ನಿರ್ವಹಣಾ ಮಂಡಳಿ ರಚಿಸಿದರೆ ಕರ್ನಾಟಕದ ಕೆಂಗಣ್ಣು, ರಚಿಸದಿದ್ದರೆ ತಮಿಳುನಾಡಿನ ಕೆಂಗಣ್ಣು; ಇಕ್ಕಟ್ಟಿನಲ್ಲಿ ಮೋದಿ ಸರ್ಕಾರ

By Suvarna Web DeskFirst Published Feb 18, 2018, 9:33 AM IST
Highlights

ಕಾವೇರಿ ತೀರ್ಪಿನ ಅನುಷ್ಠಾನಕ್ಕೆ ವ್ಯವಸ್ಥೆ ರೂಪಿಸಲು 6 ವಾರಗಳ ಕಾಲಾವಧಿಯನ್ನು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೀಡಿದ್ದು, ಚುನಾವಣೆ ಹೊಸ್ತಿಲಲ್ಲಿ ಇದು ಮೋದಿ ಸರ್ಕಾರಕ್ಕೆ ಇನ್ನೊಂದು ಹಗ್ಗ ಹಾವಾಗುವ ಸಂದರ್ಭ.
 

ಬೆಂಗಳೂರು (ಫೆ.17): ಕಾವೇರಿ ತೀರ್ಪಿನ ಅನುಷ್ಠಾನಕ್ಕೆ ವ್ಯವಸ್ಥೆ ರೂಪಿಸಲು 6 ವಾರಗಳ ಕಾಲಾವಧಿಯನ್ನು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೀಡಿದ್ದು, ಚುನಾವಣೆ ಹೊಸ್ತಿಲಲ್ಲಿ ಇದು ಮೋದಿ ಸರ್ಕಾರಕ್ಕೆ ಇನ್ನೊಂದು ಹಗ್ಗ ಹಾವಾಗುವ ಸಂದರ್ಭ.
ಕಾವೇರಿ ನ್ಯಾಯಾಧಿಕರಣ ಹೇಳಿರುವ ಪ್ರಕಾರ 1980 ರ ಅಂತರ್ ರಾಜ್ಯ ನದಿ ವ್ಯಾಜ್ಯ ಕಾನೂನಿನ ತಿದ್ದುಪಡಿ ಸೆಕ್ಷನ್ 6 ಎ ಪ್ರಕಾರ ಟ್ರಿಬ್ಯುನಲ್  ಆದೇಶವನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಒಂದು ವ್ಯವಸ್ಥೆ ರೂಪಿಸಬೇಕು. ಅದನ್ನು ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಪಡೆದೇ ರೂಪಿಸಬೇಕು. ಟ್ರಿಬ್ಯುನಲ್ ತನ್ನ ಆದೇಶದಲ್ಲಿ ಇಂಥ ವ್ಯವಸ್ಥೆ ಕಾವೇರಿ ನಿರ್ವಹಣಾ ಮಂಡಳಿ ಆಗಿರಬಹುದು ಎಂದು ಹೇಳಿ ಅದು ಹೇಗಿರಬೇಕು ಎಂದು ಹೇಳಿದೆಯಾದರೂ ಕೂಡ ಇದನ್ನು ಒಪ್ಪುವ ಅಥವಾ ಪರಿಷ್ಕರಿಸಿ ಮಾರ್ಪಾಡು ಮಾಡುವ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ. ಈಗ ಸುಪ್ರೀಂ ಕೂಡ ಟ್ರಿಬ್ಯುನಲ್ ಮಾಡಿದ ಹಂಚಿಕೆಯನ್ನು ಸ್ವಲ್ಪ ಬದಲಾಯಿಸಿ ಇದನ್ನು ಅನುಷ್ಠಾನಗೊಳಿಸಲು ಸೆಕ್ಷನ್ 6 ಎ ಅಡಿಯಲ್ಲಿ 6 ವಾರಗಳಲ್ಲಿ ಒಂದು ವ್ಯವಸ್ಥೆ ರೂಪಿಸಿ ಎಂದು ಹೇಳಿದೆ. ಇದಕ್ಕೆ ಯಾವುದೇ ಕಾರಣಕ್ಕೂ ವಿಸ್ತರಣೆ ಇಲ್ಲ ಎಂಬ ಕಟ್ಟಪ್ಪಣೆ ಕೂಡ ವಿಧಿಸಿದೆ.

