
ಬೆಂಗಳೂರು(ಮೇ.04): ಭೀಕರ ಬರಗಾಲದಲ್ಲಿಯೂ ಶಾಸಕರ ವಿದೇಶ ಮತ್ತು ಹೊರ ರಾಜ್ಯ ಪ್ರವಾಸ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿರುವ ಬೆನ್ನಲ್ಲೇ, ಆಧೀನ ಶಾಸನ ರಚನಾ ಸಮಿತಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಲ್ಯಾಣ ಸಮಿತಿಯ ಸದಸ್ಯರಾಗಿರುವ ಶಾಸಕರು ಉತ್ತರ ಭಾರತ ಮತ್ತು ಕಣಿವೆ ರಾಜ್ಯಗಳಲ್ಲಿ ಪ್ರವಾಸ ಹೊರಡಲಿಕ್ಕೆ ಸ್ಪೀಕರ್ ಕೋಳಿವಾಡ ಹಸಿರು ನಿಶಾನೆ ತೋರಿಸಿದ್ದಾರೆ.
ವಿದೇಶ ಪ್ರವಾಸದಿಂದ ವಂಚಿತರಾಗಿದ್ದ ಶಾಸಕರು ಈಗ ಉತ್ತರ ಭಾರತ ರಾಜ್ಯಗಳಲ್ಲಿ ಅಧ್ಯಯನ ಪ್ರವಾಸ ಕೈಗೊಳ್ಳಲು ಅಣಿಯಾಗಿದ್ದಾರೆ. ಇದೇ 9ರಿಂದ 16ರವರೆಗೆ ಅಧೀನ ಶಾಸನ ರಚನಾ ಸಮಿತಿಯ ಸದಸ್ಯರ ಪ್ರವಾಸ ಸಂಬಂಧ ಇಂದು ಅಧಿಕೃತ ಆದೇಶ ಹೊರಬಿದ್ದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಸದಸ್ಯರು ಪ್ರವಾಸ ಕೈಗೊಳ್ಳುವ ಸಂಬಂಧ ಸಮಿತಿ ಈಗಾಗಲೇ ತೀರ್ಮಾನಿಸಿದ್ದು, ಮೇ 12ರಿಂದ ಪ್ರವಾಸ ಕೈಗೊಳ್ಳಲಿದೆ.
ಸಿದ್ದು ಬಿ ನ್ಯಾಮಗೌಡ ಅವರ ಅಧ್ಯಕ್ಷತೆಯಲ್ಲಿರುವ ಅಧೀನ ಶಾಸನ ರಚನಾ ಸಮಿತಿಯಲ್ಲಿ ಒಟ್ಟು 14 ಮಂದಿ ವಿಧಾನಸಭೆ ಸದಸ್ಯರು, 4 ಮಂದಿ ವಿಧಾನಪರಿಷತ್ ಸದಸ್ಯರಿದ್ದಾರೆ. ಮೇ 9ರ ಮಂಗಳವಾರ ಬೆಳಗ್ಗೆ 6-30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುಜರಾತ್ನ ಅಹ್ಮದಾಬಾದ್, ಕೋಲ್ಕತ್ತಾ, ಪೋರ್ಟ್ ಬ್ಲೇರ್, ತ್ರಿವೇಂಡ್ರಮ್ಗೆ ಪ್ರಯಾಣ ಬೆಳೆಸಲಿದ್ದಾರೆ.
ಮೇ 9ರಂದು ಅಹ್ಮದಾಬಾದ್ನಲ್ಲಿ ತಂಗುವ 18 ಮಂದಿ ಶಾಸಕರು, ಅಲ್ಲಿನ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲಿದ್ದಾರೆ. ಮೇ 10ರಂದು ಚರಂಗ್ ಸೋಲಾರ್ ಪಾರ್ಕ್ ವೀಕ್ಷಿಸುವ ಶಾಸಕರು 11ಕ್ಕೆ ವಿಮಾನ ಮೂಲಕ ಕೋಲ್ಕತ್ತಾಕ್ಕೆ ತೆರಳಿ ಅಲ್ಲಿಯೂ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲಿದ್ದಾರೆ. ಅಂದು ಅಲ್ಲಿಯೇ ತಂಗಲಿರುವ ಶಾಸಕರು, 12ರಂದು ಪೋರ್ಟ್ಬ್ಲೇರ್ ಮತ್ತು ಸುತ್ತಮುತ್ತ ಇರುವ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಅಲ್ಲಿಯೇ 13ರವರೆಗೆ ತಂಗಲಿದ್ದಾರೆ. ಇದಾದ ನಂತರ 14ಕ್ಕೆ ಚೆನ್ನೈ ಮಾರ್ಗವಾಗಿ ತ್ರಿವೇಂಡ್ರಮ್ಗೆ ಪ್ರಯಾಣ ಬೆಳೆಸಲಿರುವ ಶಾಸಕರು, 16ರವರೆಗೆ ಅಲ್ಲಿಯೇ ವಾಸ್ತವ್ಯ ಹೂಡುವರು. ಈ ದಿನಗಳಲ್ಲಿ ಎಂದಿನಂತೆ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲಿದ್ದಾರೆ.
