ಮೋದಿ ಹೇಳಿದರೂ ಈ ಯೋಜನೆ ನಿಲ್ಲದು

By Suvarna Web DeskFirst Published Feb 28, 2017, 6:24 PM IST
Highlights

ಮೇಕೆದಾಟು ವಿಚಾರದಲ್ಲಿ ತಮಿಳುನಾಡು ವಿರೋಧಿಸುತ್ತಿದ್ದು, ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯಿಸುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೇಕೆದಾಟು ಯೋಜನೆ ಅನಿವಾರ್ಯ. ಇದರಲ್ಲಿ ಯಾರೇ ಮಧ್ಯ ಪ್ರವೇಶ ಮಾಡಿದರೂ ಯೋಜನೆ ಬಾಧಿತವಾಗುವುದಿಲ್ಲ ಎಂದರು.

ಬೆಂಗಳೂರು(ಫೆ.28): ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಮಧ್ಯಪ್ರವೇಶ ಮಾಡಿದರೂ ರಾಜ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಕಾನೂನು ಸಚಿವ ಜಯಚಂದ್ರ ಹೇಳಿದ್ದಾರೆ.

ಮೇಕೆದಾಟು ವಿಚಾರದಲ್ಲಿ ತಮಿಳುನಾಡು ವಿರೋಧಿಸುತ್ತಿದ್ದು, ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯಿಸುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೇಕೆದಾಟು ಯೋಜನೆ ಅನಿವಾರ್ಯ. ಇದರಲ್ಲಿ ಯಾರೇ ಮಧ್ಯ ಪ್ರವೇಶ ಮಾಡಿದರೂ ಯೋಜನೆ ಬಾಧಿತವಾಗುವುದಿಲ್ಲ ಎಂದರು.

ಕಾವೇರಿ ನ್ಯಾಯಾಕರಣ ಅಂತಿಮ ತೀರ್ಪಿನ ಪ್ರಕಾರ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರು ಬಳಿಸಿಕೊಳ್ಳಲು ಎಲ್ಲಾ ರೀತಿಯ ಹಕ್ಕಿದೆ. ಆದ್ದರಿಂದ ಸರ್ಕಾರ ಮೇಕೆದಾಟು ಯೋಜನೆ ರೂಪಿಸಿದೆ. ಇದರಿಂದ ಬರೀ ಕರ್ನಾಟಕ ಮಾತ್ರವಲ್ಲ. ತಮಿಳುನಾಡಿಗೂ ಅನುಕೂಲವಾಗಲಿದೆ. ತಮಿಳುನಾಡಿಗೆ ಹರಿಸಬೇಕಿರುವ 192 ಟಿಎಂಸಿ ನೀರು ಹಂಚಿಕೆಗೂ ಆಗಿರುವ ತೊಂದರೆ ತಪ್ಪಲಿದೆ ಎಂದು ಸಚಿವರು ಹೇಳಿದರು.

ಕಾವೇರಿಯಿಂದ ತಮಿಳುನಾಡಿಗೆ ಪ್ರತಿವರ್ಷ 192 ಟಿಎಂಸಿ ನೀರು ಹರಿಸಬೇಕಾಗಿದೆ. ಇದನ್ನು ಹರಿಸುವಾಗ ಹೆಚ್ಚುವರಿ ನೀರು ಹರಿದು ಸಮುದ್ರ ಸೇರುತ್ತಿದೆ. ಹೀಗಾಗಿಯೇ ಕಳೆದ ಅನೇಕ ವರ್ಷಗಳಿಂದ ಈತನಕ 300 ಟಿಎಂಸಿ ನೀರು ಹೆಚ್ಚುವರಿಯಾಗಿ ಹರಿದು ಸಮುದ್ರ ಸೇರಿದೆ. ಇದನ್ನು ತಪ್ಪಿಸಲು ಜಲಾಶಯ ನಿರ್ಮಾಣ ಅನಿವಾರ್ಯವಾಗಿದೆ. ಹಾಗೆಯೇ ಲಭ್ಯ ನೀರಿನ ಸದ್ಬಳಕೆಗೂ ಇದು ನೆರವಾಗಲಿದೆ ಎಂದು ವಿವರಿಸಿದರು.

ವೆಚ್ಚ ಭರಿಸಲು ಸಿಎಂಗೆ ಪತ್ರ:

ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಸಿದಂತೆ ಇತ್ತೀಚಿಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದಾಗ, ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಿದ್ದ ಕರ್ನಾಟಕ ರಾಜ್ಯದ ಕಾನೂನು ಹೋರಾಟ ವೆಚ್ಚ ಭರಿಸಬೇಕೆಂದು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಮಟ್ಟದಲ್ಲಿ ಆಗಿರುವ ವೆಚ್ಚವನ್ನು ಕ್ರೋಡೀಕರಿಸಲಾಗುತ್ತಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಲಾಗಿದ್ದು, ಅವರು ವೆಚ್ಚ ವಿವರ ಸಿದ್ಧಪಡಿಸುತ್ತಿದ್ದಾರೆ. ಆನಂತರದಲ್ಲಿ ತಮಿಳುನಾಡು ಮುಖ್ಯಕಾರ್ಯದರ್ಶಿ ಅವರಿಗೆ ಪತ್ರ ಬರೆದು ವೆಚ್ಚದ ಮೊತ್ತದ ಮೊತ್ತವನ್ನು ನೀಡುವಂತೆ ಕೇಳಲಾಗುವುದು ಎಂದು ಸಚಿವರು ತಿಳಿಸಿದರು.

(ಕನ್ನಡಪ್ರಭ ವಾರ್ತೆ)

click me!