ಮತ್ತೊಮ್ಮೆ ಸರ್ಕಾರದ ವಿರುದ್ಧ ಗುಡುಗಿದ ಬಿಎಸ್ ವೈ

By Web DeskFirst Published Dec 11, 2018, 7:55 AM IST
Highlights

‘ದೋಸ್ತಿ ಸರ್ಕಾರ’ದ ವಿರುದ್ಧ ಬಿಜೆಪಿ ಶಕ್ತಿಪ್ರದರ್ಶನ ನಡೆಸಿದೆ. ರೈತರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅಧಿವೇಶನದಲ್ಲಿ ಸರ್ಕಾರದ ಬೆವರಿಳಿಸುವ ಬಗ್ಗೆ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. .

ಬೆಳಗಾವಿ :  ಬೆಳಗಾವಿ ವಿಧಾನಮಂಡಲ ಅಧಿವೇಶನ ಆರಂಭದ ದಿನವೇ ಬೃಹತ್‌ ರೈತ ಸಮಾವೇಶ ನಡೆಸುವ ಮೂಲಕ ‘ದೋಸ್ತಿ ಸರ್ಕಾರ’ದ ವಿರುದ್ಧ ಬಿಜೆಪಿ ಶಕ್ತಿಪ್ರದರ್ಶನ ನಡೆಸಿದೆ. ರೈತರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅಧಿವೇಶನದಲ್ಲಿ ಸರ್ಕಾರದ ಬೆವರಿಳಿಸುವ ಎಚ್ಚರಿಕೆ ನೀಡಿದೆ.

ಸಮಾವೇಶದುದ್ದಕ್ಕೂ ಸಾಲ ಮನ್ನಾ, ಉತ್ತರ ಕರ್ನಾಟಕದ ನಿರ್ಲಕ್ಷ್ಯ, ಕಬ್ಬು ಬೆಳೆಗಾರರ ವಿಚಾರ ಪ್ರಸ್ತಾಪಿಸಿದ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರು ದೋಸ್ತಿ ಸರ್ಕಾರದ ವಿರುದ್ಧ ಸದನದ ಒಳಗೆ-ಹೊರಗೆ ಹೋರಾಟ ರೂಪಿಸುವ ಸಂದೇಶ ರವಾನಿಸಿದರು. ಸಾಲ ಮನ್ನಾ ಮಾಡಿ, ಇಲ್ಲವೇ ಮನೆಗೆ ಹೋಗಿ. ರೈತರ ಜತೆ ಚೆಲ್ಲಾಟವಾಡುವ ಕೆಲಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ, ಮಂಗಳವಾರದಿಂದಲೇ ಸದನದ ಒಳಗೆ ರೈತರ ವಿಚಾರ ಪ್ರಸ್ತಾಪಿಸುವುದಾಗಿ ಹಾಗೂ ಸರ್ಕಾರವನ್ನು ಅಧಿವೇಶನದಲ್ಲಿ ಒಂಟಿಗಾಲಲ್ಲಿ ನಿಲ್ಲಿಸುವುದಾಗಿ ಗುಡುಗಿದರು.