ಮೋದಿ ಸರ್ಕಾರಕ್ಕೆ ಮುಖ್ಯ ಪೇಚು ಇರುವುದೇ ಇಲ್ಲಿ. ಕರ್ನಾಟಕದ ವಿರೋಧ ಭೀತಿ: ಮಾ.5 ರಿಂದ ಸಂಸತ್ತಿನ ಅಧಿವೇಶನ ನಡೆಯಲಿದ್ದು, ಸುಪ್ರೀಂಕೋರ್ಟ್ ತೀರ್ಪಿನ ಪಾಲನೆ ಮಾಡಬೇಕಾದರೆ ಏಪ್ರಿಲ್ ಒಳಗೆ ಹೊಸ ಅನುಷ್ಠಾನ ವ್ಯವಸ್ಥೆ ಹೇಗಿರಬೇಕು ಎಂದು ಮಸೂದೆ ರೂಪಿಸಿ ಸಂಸತ್ತಿನ ಒಪ್ಪಿಗೆ ಪಡೆಯಬೇಕು. ಹೀಗಾದರೆ ಚುನಾವಣೆ ಹೊಸ್ತಿಲಲ್ಲಿ ಕರ್ನಾಟಕದ ಜನ ಮುನಿಸಿಕೊಳ್ಳುವುದು ನಿಶ್ಚಿತ.
ತಮಿಳುನಾಡಿನ ವಿರೋಧ ಭೀತಿ: ಒಂದು ವೇಳೆ ಕೇಂದ್ರ ಸರ್ಕಾರಕ್ಕೆ ಅನುಷ್ಠಾನ ಮಂಡಳಿ ರಚಿಸಲು ಸಂಸತ್ತಿನ ಒಪ್ಪಿಗೆ ಪಡೆಯಲು ಸಮಯ ಬೇಕು ಎಂದಾದಲ್ಲಿ ಮುಂದಿನ 6 ವಾರದೊಳಗೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಅನುಮತಿ
ಪಡೆದು ಬೀಸೋ ದೊಣ್ಣೆಯಿಂದ ಪಾರಾಗಬೇಕು. ಆದರೆ ಹಾಗೆ ಮಾಡಿದಾಗ ತಮಿಳುನಾಡು ಮುನಿಸಿಕೊಂಡು ದೂರ ಹೋಗುವುದು ನಿಶ್ಚಿತ.
ಒಟ್ಟಾರೆ ಮಹದಾಯಿ ಪ್ರಕರಣದಲ್ಲಿ ಹೇಗೋ ತಪ್ಪಿಸಿಕೊಂಡ ಮೋದಿ ಸರ್ಕಾರ ಕರ್ನಾಟಕದ  ಚುನಾವಣೆಯ ಹೊಸ್ತಿಲಲ್ಲಿ ಕಾವೇರಿ ತರಹದ ಕೆಂಡದಂಥ ರಾಜಕೀಯ ಸೃಷ್ಟಿಸುವ ವಿಷಯದ ಜೊತೆಗೆ ಒಂದು ಕರ್ನಾಟಕ ಎಂಬ ಚುನಾವಣಾ
ರಾಜ್ಯವನ್ನು, ಪ್ರಾದೇಶಿಕತೆಯೇ ರಾಷ್ಟ್ರೀಯತೆ ಎನ್ನುವ ತಮಿಳುನಾಡನ್ನು, ಇದೆಲ್ಲದರ ಜೊತೆಗೆ ಸಂಸತ್ತು ಹಾಗೂ ಸುಪ್ರೀಂಕೋರ್ಟ್ ಅನ್ನು ಏಕಕಾಲಕ್ಕೆ ಹೇಗೆ ನಿಭಾಯಿಸುತ್ತದೆ ಎನ್ನುವುದೇ
ಉಳಿದಿರುವ ಕುತೂಹಲ.
ನರ್ಮದಾ ವ್ಯಾಜ್ಯದಲ್ಲಿ ಆದ ತಿದ್ದುಪಡಿ: 1956 ರಲ್ಲಿ ಜಾರಿಗೆ ಬಂದ ಅಂತರ್‌ರಾಜ್ಯ ನದಿ ವ್ಯಾಜ್ಯ ಕಾನೂನಿನಲ್ಲಿ ಕೇಂದ್ರದ ನಿಗಾ ಇರುವ ಅನುಷ್ಠಾನ ಮಂಡಳಿಯ ಉಲ್ಲೇಖ ಇರಲಿಲ್ಲ .ಆದರೆ ನರ್ಮದಾ ಟ್ರಿಬ್ಯುನಲ್ ಆದೇಶ ಹೇಗೆ ಜಾರಿಯಾಗಬೇಕು ಎನ್ನುವ ಪ್ರಶ್ನೆ ಮೂಡಿದ ನಂತರ ಈ ಕಾನೂನಿಗೆ 1980 ರಲ್ಲಿ ತಿದ್ದುಪಡಿ ತಂದು ಸೆಕ್ಷನ್ 6 ಎ ಸೇರಿಸಲಾಯಿತು. ಇದರ ಪ್ರಕಾರ ಟ್ರಿಬ್ಯುನಲ್ ಮಾಡಿದ ನೀರಿನ ಹಂಚಿಕೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕೇಂದ್ರದ ಅಧ್ಯಕ್ಷತೆಯ ಅನುಷ್ಠಾನ ಮಂಡಳಿ ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಪಡೆದ ಬಳಿಕ ರೂಪಿಸಬೇಕು ಎಂದಿದೆ. 

click me!