಗಾರು ಪ್ರವೇಶ ಎರಡು ದಿನ ತಡವಾಗಲಿದ್ದು, ಜೂ.9 ಅಥವಾ 10ರಂದು ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬುಧವಾರ ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ ಜೂನ್‌ 8ರಂದು ಕೇರಳದ ಕರಾವಳಿಗೆ ಮುಂಗಾರು ಪ್ರವೇಶಿಸಲಿದ್ದು, ಜೂನ್‌ 9 ಅಥವಾ 10ರಂದು ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ.

ಕಳೆದ ಶುಕ್ರವಾರ ಪ್ರಸಕ್ತ ವರ್ಷದ ಮುಂಗಾರು ಕುರಿತು ಎರಡನೇ ವರದಿ ಬಿಡುಗಡೆಗೊಳಿಸಿದ್ದ ಭಾರತೀಯ ಹವಾಮಾನ ಇಲಾಖೆ ದೇಶದಲ್ಲಿ ಈ ಬಾರಿ ವಾಡಿಕೆಯಷ್ಟೆಮಳೆಯಾಗಲಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ವಾಡಿಕೆಯಂತೆ ಶೇ.97ರಷ್ಟುಮುಂಗಾರು ಮಳೆಯಾಗುವ ಸಾಧ್ಯತೆ ಇದೆ. ಶೇ.8ರಷ್ಟು ಹೆಚ್ಚು - ಕಡಿಮೆಯಾಗಬಹುದು ಎಂದು ತಿಳಿಸಿತ್ತು.

ಮುಂಗಾರು ಚುರುಕು:  ಎರಡು ದಿನ ಮುಂಗಾರು ಪ್ರವೇಶ ವಿಳಂಬವಾಗಲಿದೆ ಎಂದು ಆತಂಕಪಡಬೇಕಾದ ಅಗತ್ಯವಿಲ್ಲ. ಮುಂಗಾರು ಚುರುಕಾಗಿದ್ದು, ರಾಜ್ಯಾದ್ಯಂತ ಉತ್ತಮ ಮಳೆ ಆಗಲಿದೆ. ಉಷ್ಣಾಂಶದಲ್ಲಿ ಈಗಾಗಲೇ ಇಳಿಕೆಯಾಗಿದ್ದು, ಇನ್ನಷ್ಟುಕಡಿಮೆಯಾಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್‌ ಗವಾಸ್ಕರ್‌ ತಿಳಿಸಿದ್ದಾರೆ.

ಮಳೆ ಮುಂದುವರಿಯಲಿದೆ:  ಮೇಲ್ಮೈ ಸುಳಿಗಾಳಿ ಹಾಗೂ ಗಾಳಿಯ ಒತ್ತಡ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಮಳೆ ಮುಂದುವರೆಯಲಿದೆ. ಗದಗ, ಹಾವೇರಿ, ಕೊಪ್ಪಳ, ಧಾರವಾಡ, ಕಲಬುರಗಿ, ಯಾದಗಿರಿ, ವಿಜಯಪುರ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಉತ್ತಮ ಮಳೆ ನಿರೀಕ್ಷಿಸಲಾಗಿದೆ. 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಬುಧವಾರ ಬಹುತೇಕ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ನಿರ್ಮಾಣಗಿತ್ತು. ಬೆಂಗಳೂರು ನಗರ ಹಾಗೂ ಗ್ರಾಮಾಂತರ, ರಾಮನಗರ, ಚಾಮರಾಜನಗರ, ಚಿಕ್ಕಮಗಳೂರು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾದ ವರದಿಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.

click me!