ನಾವು ಜನರ ಕಾವಲು ನಾಯಿ ಹತ್ತಿರ ಬಂದರೆ ಕಚ್ಚೋಕೆ ಗೊತ್ತು : ಖಾಸಗಿ ಆಸ್ಪತ್ರೆಗಳಿಗೆ ಸಚಿವ ರಮೇಶ್ ಕುಮಾರ್ ಎಚ್ಚರಿಕೆ

By Suvarna Web DeskFirst Published Jan 13, 2017, 5:31 PM IST
Highlights

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಸೇವೆಗಳನ್ನು ನೀಡುವ ಸಂಬಂಧ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಆಗಿರುವ ಒಪ್ಪಂದದಂತೆ ಸಾರ್ವಜನಿಕರಿಗೆ ಚಿಕಿತ್ಸೆ ಮುಂದುವರಿಯಲಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಗಳೊಂದಿಗೆ ಜ.16ರಂದು ಸೋಮವಾರ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ಬೆಂಗಳೂರು(ಜ.13): ಬಡವರಿಗೆ ಆರೋಗ್ಯ ಸೇವೆ ನೀಡಿದ ಖಾಸಗಿ ಆಸ್ಪತ್ರೆಗಳಿಗೆ ಈವರೆಗೆ 1 ಸಾವಿರ ಕೋಟಿ ರು. ನೆರವು ನೀಡಲಾಗಿದೆ. ಬಾಕಿ ಇರುವುದು ಕೇವಲ 100 ಕೋಟಿ ರು. ಮಾತ್ರ. ಅದನ್ನೂ ಕೊಡುತ್ತೇವೆ. ಬಡವರ ಆರೋಗ್ಯ ರಕ್ಷಣೆ ಸರ್ಕಾರದ ಕೆಲಸ. ನಾವು ಜನರ ಕಾವಲು ನಾಯಿ. ಜನರಿಂದ ಯಾರಾದರೂ ಕದಿಯಲು ಬಂದರೆ ಬೊಗಳುತ್ತೇವೆ, ತೀರ ಹತ್ತಿರಕ್ಕೆ ಬಂದರೆ ಕಚ್ಚುವುದೂ ನಮಗೆ ಗೊತ್ತಿಗೆ ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಸೇವೆಗಳನ್ನು ನೀಡುವ ಸಂಬಂಧ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಆಗಿರುವ ಒಪ್ಪಂದದಂತೆ ಸಾರ್ವಜನಿಕರಿಗೆ ಚಿಕಿತ್ಸೆ ಮುಂದುವರಿಯಲಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಗಳೊಂದಿಗೆ ಜ.16ರಂದು ಸೋಮವಾರ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಆಸ್ಪತ್ರೆಗಳು ತೀವ್ರ ವೈದ್ಯರ ಕೊರತೆ ಅನುಭವಿಸುತ್ತಿವೆ. ಹೀಗಾಗಿ ಆಯುಷ್ ವೈದ್ಯರನ್ನು ಗ್ರಾಮೀಣ ಸೇವೆಗೆ ನಿಯೋಜನೆ ಮಾಡಲಾಗುತ್ತಿದೆ. ಆಯುಷ್ ವೈದ್ಯರು ಜೀವ ರಕ್ಷಣೆಯ ಕೆಲಸ ಮಾಡಿದರೆ ಅದಕ್ಕೆ ಐಎಂಎ ಅನುಮತಿ ಏಕೆ ಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಎಲ್ಲ ಸಮಸ್ಯೆಗಳ ಮಧ್ಯೆಯೂ ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಆರೋಗ್ಯ ಸೇವೆ ಕಲ್ಪಿಸುವ ಸಂಬಂಧ ಸಾಮಾನ್ಯ ಚಿಕಿತ್ಸೆಗೆ ಸಂಬಂಧಿಸಿದ ವೈದ್ಯರ ನೇಮಕಾತಿ ಈಗಾಗಲೇ ಪೂರ್ಣಗೊಂಡಿದೆ. ತಜ್ಞ ವೈದ್ಯರ ನೇಮಕಾತಿ ಕೂಡ ಶೀಘ್ರ ಮುಕ್ತಾಯಗೊಳ್ಳಲಿದೆ. ಇನ್ನು ಮೂರು ತಿಂಗಳಲ್ಲಿ ಎಲ್ಲ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಕ ಕೊನೆಗೊಳ್ಳಲಿದೆ. ಮಾರ್ಚ್ ಬಳಿಕ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ಗ್ರಾಪಂ ಮುಂದೆ ಆ್ಯಂಬುಲೆನ್ಸ್

