
ಬೆಂಗಳೂರು (ಏ. 26): ಪುತ್ರನ ಮನೆಯ ಗೃಹ ಪ್ರವೇಶಕ್ಕೆ ಬಂದು ಕಾಣೆಯಾಗಿದ್ದ ವೃದ್ಧರೊಬ್ಬರು ಸಾಮಾಜಿಕ ಜಾಲತಾಣ ‘ಫೇಸ್‌ಬುಕ್' ಸಹಾಯದಿಂದ ಪತ್ತೆಯಾಗಿದ್ದಾರೆ.
ಗುಜರಾತ್ ಮೂಲದ ಮಹೇಂದ್ರ (65) ಪತ್ತೆಯಾದವರು. ಮಹೇಂದ್ರ ಅವರ ಪುತ್ರ ಹಿತೇಶ್ ಎಂಬುವರು ನಗರದ ವೈಟ್‌ಫೀಲ್ಡ್‌ನಲ್ಲಿ ಮನೆ ನಿರ್ಮಿಸಿದ್ದು, ಅದರ ಗೃಹ ಪ್ರವೇಶಕ್ಕೆ ಗುಜರಾತ್‌ನಿಂದ ಪೋಷಕರು ಬಂದಿದ್ದರು. ಈ ಮಧ್ಯೆ ಏ.23ರಂದು ಸಂಜೆ 6 ಗಂಟೆ ಸುಮಾರಿಗೆ ಮಹೇಂದ್ರ ಅವರು ಪತ್ನಿಯೊಂದಿಗೆ ವೈಟ್‌ಫೀಲ್ಡ್‌ನ ಬೋರ್‌ವೆಲ್ ರಸ್ತೆಯಲ್ಲಿರುವ ಹೇರ್ ಸಲೂನ್‌ಗೆ ತೆರಳಿದ್ದರು. ಪತ್ನಿ ತರಕಾರಿ ತರಲು ತರುವಷ್ಟರಲ್ಲಿ ಸಲೂನ್ ಅಂಗಯಿಂದ ಮಹೇಂದ್ರ ಕಾಣೆಯಾಗಿದ್ದರು.
ಸ್ಥಳೀಯರನ್ನು ವಿಚಾರಿಸದರೂ ಪತಿ ಬಗ್ಗೆ ಮಾಹಿತಿ ಸಿಗುವುದಿಲ್ಲ. ಕೂಡಲೇ ಪುತ್ರ ಹಿತೇಶ್‌ಗೆ ಕರೆ ಮಾಡಿ ತಂದೆ ಕಾಣೆಯಾಗಿರುವ ವಿಷಯ ತಿಳಿಸಿದ್ದಾರೆ. ಮಹೇಂದ್ರ ಅವರಿಗೆ ಬೆಂಗಳೂರಿನ ಪರಿಚಯವಿಲ್ಲ. ಅಲ್ಲದೆ, ಕನ್ನಡ ಬರುವುದಿಲ್ಲ. ನಡೆದುಕೊಂಡೆ ಸುಮಾರು 7-8 ಕಿ.ಮೀ ದೂರ ಕ್ರಮಿಸಿದ್ದಾರೆ. ಈ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಗಾಯಗೊಂಡಿದ್ದರು. ನೋವಿನಿಂದ ಬಳಲಿದ ಅವರು ಬೆಳ್ಳಂದೂರಿನ ಇಕೋಸ್ಪೆಸ್ ಬಳಿಯ ಆಟೋ ನಿಲ್ದಾಣದಲ್ಲಿ ಇಡೀ ರಾತ್ರಿ ಕಳೆದಿದ್ದಾರೆ. ಮರುದಿನ ಬೆಳಗ್ಗೆ 8 ಗಂಟೆ ಸುಮಾರಿಗೆ ಆಟೋ ಚಾಲಕರೊಬ್ಬರು ವೃದ್ಧ ಮಹೇಂದ್ರವರನ್ನು ಕಂಡು ಬೆಳ್ಳಂದೂರು ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಚಿಕಿತ್ಸೆ ಕೊಡಿಸಿದ್ದರು.
ವೃದ್ಧರೊಬ್ಬರ ಬಗ್ಗೆ ಪೊಲೀಸರು ಕಮ್ಯೂನಿಟಿ ಪೊಲೀಸಿಂಗ್ ಸದಸ್ಯ ವಿಕಾಸ್‌ಗೆ ತಿಳಿಸಿದ್ದರು. ಅಲ್ಲದೇ ಹಿತೇಶ್ ಸ್ನೇಹಿತರೊಬ್ಬರು ಫೇಸ್‌ಬುಕ್‌ನಲ್ಲಿ ಮಹೇಂದ್ರ ಅವರ ಫೋಟೋ ಹಾಕಿ ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಪ್ರಕಟಿಸಿದ್ದರು. ಏ.25ರಂದು ಇದನ್ನು ಗಮನಿಸಿದ ವಿಕಾಸ್, ಹಿತೇಶ್‌ಗೆ ಕರೆ ಮಾಡಿ ತಂದೆ ಪತ್ತೆ ಬಗ್ಗೆ ಮಾಹಿತಿ ನೀಡಿದರು. ಬಳಿಕ ಠಾಣೆಗೆ ಬಂದ ಹಿತೇಶ್ ಕಾಣೆಯಾಗಿದ್ದ ತಂದೆಯನ್ನು ಕರೆದುಕೊಂಡು ಹೋಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.