
ಮೈಸೂರು(ಫೆ.07): ಚಿರತೆ ದೂರದಲ್ಲಿ ಕಣ್ಣಿಗೆ ಬಿದ್ದರೂ ಪತರುಗುಟ್ಟಿ ಹೋಗುವವರಿದ್ದಾರೆ. ಅಂಥದ್ದರಲ್ಲಿ ಮೈಸೂರಿನ ಬಾಳೆಮಂಡಿಯ ಮಾಲೀಕರೊಬ್ಬರು ಇಂಥ ಚಿರತೆಯ ಪಕ್ಕದಲ್ಲೇ ಮಲಗಿದ್ದಲ್ಲದೆ ಅದರ ಮೈ ಸವರಿಯೂ ಜೀವ ಉಳಿಸಿಕೊಂಡು ಬಂದಿದ್ದಾರೆ!
ಹೌದು, ಮೈಸೂರು ಹೊರವಲಯದ ಉತ್ತನಹಳ್ಳಿ ರಸ್ತೆಯಲ್ಲಿರುವ ಬಂಡಿಪಾಳ್ಯದ ಬಾಳೆ ಮಂಡಿಗೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಮಂಡಿ ಮಾಲೀಕ ರಾಮಕೃಷ್ಣ ಈ ಚಿರತೆಯ ಪಕ್ಕದಲ್ಲೇ ಮಲಗಿದ್ದಲ್ಲದೆ ನಾಯಿ ಎಂದು ತಿಳಿದುಕೊಂಡು ಮೈ ಕೂಡ ಸವರಿದ್ದಾರೆ!
ಆಗಿದ್ದಿಷ್ಟು?: ಚಾಮುಂಡಿ ಬೆಟ್ಟದಿಂದ ನಾಯಿಗಳ ವಾಸನೆ ಹಿಡಿದು ಬಂದ 6 ರಿಂದ 7 ವರ್ಷದ ಗಂಡು ಚಿರತೆ ಸೋಮವಾರ ತಡರಾತ್ರಿ 12ರ ಸುಮಾರಿಗೆ ಬಂಡಿಪಾಳ್ಯ ಬಳಿಯ ‘ಮೆ.ರಾಜಣ್ಣ ಬನಾನ ರಿಟೈನಿಂಗ್ ಕೇರ್’ ಬಾಳೆ ಮಂಡಿ ಹೊಕ್ಕಿದೆ. ಈ ಮಂಡಿಗೆ ಹಾಕಲಾಗಿರುವ ಜಾಲರಿಯ ಸಂದಿಯಿಂದ ಈ ಚಿರತೆ ಒಳಹೊಕ್ಕಿದೆ ಎನ್ನಲಾಗಿದೆ. ಮಂಡಿ ಮುಂದೆಯೇ ಇರುವ 2 ನಾಯಿಗಳು ರಾತ್ರಿ ಹೊತ್ತು ಮಂಡಿಯೊಳಗೆ ಮಲಗುತ್ತಿದ್ದವು.
ನಾಯಿ ಜಾಡು ಹಿಡಿದು ಒಳಬಂದಿದ್ದ ಚಿರತೆ ಕೊನೆಗೆ ರಾಮಕೃಷ್ಣ ಅವರ ಪಕ್ಕದಲ್ಲೇ ಬಿದ್ದುಕೊಂಡಿದೆ. ಬೆಳಗಿನ ಜಾವ ರಾಮಕೃಷ್ಣ ಅವರು ಮೂತ್ರ ವಿಸರ್ಜನೆಗೆಂದು ಹೊರ ಬಂದಿದ್ದು, ವಾಪಸ್ ಬಿದ್ದುಕೊಂಡಿದ್ದಾರೆ. ಈ ವೇಳೆ ಪಕ್ಕದಲ್ಲೇ ಮಲಗಿದ್ದ ಚಿರತೆಯನ್ನು ತಮ್ಮ ಪ್ರೀತಿಪಾತ್ರ ನಾಯಿಯೆಂದೇ ಮೈಸವರಿದ್ದಾರೆ. ಈ ವೇಳೆ ಮೀಸೆಯಿಂದಾಗಿ ಅನುಮಾನ ಬಂದು ಪರಿಶೀಲಿಸಿದಾಗ ಚಿರತೆ ಎನ್ನುವುದು ಖಚಿತವಾಗಿ ತಕ್ಷಣ ಹೊರಗೋಡಿ ಬಂದು ಬಾಗಿಲು ಹಾಕಿದ್ದಾರೆ. ನಂತರ ಮಂಡಿಯ ಇನ್ನೊಂದು ಬಾಗಿಲಿಂದ ರಾಮಕೃಷ್ಣ ಅವರು ಹೊರಗೋಡಿ ಬಂದ ಜೀವ ಉಳಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.