ನಗರದ ಬಿ.ಎಸ್‌.ಯಡಿಯೂರಪ್ಪ ಮಾರ್ಗದ ಬಳಿ ಮಾಲಿನಿ ಸಿಟಿಯಲ್ಲಿ ಸೋಮವಾರ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರದ ವಿರುದ್ಧ ತೀವ್ರ ಹರಿಹಾಯ್ದರು. ಒಂದು ಕಡೆ ರಾಜ್ಯದ ಜನತೆ ಬರಗಾಲದಿಂದ ತತ್ತರಿಸುತ್ತಿದ್ದಾರೆ, ಇನ್ನೊಂದು ಕಡೆ ರೈತರ ಸಾಲ ಮನ್ನಾ ಮಾಡುವುದಾಗಿ ಕುಂಟು ನೆಪ ಹೇಳಿ ಮೈತ್ರಿ ಸರ್ಕಾರ ರೈತರ ಬದುಕಿನ ಜತೆಗೆ ಚೆಲ್ಲಾಟವಾಡುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಜನ ಹಿತ ಮರೆತು ತುಘಲಕ್‌ ದರ್ಬಾರ್‌ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಕುಮಾರಸ್ವಾಮಿ ಅವರು ರೈತ ಮಹಿಳೆಗೆ ‘ನಾಲ್ಕು ವರ್ಷ ನೀನು ಎಲ್ಲಿ ಮಲಗಿದ್ದೆ’ ಎಂದು ಹಗುರವಾಗಿ ಮಾತನಾಡಿದ್ದಾರೆ. ಇದು ಮುಖ್ಯಮಂತ್ರಿಗೆ ಶೋಭೆ ತರುವ ವಿಚಾರವಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳಾದರೂ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ರಾಜ್ಯವನ್ನು ಆವರಿಸಿರುವ ಭೀಕರ ಬರ ಸ್ಥಿತಿ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ರೈತರು ಮನಬಂದಂತೆ ಕಡಿಮೆ ಬೆಲೆಗೆ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಕುಂಭಕರ್ಣ ನಿದ್ದೆಯಲ್ಲಿರುವ ಸರ್ಕಾರವನ್ನು ಸಮಾವೇಶದ ಮೂಲಕ ಬಡಿದೆಬ್ಬಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುವರ್ಣಸೌಧದ ಎದುರಿಗೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ರೈತ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಟೆಂಟ್‌ಗಳಲ್ಲಿ ಹೋರಾಟ ಮಾಡುತ್ತಿವೆ. ಸಮ್ಮಿಶ್ರ ಸರ್ಕಾರದ ಬಗ್ಗೆ ಜನತೆಗೆ ವಿಶ್ವಾಸ ಇಲ್ಲ. ಮಂಗಳವಾರದಿಂದ ವಿಧಾನಮಂಡಲ ಅಧಿವೇಶನದಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುವುದು, ಸರ್ಕಾರದ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಬಿಎಸ್‌ವೈ ಹೇಳಿದರು.

ಇನ್ನೂ 15 ವರ್ಷ: ರೈತರು, ನೇಕಾರರು ಸೇರಿ ರಾಜ್ಯದ ಜನತೆಗೆ ನ್ಯಾಯ ಕೊಡಿಸಲು, ಹೋರಾಟ ಮಾಡಲು ನಮ್ಮ ಕೈ, ಕಾಲುಗಳು ಗಟ್ಟಿಇವೆ. ನಾನಿನ್ನೂ 15 ವರ್ಷ ರಾಜ್ಯ ರಾಜಕಾರಣದಲ್ಲಿರುತ್ತೇನೆ. ಕಳೆದ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ ಕುಮಾರಸ್ವಾಮಿ 37 ಸ್ಥಾನ ಗೆದ್ದಿದ್ದಾರೆ. ಕಾಂಗ್ರೆಸ್‌ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದಾರೆ. ಕುಮಾರಸ್ವಾಮಿ ಎಷ್ಟುಬಾರಿ ಉತ್ತರ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದಾರೆ? ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರೂ ವಾಸ ಮಾಡಿಲ್ಲ. ಹಳ್ಳಿಯಲ್ಲೂ ವಾಸ ಮಾಡಿಲ್ಲ. ಸುಳ್ಳು ಭರವಸೆ ನೀಡುತ್ತಿದ್ದಾರೆ. ಇದೇ ರೀತಿ ಆಡಳಿತ ನಡೆಸಿದರೆ ಸರ್ಕಾರ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.

