ಕೈಗೆ ಜೆಡಿಎಸ್‌ ಟಾಂಗ್‌..? ಮೈತ್ರಿ ಸರ್ಕಾರದಲ್ಲಿ ಮತ್ತೊಂದು ಕಗ್ಗಂಟು

By Web DeskFirst Published Jan 8, 2019, 7:35 AM IST
Highlights

ನಿಗಮ ಮಂಡಳಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ತಿಕ್ಕಾಟ ಆರಂಭವಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಮುಖಂಡ ಎಚ್.ಡಿ.ದೇವೇಗೌಡ ಸಭೆಯನ್ನು ಕರೆದಿದ್ದಾರೆ. 

ಬೆಂಗಳೂರು :  ನಿಗಮ ಮಂಡಳಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ತಿಕ್ಕಾಟ ಆರಂಭವಾಗಿರುವ ಬೆನ್ನಲ್ಲೇ ಜೆಡಿಎಸ್‌ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಶಾಸಕಾಂಗ ಪಕ್ಷದ ಮಹತ್ವದ ಸಭೆ ಕರೆದಿದ್ದಾರೆ.

ಇದೇ ವೇಳೆ ಅನಗತ್ಯ ಹೊರೆ ಎಂಬ ಕಾರಣ ಮುಂದಿಟ್ಟು ಮಿತ್ರ ಪಕ್ಷ ಕಾಂಗ್ರೆಸ್‌ಗೆ ಟಾಂಗ್‌ ನೀಡುವ ಉದ್ದೇಶದಿಂದ ಜೆಡಿಎಸ್‌ ಪಾಲಿನ ಸಂಸದೀಯ ಕಾರ್ಯದರ್ಶಿಗಳ ನೇಮಕ ಪ್ರಕ್ರಿಯೆ ಕೈಬಿಡುವ ಬಗ್ಗೆಯೂ ಜೆಡಿಎಸ್‌ ನಾಯಕರು ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸಂಸದೀಯ ಕಾರ್ಯದರ್ಶಿಗಳ ನೇಮಕ ಪ್ರಕ್ರಿಯೆ ಕೈಬಿಡುವ ಪ್ರಸ್ತಾವನೆ ಬಗ್ಗೆ ಶಾಸಕಾಂಗ ಸಭೆಯಲ್ಲಿ ನೇರವಾಗಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಭಾನುವಾರವಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಶಿಫಾರಸು ಮಾಡಿದ ಪಟ್ಟಿಯಲ್ಲಿನ ಕೆಲವನ್ನು ಹೊರತುಪಡಿಸಿ ಬಹುತೇಕ ಇತರ ನಿಗಮ ಮಂಡಳಿಗಳ ಅಧ್ಯಕ್ಷರ ಜೊತೆಗೆ ಎಂಟು ಮಂದಿ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಆದರೆ, ಸಂಸದೀಯ ಕಾರ್ಯದರ್ಶಿಗಳ ನೇಮಕದ ಬಗ್ಗೆ ಅಷ್ಟೇನೂ ಒಲವು ಹೊಂದಿಲ್ಲದ ಕುಮಾರಸ್ವಾಮಿ ಅವರು ಈ ನೇಮಕದಿಂದ ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಹೊರೆ ಹೆಚ್ಚಾಗುತ್ತದೆ ಎಂಬ ಆತಂಕಕ್ಕೀಡಾಗಿದ್ದಾರೆ. ಮೇಲಾಗಿ ಇವು ರಾಜಕೀಯ ನೇಮಕಗಳಾಗಿರುವುದರಿಂದ ಲಾಭದಾಯಕ ಹುದ್ದೆಯ ವ್ಯಾಪ್ತಿಯಲ್ಲಿ ಬರಬಹುದು. ಯಾರಾದರೂ ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಸರ್ಕಾರಕ್ಕೆ ಮುಜುಗರವಾಗಬಹುದು ಎಂಬ ಭಾವನೆಯನ್ನೂ ಹೊಂದಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಕಾಂಗ್ರೆಸ್‌ ಪಕ್ಷದ ಮುಖಂಡರ ಧೋರಣೆ ಬದಲಾಗುತ್ತಿರುವ ಬಗ್ಗೆ ಜೆಡಿಎಸ್‌ ಪಾಳೆಯದಲ್ಲಿ ಅಸಮಾಧಾನ ತಲೆದೋರಿದ್ದು, ಮಿತ್ರ ಪಕ್ಷದ ಎಲ್ಲ ಒತ್ತಡಗಳಿಗೂ ತಲೆಯಾಡಿಸಿ ಮಣಿಯುವುದರಿಂದ ಜೆಡಿಎಸ್‌ನ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಲಿದೆ ಎಂಬ ಅಭಿಪ್ರಾಯವೂ ಪಕ್ಷದಲ್ಲಿ ಹೊರಹೊಮ್ಮುತ್ತಿದೆ. ಹೀಗಾಗಿ, ಇದೆಲ್ಲದರ ಬಗ್ಗೆ ಶಾಸಕರೊಂದಿಗೆ ಮುಕ್ತವಾಗಿ ಸಮಾಲೋಚನೆ ನಡೆಸಲು ದೇವೇಗೌಡರು ಮುಂದಾಗಿದ್ದಾರೆ.