ಅದೇ ರೀತಿ, ಶಾಸಕ ಕೆ.ಶಿವಮೂರ್ತಿ ನಾಯ್ಕ ಅವರ ಅಧ್ಯಕ್ಷತೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಕಲ್ಯಾಣ ಸಮಿತಿ ಸದಸ್ಯರು ಮೇ 12ರಿಂದ ಪಶ್ಚಿಮ ಬಂಗಾಳ, ದೆಹಲಿ, ಹಿಮಾಚಲ ಪ್ರದೇಶ ಒಳಗೊಂಡಂತೆ ಅಧ್ಯಯನ ಪ್ರವಾಸ ಕೈಗೊಳ್ಳಲು ಸಮಿತಿ ತೀರ್ಮಾನಿಸಿದೆ. ಅಧ್ಯಯನ ಪ್ರವಾಸ ಸಂದರ್ಭದಲ್ಲಿ ಆ ರಾಜ್ಯಗಳ ಪರಿಶಿಷ್ಟ ಜಾತಿ, ಪಂಗಡಗಳ ಕಲ್ಯಾಣ ಸಮಿತಿ ಸದಸ್ಯರೊಂದಿಗೆ ಅಭಿವೃದ್ಧಿ, ಅನುದಾನ ಬಳಕೆ ಸೇರಿದಂತೆ ಇನ್ನಿತರೆ ವಿಚಾರಗಳ ಕುರಿತು ಸಮಾಲೋಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿ ಪ್ರವಾಸದಲ್ಲಿ ವಿಶೇಷವಾಗಿ ಲೋಕಸಭೆಯ ಪರಿಶಿಷ್ಟ ಜಾತಿ, ಪಂಗಡ ಸಮಿತಿಯ ಸದಸ್ಯರನ್ನೂ ಭೇಟಿ ಮಾಡಲಿದೆ. ಜತೆಯಲ್ಲಿಯೇ ಸರ್ವೋಚ್ಛ ನ್ಯಾಯಾಲಯದಲ್ಲಿನ ಪವಿತ್ರ ಪ್ರಕರಣದ ಕುರಿತು ಚರ್ಚಿಸಲಿದೆ ಎಂದು ಗೊತ್ತಾಗಿದೆ. ರಾಷ್ಟ್ರಪತಿ ಮತ್ತು ಪ್ರಧಾನಿ ಭೇಟಿಗೆ ಪ್ರಯತ್ನಿಸಿದ್ದು, ಭೇಟಿಗೆ ಅನುಮತಿ ಸಿಕ್ಕಲ್ಲಿ ಅವರಿಬ್ಬರನ್ನೂ ಭೇಟಿ ಮಾಡಿ ಚರ್ಚಿಸಲಿದೆ ಎಂದು ತಿಳಿದು ಬಂದಿದೆ.
ಅಧೀನ ಶಾಸನ ರಚನಾ ಸಮಿತಿ ಸದಸ್ಯ ಶಾಸಕರ ಪಟ್ಟಿ
ಸಿದ್ದು ಬಿ ನ್ಯಾಮಗೌಡ,
ರಾಜಶೇಖರ್ ಬಸವರಾಜ ಪಾಟೀಲ್,
ಎ.ಎಸ್.ಪಾಟೀಲ್ ನಡಹಳ್ಳಿ,
ದಿನೇಶ್ ಗುಂಡೂರಾವ್,
ಜಿ.ಹಂಪಯ್ಯ ಸಾಹುಕಾರ ಬಲ್ಲಟಗಿ,
ಎಂ.ಕೆ.ಸೋಮಶೇಖರ್,
ಬಿ.ಸುರೇಶ್ಗೌಡ,
ಬಿ.ಎನ್.ವಿಜಯಕುಮಾರ್,
ಬಿ.ಝಡ್.ಜಮೀರ್ ಅಹ್ಮದ್ ಖಾನ್,
ಹಾಲಾಡಿ ಶ್ರೀನಿವಾಸ ಶೆಟ್ಟಿ,
ಕೆ.ಬಿ.ಪ್ರಸನ್ನಕುಮಾರ್,
ಕೆ.ಬಿ.ಶಾಣಪ್ಪ,
ಸೋಮಣ್ಣ ಮ ಬೇವಿನಮರದ,
ಎಂ.ನಾರಾಯಣಸ್ವಾಮಿ,
ಕಾಂತರಾಜ್ ಬಿಎಂಎಲ್
ವರದಿ: ಜಿ.ಮಹಾಂತೇಶ್, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.