
ಬೆಂಗಳೂರು : ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ರಘು ಆಚಾರ್ ಅವರಿಗೆ ಮೂರ್ನಾಲ್ಕು ಮಂದಿ ಅಪರಿಚಿತರು ಕರೆ ಮಾಡಿ ಬೆದರಿಕೆ ಹಾಕಿದ್ದು, ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸರ್ಜಾಪುರ ನಿವಾಸಿಯಾಗಿರುವ ರಘು ಅವರಿಗೆ ಅಪರಿಚಿತರು ಕರೆ ಮಾಡಿ ‘ನಾವು ಹೇಳಿದ ಹಾಗೇ ಕೇಳಬೇಕು. ನೀವು ಕೇಳದಿದ್ದಲ್ಲಿ, ನಿಮ್ಮ ಕೆಲವು ವಿಡಿಯೋ ತುಣಕುಗಳು ನಮ್ಮ ಬಳಿ ಇವೆ. ಆ ವಿಡಿಯೋ ತುಣಕುಗಳನ್ನು ಅಶ್ಲೀಲ ವಿಡಿಯೋಗಳನ್ನಾಗಿ ಪರಿವರ್ತಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರ ಆಗುವ ಹಾಗೆ ಮಾಡುತ್ತೇವೆ. ಬಳಿಕ ಬೆಳ್ಳಂದೂರಿನಲ್ಲಿರುವ ನಿಮ್ಮ ಕಚೇರಿಗೆ ಮುತ್ತಿಗೆ ಹಾಕಿ ನಿಮ್ಮ ರಾಜಕೀಯ ಜೀವನ ಹಾಳು ಮಾಡುತ್ತೇವೆ’ ಎಂಬುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ ಎಂದು ರಘು ಆಚಾರ್ ಅವರು ಡಿ.7ರಂದು ಬೆಳ್ಳಂದೂರು ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಆರೋಪಿ ಡಿ.4ರಂದು ಮೊದಲ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಮೊದಲು ರಘು ಆಚಾರ್ ಅವರು ಕರೆಯನ್ನು ನಿರ್ಲಕ್ಷ್ಯ ಮಾಡಿದ್ದರು. ಇದಾದ ಬಳಿಕವೂ ನಿರಂತರವಾಗಿ ಹತ್ತಾರು ಬಾರಿ ಆರೋಪಿ ಡಿ.7ರ ತನಕ ರಘು ಆಚಾರ್ ಅವರ ಮೊಬೈಲ್‌ಗೆ ಕರೆ ಮಾಡಿದ್ದಾನೆ. ನಂತರ ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ರಘು ಆಚಾರ್ ಅವರಿಗೆ ಆರೋಪಿ ವಾಟ್ಸಪ್ ಕಾಲ್ ಮಾಡಿ ಬೆದರಿಕೆ ಹಾಕಲಾಗಿದೆ. ಆರೋಪಿಗಳ ಪತ್ತೆ ಕ್ರಮಕೈಗೊಳ್ಳಲಾಗಿದ್ದು, ಮೈಸೂರಿನಿಂದ ವ್ಯಕ್ತಿಯೊಬ್ಬ ಕರೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಕರೆ ಮಾಡಿ ಬೆದರಿಕೆ ಹಾಕಿರುವ ವ್ಯಕ್ತಿಯ ಪತ್ತೆಗೆ ಮೈಸೂರಿಗೆ ಪೊಲೀಸ್ ತಂಡವೊಂದು ತೆರಳಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು. ಈ ಸಂಬಂಧ ಪ್ರಾಣ ಬೆದರಿಕೆ, ಮಾಹಿತಿ ತಂತ್ರಜ್ಞಾನ ಕಾಯ್ದೆ, ವ್ಯಕ್ತಿಯ ವೈಯಕ್ತಿಕ ಗೌರವಕ್ಕೆ ಧಕ್ಕೆಯಡಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.