ಜೊತೆಗೆ ಮಿತ್ರ ಕಾಂಗ್ರೆಸ್‌ ಪಾಲಿನ ನಿಗಮ ಮಂಡಳಿಗಳ ನೇಮಕ ಮಾಡಿರುವುದರಿಂದ ಜೆಡಿಎಸ್‌ ಪಾಲಿನ ನಿಗಮ ಮಂಡಳಿಗಳ ನೇಮಕ ಕುರಿತು ದೇವೇಗೌಡರು ಶಾಸಕರ ಬಳಿಯೇ ಪ್ರಸ್ತಾಪಿಸಲು ಉದ್ದೇಶಿಸಿದ್ದಾರೆ. ಎಲ್ಲ ಶಾಸಕರಿಗೂ ನಿಗಮ ಮಂಡಳಿಗಳ ಅಧ್ಯಕ್ಷಗಿರಿ ನೀಡಲು ಆಗುವುದಿಲ್ಲ. ಹೀಗಾಗಿ, ಇನ್ನುಳಿದ ಸರ್ಕಾರಿ ನೇಮಕಗಳನ್ನು ನೀಡಲು ಸಾಧ್ಯವೇ ಎಂಬುದರ ಜೊತೆಗೆ ಪಕ್ಷದಲ್ಲೂ ಸ್ಥಾನಮಾನ ನೀಡುವ ಮೂಲಕ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಕುರಿತು ಗೌಡರು ಸಭೆಯಲ್ಲಿ ಪ್ರಸ್ತಾಪಿಸುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ಅಲ್ಲದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆಗೆ ಸ್ಥಾನ ಹೊಂದಾಣಿಕೆಯಾಗುವ ಸಂಭವ ಇರುವುದರಿಂದ ಎಷ್ಟುಮತ್ತು ಯಾವ ಕ್ಷೇತ್ರಗಳನ್ನು ಕೇಳಬೇಕು ಎಂಬುದರ ಬಗ್ಗೆಯೂ ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿದೆ.

ಅಧಿಕಾರಿಗಳ ಜೊತೆ ದೇವೇಗೌಡ ಚರ್ಚೆ

ನಿಗಮ ಮಂಡಳಿಗಳ ನೇಮಕಕ್ಕೆ ಸಂಬಂಧಿಸಿದಂತೆ ಮಿತ್ರ ಪಕ್ಷ ಕಾಂಗ್ರೆಸ್‌ ಮುಖಂಡರ ಅಸಮಾಧಾನದ ಹಿನ್ನೆಲೆಯಲ್ಲಿ ಜೆಡಿಎಸ್‌ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡ ಅವರು ಸೋಮವಾರ ಮುಖ್ಯಮಂತ್ರಿಗಳ ಕಚೇರಿಯ ಕೆಲವು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ ಪಕ್ಷ ಶಿಫಾರಸು ಮಾಡಿದ್ದ ನೇಮಕದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಲವನ್ನು ತಡೆಹಿಡಿದಿರುವ ಹಿನ್ನೆಲೆಯಲ್ಲಿ ಅವುಗಳ ಕುರಿತು ವಿವರಣೆಯನ್ನು ಗೌಡರು ಪಡೆದಿದ್ದಾರೆ. ಅಲ್ಲದೆ, ವಿಶೇಷವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕ ಕುರಿತೂ ಎದುರಾಗಿರುವ ತಾಂತ್ರಿಕ ಅಡಚಣೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ನಿಗಮ ಮಂಡಳಿಗಳ ನೇಮಕ ಕುರಿತ ಕಾಂಗ್ರೆಸ್‌ ಆಕ್ರೋಶದ ಹಿನ್ನೆಲೆ ಅಧಿಕಾರಿಗಳು ಹಾಗೂ ತಮ್ಮ ಆಪ್ತರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಜೆಡಿಎಸ್‌ ಶಾಸಕರು ಒಪ್ಪುತ್ತಾರಾ? :  ಆರ್ಥಿಕವಾಗಿ ಹೊರೆಯಾಗಬಹುದು ಎಂಬ ಕಾರಣಕ್ಕಾಗಿ ಜೆಡಿಎಸ್‌ ಪಾಲಿನ ಸಂಸದೀಯ ಕಾರ್ಯ ದರ್ಶಿಗಳ ನೇಮಕ ಪ್ರಕ್ರಿಯೆ ಕೈಬಿಡುವ ಪಕ್ಷದ ವರಿಷ್ಠರ ನಿಲವಿಗೆ ಶಾಸಕರು ಒಪ್ಪಿಗೆ ನೀಡುವ ಬಗ್ಗೆ ಅನುಮಾನವಿದೆ.

ನಿಗಮ ಮಂಡಳಿಗಳ ಪೈಕಿ ಜೆಡಿಎಸ್‌ಗೆ ಸುಮಾರು ಹತ್ತು ಸಿಗಬಹುದು. ಹೀಗಾಗಿ, ಪಕ್ಷದ ಇನ್ನುಳಿದ ಶಾಸಕರಿಗೆ ಸಂಸದೀಯ ಕಾರ್ಯದರ್ಶಿಗಳನ್ನು ನೀಡಬಹುದು. ಆದರೆ, ಕಾಂಗ್ರೆಸ್‌ ಪಕ್ಷ ತನ್ನ ಪಾಲಿನ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಂಡಿರುವಾಗ ನಾವೇಕೆ ಬಿಟ್ಟು ಕೊಡಬೇಕು? ನಮ್ಮ ಪಾಲಿಗೆ ಬರುವಷ್ಟುನೇಮಕ ಮಾಡಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯವನ್ನು ಹಲವು ಶಾಸಕರು ವ್ಯಕ್ತಪಡಿಸಿದ್ದಾರೆ.

ಹೀಗಾಗಿ, ಮಂಗಳವಾರದ ಶಾಸಕಾಂಗ ಸಭೆಯಲ್ಲಿ ಜೆಡಿಎಸ್‌ ಶಾಸಕರು ಪಕ್ಷದ ವರಿಷ್ಠರ ಪ್ರಸ್ತಾಪಕ್ಕೆ ಒಪ್ಪಿಗೆ ನೀಡುತ್ತಾರಾ ಅಥವಾ ವಿರೋಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

click me!