ಕಾಂಗ್ರೆಸ್-ಜೆಡಿಎಸ್ ದೂರ..? ರೇವಣ್ಣ ಕೊಟ್ರು ಸುಳಿವು..?

By Web DeskFirst Published Jan 8, 2019, 8:04 AM IST
Highlights

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಿಕೊಂಡು ಆಡಳಿತ ನಡೆಸುತ್ತಿರುವ ಕಾಂಗ್ರೆಸ್ - ಜೆಡಿಎಸ್ ನಡುವೆ ಬಿರುಕು ಮೂಡುತ್ತಿದೆ.  ಇದೇ ವೇಳೆ ಜೆಡಿಎಸ್ ನಾಯಕ ರೇವಣ್ಣ ಕಾಂಗ್ರೆಸ್ ನಾಯಕರಿಗೆ ಖಡಕ್ ಸೂಚನೆಯನ್ನೂ ನೀಡಿದ್ದಾರೆ.

ಬೆಂಗಳೂರು :  ‘ನಮ್ಮನ್ನು ಕೇಳದಿದ್ದರೆ ನಮ್ಮ ದಾರಿ ನಮಗೆ, ಅವರ ದಾರಿ ಅವರಿಗೆ’ ಎಂದು ಹೇಳುವ ಮೂಲಕ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ಮಿತ್ರಪಕ್ಷ ಕಾಂಗ್ರೆಸ್ಸಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ-ಮಂಡಳಿ ನೇಮಕದ ಬಗ್ಗೆ ಕಾಂಗ್ರೆಸ್‌ ಮುಖಂಡರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ವರಿಷ್ಠರಾದ ದೇವೇಗೌಡರ ಬಳಿ ಮಾತನಾಡಿಕೊಳ್ಳಲಿ. ನಾನು ನನ್ನ ಜಿಲ್ಲೆ ಬಿಟ್ಟು ಯಾವ ಜಿಲ್ಲೆಗೂ ಕೈಹಾಕುವುದಿಲ್ಲ ಎಂದರು.

ನಮ್ಮ ಹಾಸನ ಜಿಲ್ಲೆಯಲ್ಲಿ ಆರು ಮಂದಿ ಜೆಡಿಎಸ್‌ ಶಾಸಕರು ಇದ್ದಾರೆ. ಕಾಂಗ್ರೆಸ್‌ನವರು ನಿಗಮ-ಮಂಡಳಿ ನೇಮಕದಲ್ಲಿ ನಮ್ಮ ಜಿಲ್ಲೆಯ ವಿಚಾರ ಬಂದರೆ ಕಡ್ಡಾಯವಾಗಿ ನಮ್ಮನ್ನು ಕೇಳಬೇಕು. ನಮ್ಮನ್ನು ಕೇಳದಿದ್ದರೆ ಅವರ ದಾರಿ ಅವರು ನೋಡಿಕೊಳ್ಳಲಿ ಎಂದು ನೇರವಾಗಿಯೇ ಹೇಳಿದರು.

ಸುಧಾಕರ್‌ ವಿರುದ್ಧ ಗರಂ:  ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಶಾಸಕ ಡಾ. ಸುಧಾಕರ್‌ ವಿರುದ್ಧ ಗರಂ ಆದ ರೇವಣ್ಣ, ಸುಧಾಕರ್‌ ಅವರು ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಮಾತನಾಡಲು ಅವರು ಯಾರು ಎಂದು ಖಾರವಾಗಿ ಕೇಳಿದರು.

ಇತ್ತೀಚೆಗೆ ಕಾಂಗ್ರೆಸ್‌ ಶಾಸಕರನ್ನು ಮೊದಲು ಹಿಡಿತದಲ್ಲಿ ಇಟ್ಟುಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಹೇಳಿದ್ದೇನೆ. ಈಗ ಶಾಸಕ ಸುಧಾಕರ್‌ ಅವರ ವಿಚಾರದಲ್ಲೂ ಇದನ್ನೇ ಹೇಳುತ್ತೇನೆ ಎಂದು ತುಸು ಕೋಪದಿಂದಲೇ ತಿಳಿಸಿದರು.

click me!