
ನವದೆಹಲಿ(ಮೇ.03): ನಾಗರಿಕರು ತಮ್ಮ ದೇಹದ ಅಂಗಾಂಗಗಳ ಮೇಲೆ ‘ಸಂಪೂರ್ಣ’ ಅಧಿಕಾರ ಪ್ರತಿಪಾದಿಸುವಂತಿಲ್ಲ. ವ್ಯಕ್ತಿಗೆ ತನ್ನ ದೇಹದ ಮೇಲೆ ಸಂಪೂರ್ಣ ಅಧಿಕಾರ ಇದೆ ಎಂಬುದು ಒಂದು ಕಟ್ಟುಕತೆ. ವಿವಿಧ ಕಾನೂನುಗಳಲ್ಲಿ ಇಂಥ ಹಕ್ಕಿಗೆ ನಿರ್ಬಂಧವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನ ಮುಂದೆ ಅಚ್ಚರಿಯ ವಾದ ಮಂಡಿಸಿದೆ. ಈ ಮೂಲಕ ಜನಸಾಮಾನ್ಯರ ದೇಹದ ಮೇಲೂ ಸರ್ಕಾರಕ್ಕೆ ಹಕ್ಕಿದೆ ಎಂದು ಪ್ರತಿಪಾದಿಸಿದೆ.
ಜೂ.1ರಿಂದ ಪ್ಯಾನ್ ನಂಬರ್‌ಗೆ ಅರ್ಜಿ ಹಾಕಲು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ವೇಳೆ ಆಧಾರ್ ಕಡ್ಡಾಯ ಎಂಬ ನೀತಿ ರೂಪಿಸಿರುವ ಆದಾಯ ತೆರಿಗೆ ಕಾಯ್ದೆಯ ಕಲಂ 133ಎಎಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದ ವಿಚಾರಣೆ ವೇಳೆ ಕೇಂದ್ರ ಸರ್ಕಾರ, ನ್ಯಾಯಾಲಯದ ಮುಂದೆ ಇಂಥದ್ದೊಂದು ವಾದ ಮಂಡಿಸಿದೆ.
ಕೇಂದ್ರ ಸರ್ಕಾರ ಆಧಾರ್ ಕಾಯ್ದೆ ಅಂಗೀಕರಿಸಿದ ಬಳಿಕ ದೇಶದ ಪ್ರತಿಯೊಬ್ಬ ಪ್ರಜೆ ಆಧಾರ್ ಮಾಡಿಸುವುದು ಕಡ್ಡಾಯ. ನಾಗರಿಕರು ಆಧಾರ್ ಮಾಡಿಸುವುದು ಮರೆತರೂ, ಸರ್ಕಾರ ಜನರಿಗೆ ಮರೆಯಲು ಬಿಡುವುದಿಲ್ಲ. ಹೀಗಾಗಿ ಅವರು ಆಧಾರ್ ದಾಖಲಾತಿಗಾಗಿ ತಮ್ಮ ಬೆರಳಚ್ಚು ಮತ್ತು ಕಣ್ಣಿನ ಪೊರೆಯ ಡಿಜಿಟಲ್ ಮಾದರಿ ನೀಡುವುದಕ್ಕೆ ನಿರಾಕರಿಸುವಂತಿಲ್ಲ. ವ್ಯಕ್ತಿಯ ದೇಹದ ಮೇಲೆ ಸಂಪೂರ್ಣ ಅಕಾರ ಎಂಬುದು ಒಂದು ಕಟ್ಟುಕತೆ, ವಿವಿಧ ಕಾನೂನುಗಳಲ್ಲಿ ಇಂಥ ಹಕ್ಕಿಗೆ ನಿರ್ಬಂಧವಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ನ್ಯಾ. ಎ.ಕೆ. ಸಿಕ್ರಿ ಮತ್ತು ನ್ಯಾ. ಅಶೋಕ್ ಭೂಷಣ್ ನ್ಯಾಯಪೀಠಕ್ಕೆ ಮಂಗಳವಾರ ತಿಳಿಸಿದರು.