ಔಷಧ ಕೊರತೆಯಾಗದಂತೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪೂರೈಕೆ ಮಾಡಲಾಗಿದೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಮಾರ್ಚ್ ಅಂತ್ಯದೊಳಗೆ ಡಯಾಲಿಸಿಸ್ ಯಂತ್ರ ಮತ್ತು ತುರ್ತು ನಿಗಾ ಘಟಕಗಳನ್ನು ಅಳವಡಿಸಿ, ಸಾರ್ವಜನಿಕರು ಉಚಿತ ಡಯಾಲಿಸಿಸ್ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು. ರಾಜ್ಯದ ಪ್ರತಿ 15 ಕಿಮೀ ಅಂತರದಲ್ಲಿ ತುರ್ತು ಸೇವೆಗೆ ಒಂದು ಅಂಬ್ಯುಲೆನ್ಸ್ ದಿನದ 24 ಗಂಟೆ ಲಭ್ಯ ಇರುವಂತೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಎಲ್ಲ ಗ್ರಾಪಂ ಕಚೇರಿ ಎದುರು ಅಂಬ್ಯುಲೆನ್ಸ್ ದಿನದ 24 ಗಂಟೆ ಸೇವೆಗೆ ಲಭ್ಯವಾಗುವಂತೆ ನೋಡಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆ ಶುಲ್ಕದ ಮೇಲೆ ನಿಯಂತ್ರಣ

ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಕನ್ಸಲ್ಟಿಂಗ್ ಶುಲ್ಕ ಮಾತ್ರವಲ್ಲದೇ ವಿವಿಧ ತಪಾಸಣೆ, ಚಿಕಿತ್ಸೆ ಹಾಗೂ ಪರಿಶೀಲನೆಗೆ ಅತ್ಯಾಧುನಿಕ ಯಂತ್ರಗಳ ಮೂಲಕ ನೀಡುವ ಸೇವೆಗೆ ಭಾರಿ ಪ್ರಮಾಣದ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ. ಈಗಾಗಲೇ ರಚಿಸಲಾಗಿರುವ ನ್ಯಾ. ವಿಕ್ರಮ್‌ಜಿತ್ ಸೇನ್ ಸಮಿತಿಯ ಶಿಫಾರಸು ಅನುಸರಿಸಿ, ಖಾಸಗಿ ಆಸ್ಪತ್ರೆಗಳ ಶುಲ್ಕದ ಮೇಲೆ ಸರ್ಕಾರ ನಿಯಂತ್ರಣ ಹೊಂದಲು ಆಲೋಚನೆ ನಡೆಸಿದೆ. ಯಾವುದೇ ಶುಲ್ಕ ವಸೂಲಾತಿಗೆ ಉತ್ತರದಾಯಿತ್ವ ಇರಬೇಕಾಗುತ್ತದೆ. ಮನಸೋ ಇಚ್ಛೆ ಹಣ ವಸೂಲಿ ಯಾವ ಕ್ಷೇತ್ರದಲ್ಲೂ ಆಗಬಾರದು ಎಂದು ರಮೇಶ್‌ಕುಮಾರ್ ಪರೋಕ್ಷವಾಗಿ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದರು.

click me!