ನಾಟಕ ಬಹಳ ದಿನ ನಡೆಯಲ್ಲ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಮಾತನಾಡಿ, ರೈತರ ಸಾಲ ಮನ್ನಾ ರೈತರ ಪಾಲಿಗೆ ಹಗಲುಗನಸಾಗಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಕಲಬುರಗಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೆಲ ರೈತರಿಗೆ ಕುಮಾರಸ್ವಾಮಿ ಋುಣಮುಕ್ತ ಪತ್ರಕೊಟ್ಟಿದ್ದಾರೆ. ಈ ನಾಟಕ ಬಹಳ ದಿನ ನಡೆಯಲ್ಲ. ನಿಮಗೆ ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ರಾಜ್ಯದ 43 ಲಕ್ಷ ರೈತರಿಗೆ ಋುಣಮುಕ್ತ ಪತ್ರ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ ಅವರು, ಕುಮಾರಸ್ವಾಮಿ ರಾಮನಗರ, ಮಂಡ್ಯ, ಹೊಳೆನರಸೀಪುರಕ್ಕಷ್ಟೇ ಮುಖ್ಯಮಂತ್ರಿ ಎಂದು ವ್ಯಂಗ್ಯವಾಡಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಚಿತ್ರರಂಗದಿಂದ ಕುಮಾರಸ್ವಾಮಿ ಮತ್ತು ವಕೀಲ ವೃತ್ತಿಯಿಂದ ಸಿದ್ದರಾಮಯ್ಯ ರಾಜಕಾರಣಕ್ಕೆ ಬಂದಿದ್ದಾರೆ. ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ. ಉತ್ತರ ಕರ್ನಾಟಕದ ವಿಚಾರ ಬಂದರೆ ನನಗೆ ಓಟು ಹಾಕಿದ್ದೀರಾ ಎಂದು ಪ್ರಶ್ನಿಸುವ ಕುಮಾರಸ್ವಾಮಿ, ಕೋಲಾರದವರು ಯಾರೂ ನನಗೆ ಓಟು ಹಾಕಿಲ್ಲ. ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ದೇವರು ಎಂದು ಟೆಂಪಲ್‌ ರನ್‌ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಜತೆಗೆ, ರಾಜ್ಯದ 100 ತಾಲೂಕುಗಳಲ್ಲಿ ಭೀಕರ ಬರಗಾಲ ಸ್ಥಿತಿಯಿದೆ. ರೈತರಿಗೆ ಕೂಡಲೇ ಸರ್ಕಾರ ಪರಿಹಾರ ನೀಡಬೇಕು. ರೈತರ ಸಾಲ ಮನ್ನಾ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಮನೆಗೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರವನ್ನು ಒಂಟಿಗಾಲಲ್ಲಿ ನಿಲ್ಲಿಸುವೆ

ಒಂದು ಕಡೆ ರಾಜ್ಯದ ಜನತೆ ಬರಗಾಲದಿಂದ ತತ್ತರಿಸುತ್ತಿದ್ದಾರೆ, ಇನ್ನೊಂದು ಕಡೆ ರೈತರ ಸಾಲ ಮನ್ನಾ ಮಾಡುವುದಾಗಿ ಕುಂಟು ನೆಪ ಹೇಳಿ ಮೈತ್ರಿ ಸರ್ಕಾರ ರೈತರ ಬದುಕಿನ ಜತೆಗೆ ಚೆಲ್ಲಾಟವಾಡುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಜನ ಹಿತ ಮರೆತು ತುಘಲಕ್‌ ದರ್ಬಾರ್‌ ಮಾಡುತ್ತಿದ್ದಾರೆ. ಮಂಗಳವಾರವೇ ಸದನದಲ್ಲಿ ರೈತರ ವಿಚಾರ ಪ್ರಸ್ತಾಪಿಸುತ್ತೇನೆ. ಸರ್ಕಾರವನ್ನು ಒಂಟಿಗಾಲಲ್ಲಿ ನಿಲ್ಲುವಂತೆ ಮಾಡುತ್ತೇನೆ.

- ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

click me!