‘ದೇಹದ ಮೇಲೆ ಸಂಪೂರ್ಣ ಅಧಿಕಾರವಿಲ್ಲ. ಒಂದು ವೇಳೆ ಅಂಥ ಹಕ್ಕು ಇದ್ದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ನೀಡಲಾಗುತಿತ್ತು. ಅಲ್ಲದೆ ತಮ್ಮ ದೇಹಕ್ಕೆ ಏನು ಬೇಕಾದರೂ ಮಾಡಿಕೊಳ್ಳಲು ಜನರಿಗೆ ಅವಕಾಶ ನೀಡಲಾಗುತಿತ್ತು. ತಮಗಿಷ್ಟ ಬಂದಂತೆ ದೇಹದ ಬಳಕೆಗೆ ಸಂಪೂರ್ಣ ಅಕಾರವಿಲ್ಲದಿರುವುದರಿಂದಲೇ, ಕಾನೂನಿನ ಪ್ರಕಾರ ವ್ಯಕ್ತಿಯೊಬ್ಬನಿಗೆ ತನ್ನ ಪ್ರಾಣ ತೆಗೆದುಕೊಳ್ಳುವುದಕ್ಕೆ ಅವಕಾಶವಿಲ್ಲ. ಜನರು ಆತ್ಮಹತ್ಯೆ ಮಾಡಿಕೊಳ್ಳುವಂತಿಲ್ಲ ಮತ್ತು ಡ್ರಗ್ಸ್ ತೆಗೆದುಕೊಳ್ಳುವಂತಿಲ್ಲ’ ಎಂದು ರೋಹಟಗಿ ಪ್ರತಿಪಾದಿಸಿದರು. ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಸಂದರ್ಭ ಜನರನ್ನು ಪರಿಶೀಲಿಸುವ ಅವಕಾಶ ಪೊಲೀಸರಿಗಿದೆ ಎಂಬ ಪೂರಕ ಅಂಶವನ್ನೂ ಅವರು ಇದೇ ಸಂದರ್ಭ ತಿಳಿಸಿದರು.
ಆದರೆ ರೋಹಟಗಿಯವರ ಉದಾಹರಣೆಗಳು ಸೂಕ್ತವಾದುವಲ್ಲ ಎಂದ ಕೋರ್ಟ್, ಈ ಪ್ರಕರಣ ತೆರಿಗೆ ಕಾನೂನಿಗೆ ಸಂಬಂಧಿಸಿದ್ದಾಗಿದ್ದು, ಅಪರಾಧಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿತು. ವ್ಯಕ್ತಿಯ ಹಕ್ಕುಗಳು ಮತ್ತು ಸರ್ಕಾರದ ಕ್ರಮಗಳ ನಡುವೆ ಸಮತೋಲನ ಕಾಪಾಡಬೇಕು ಎಂದು ಕೋರ್ಟ್ ಇದೇ ಸಂದರ್ಭ ಸಲಹೆ ನೀಡಿತು. ಕ್ರಿಮಿನಲ್ ಪ್ರಕರಣಗಳಲ್ಲಿ ರಕ್ತ ಮತ್ತು ಬೆರಳಚ್ಚು ಮಾದರಿಗಳನ್ನು ಸಂಗ್ರಹಿಸಲು ಆರೋಪಿಯಿಂದ ಯಾವುದೇ ಅನುಮತಿ ಕೇಳುವ ಅವಶ್ಯಕತೆಯಿರುವುದಿಲ್ಲ. ಅದೇ ರೀತಿ ಆಧಾರ್ ಕಾರ್ಡ್‌ನ್ನು ಪ್ಯಾನ್ ಕಾರ್ಡ್‌ಗೆ ಸಂಯೋಜಿಸಿ ತೆರಿಗೆ ತಪ್ಪಿಸಿಕೊಳ್ಳುವಿಕೆ ಮತ್ತು ಕಪ್ಪು ಹಣ ತಡೆಗಟ್ಟುವಿಕೆಗೆ ಮುಂಜಾಗೃತಾ ಕ್ರಮ ಕೈಗೊಂಡಲ್ಲಿ ಯಾವುದೇ ತಪ್ಪಿಲ್ಲ ಎಂದು ರೋಹಟಗಿ ವಾದಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.