ದೇಶದ 1 ಕೋಟಿ ರೈತರಿಗೆ ಮೋದಿ ಹಣ!

By Web DeskFirst Published Feb 15, 2019, 10:05 AM IST
Highlights

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬ ರೈತರಿಗೂ 2000 ರು.ನಂತೆ ಮೊದಲ ಕಂತಿನಲ್ಲಿ 1 ಕೋಟಿ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆ ಮಾಡಲಿದ್ದಾರೆ 

ನವದೆಹಲಿ: ದೇಶದ ರೈತರಿಗೆ ಸಹಾಯ ಧನ ನೀಡುವ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬ ರೈತರಿಗೂ 2000 ರು.ನಂತೆ ಮೊದಲ ಕಂತಿನಲ್ಲಿ 1 ಕೋಟಿ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆ ಮಾಡಲಿದ್ದಾರೆ ಎಂದು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 75 ಸಾವಿರ ಕೋಟಿ ರು. ಮೌಲ್ಯದ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಫೆ.24ರಂದು ಚಾಲನೆ ನೀಡಲಿದ್ದಾರೆ.

ಈ ಬಗ್ಗೆ ಗುರುವಾರ ಮಾತನಾಡಿದ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, ‘ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಫೆ.24ರಂದು ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಖಾತೆಗಳಿಗೆ ಹಣ ಜಮೆ ಮಾಡುವ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಂದಿನ ದಿನವೇ 1 ಕೋಟಿಗಿಂತ ಹೆಚ್ಚಿನ ಫಲಾನುಭವಿಗಳ ಖಾತೆಗಳಿಗೆ ಮೋದಿ ಅವರು ಮೊದಲ ಕಂತಿನ ಹಣ ಜಮೆ ಮಾಡಲಿದ್ದಾರೆ. ಅಲ್ಲದೆ, 2ನೇ ಕಂತಿನ ಹಣವನ್ನು ಏ.1ರಿಂದ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ,’ ಎಂದು ಹೇಳಿದ್ದಾರೆ.

ಇನ್ನು ಅರಣ್ಯ ಪ್ರದೇಶದಲ್ಲಿ ಕೃಷಿ ಮಾಡುವ ಹಕ್ಕು ಹೊಂದಿರುವ ಬುಡಕಟ್ಟು ಜನಾಂಗದವರೂ ಸಹ ಈ ಯೋಜನೆಯ ಫಲಾನುಭವಿಯಾಗಲು ಅರ್ಹರಿರುತ್ತಾರೆ. ಗುರುವಾರದಿಂದಲೇ ಈ ಯೋಜನೆಗೆ ಅರ್ಹವಿರುವ ರೈತರ ಮಾಹಿತಿಗಳನ್ನು ಎಲ್ಲ ರಾಜ್ಯಗಳು ಪಿಎಂ-ಕಿಸಾನ್‌ ಪೋರ್ಟಲ್‌ಗೆ ದಾಖಲೆಗಳನ್ನು ಸಲ್ಲಿಸುತ್ತಿವೆ. ಈಗಾಗಲೇ 12ಕ್ಕೂ ಹೆಚ್ಚು ರಾಜ್ಯಗಳು ಈ ಕುರಿತಾದ ಶೇ.90ರಷ್ಟುಕೆಲಸವನ್ನು ಪೂರ್ಣಗೊಳಿಸಿವೆ ಎಂದು ಅವರು ತಿಳಿಸಿದರು.

2019-20ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ದೇಶದ ಸಣ್ಣ ಮತ್ತು ಮಧ್ಯಮ ವರ್ಗದ ಪ್ರತಿಯೊಬ್ಬ ರೈತರಿಗೂ ವಾರ್ಷಿಕ 6000 ರು. ಸಹಾಯ ಧನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು.

click me!