
ಬೆಂಗಳೂರು: ಉಗ್ರರನ್ನು ಪೋಷಿಸಿ ಬೆಳೆಸಿ ಭಾರತದಲ್ಲಿ ರಕ್ತದೋಕುಳಿ ಹರಿಸುತ್ತಿರುವ ನೆರೆಯ ಪಾಕಿಸ್ತಾನದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತದ ಕ್ರಿಕೆಟ್ ತಂಡ ಸೋತ ನೋವಿನಲ್ಲಿ ಇಡೀ ದೇಶ ಮುಳುಗಿದ್ದರೆ, ರಾಜ್ಯದಲ್ಲಿ ಕೆಲ ವಿಕೃತ ಮನಸ್ಸಿನ ವಿದ್ರೋಹಿಗಳು ಮಾತ್ರ ಪಟಾಕಿ ಸಿಡಿಸಿ, ಜೈಕಾರ ಕೂಗಿ ಸಂಭ್ರಮಿಸಿದ್ದಾರೆ. ದೇಶದ ಅಖಂಡತೆಯನ್ನೇ ಪ್ರಶ್ನಿಸುವಂಥ ಈ ನಡೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಂಥವರನ್ನು ಬಂಧಿಸಿ ದೇಶದಿಂದ ಗಡೀಪಾರು ಮಾಡುವಂತೆ ಆಗ್ರಹ ಕೇಳಿಬಂದಿದೆ.
ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ, ಹಾವೇರಿ ಜಿಲ್ಲೆಯ ಸವಣೂರು, ದಾವಣಗೆರೆ ನಗರದ ವಿನೋಬಾನಗರ, ಕೊಡಗಿನ ಸುಂಟಿಕೊಪ್ಪ, ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ಹಲವು ಯುವಕರ ಗುಂಪು ಪಾಕ್ ಪರ ‘ಜಿಂದಾಬಾದ್' ಘೋಷಣೆ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದೆ. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನ ಪುತ್ರನೂ ಸೇರಿ ಕೆಲ ಕಿಡಿಗೇಡಿ ಯುವಕರ ಈ ದೇಶವಿರೋಧಿ ಕೃತ್ಯದಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾ ಣವಾಗಿದ್ದು, ರಾಜ್ಯದಲ್ಲಿ ಕೋಮುಸಾಮರಸ್ಯಕ್ಕೂ ಧಕ್ಕೆಯುಂಟಾಗುವಂತೆ ಮಾಡಿದೆ.
ಹಿಪ್ಪರಗಿ ಉದ್ವಿಗ್ನ: ಬಾಗಲಕೋಟೆಯ ಹಿಪ್ಪರಗಿ ಗ್ರಾಮದಲ್ಲಿ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಒಂದು ಕೋಮಿನ ಯುವಕರ ತಂಡ ಪಟಾಕಿ ಸಿಡಿಸಿ ಸಂಭ್ರಮಿಸಿ ‘ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಗಳನ್ನು ಕೂಗಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮಕ್ಕೆ ಕೆಲ ತಿಂಗಳ ಹಿಂದೆ ಕೇರಳದಿಂದ ವ್ಯಾಪಾರಕ್ಕಾಗಿ ಒಂದು ಕೋಮಿನ ಯುವಕರು ಬಂದಿದ್ದು ಅವರೇ ಈ ಕೆಲಸ ಮಾಡಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿರುವ ಸ್ಥಳೀಯರು, ಅಂಥವರನ್ನು ಬಂಧಿಸಿ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಗ್ರಾಮದ ಆ ಕೋಮಿನ ಸಮುದಾಯದ ಹಿರಿಯರೇ ಆಗಮಿಸಿ, ‘‘ಮುಂದೆ ಈ ರೀತಿ ಘಟನೆಗಳು ಆಗದಂತೆ ನೋಡಿ ಕೊಳ್ಳಲಾಗುವುದು. ಭಾನುವಾರ ರಾತ್ರಿ ಸಂಭ್ರಮಿಸಿದ ಯುವಕರನ್ನು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಲಾಗುವುದು'' ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿದೆ.
ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದ್ದು, ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್‌್ತ ಏರ್ಪಡಿಸಲಾಗಿದೆ.
ಸುಂಟಿಕೊಪ್ಪದಲ್ಲಿ ಮೂವರ ಸೆರೆ: ಕೊಡಗಿನ ಸುಂಟಿಕೊಪ್ಪದ 7ನೇ ಹೊಸಕೋಟೆ ಕಲ್ಲುಕೋರೆ, ಕಲ್ಲೂರು, ಅಂದಗೋವೆ ಗ್ರಾಮಗಳಿಗೆ ತೆರಳುವ ವೃತ್ತದ ಬಳಿ ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ವರು ಪಟಾಕಿ ಸಿಡಿಸಿ ಪಾಕ್ ಪರ ಘೋಷಣೆ ಕೂಗಿ, ಕೋಮು ಸಾಮರಸ್ಯ ಕದಡುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯರು ನೀಡಿದ ದೂರಿನ ಮೇಲೆ ಗ್ರಾಪಂ ಉಪಾಧ್ಯಕ್ಷ ಮುಸಾಫ (ಕುಂಞ ಕುಟ್ಟಿ) ಅವರ ಪುತ್ರ ರಿಯಾಜ್, ಅಬ್ದುಲ್ ಸಮ್ಮದ್, ಜಬ್ಬೀರ್‌ನನ್ನು ಬಂಧಿಸಿದ್ದಾರೆ.
ಸವಣೂರಲ್ಲಿ ಒಬ್ಬ ಸೆರೆ: ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲೂ ಇದೇ ರೀತಿ ಕ್ರಿಕೆಟ್ ನೆಪದಲ್ಲಿ ಪಾಕ್ ಪರ ಜಯಕಾರ ಕೂಗಿದ ಸ್ಥಳೀಯ ನಿವಾಸಿ ಶಬ್ಬೀರ್ ಅಹ್ಮದ್ ಮುಸ್ತಾಕ್ ಅಹ್ಮದ್ ಬಿಜಾಪುರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್‌್ತ ಏರ್ಪಡಿಸಲಾಗಿದೆ.
ದಾವಣಗೆರೆಯ ವಿನೋಬಾನಗರದಲ್ಲೂ ಐದಾರು ಯುವಕರ ಗುಂಪು ಸಿಡಿಮದ್ದು ಸಿಡಿಸಿ ಸಂಭ್ರಮಾಚರಿಸಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲೂ ಕೆಲವರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಪ್ರಕರಣ ದಾಖಲಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.