ಬಿಜೆಪಿ ಮೈತ್ರಿ ವಿಷ ಕುಡಿದಂತೆ : ಮೆಹಬೂಬಾ ಮುಫ್ತಿ

By Web DeskFirst Published Jul 29, 2018, 7:59 AM IST
Highlights

ಇತ್ತೀಚೆಗಷ್ಟೇ ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿಷಕಂಠ ಹೇಳಿಕೆ ಬೆನ್ನಲ್ಲೇ ಇದೀಗ ಜಮ್ಮು ಕಾಶ್ಮೀರದ ನಿರ್ಗಮಿತ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರೂ ಕೂಡ ಇಂತಹದ್ದೇ ಹೇಳಿಕೆ ನೀಡಿದ್ದಾರೆ. 

ಶ್ರೀನಗರ: ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇತ್ತೀಚೆಗೆ ‘ವಿಷಕಂಠನಂತೆ ನಾನು ವಿಷ ನುಂಗಿ ಸರ್ಕಾರ ನಡೆಸುತ್ತಿದ್ದೇನೆ’ ಎಂದು ಹೇಳಿ ದೇಶಾದ್ಯಂತ ಸುದ್ದಿ ಮಾಡಿದ್ದರು. ಇದರ ಬೆನ್ನಲ್ಲೇ, ‘ವಿಷ’ದ ಹೇಳಿಕೆ ನೀಡುವ ಸರದಿ ಜಮ್ಮು-ಕಾಶ್ಮೀರದ ನಿರ್ಗಮಿತ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರದು. ‘ಬಿಜೆಪಿ ಜತೆಗೆ ನಾವು ಮಾಡಿಕೊಂಡಿದ್ದ ಮೈತ್ರಿ ಒಂದು ಲೋಟ ವಿಷ ಕುಡಿದಂತೆ ಇತ್ತು’ ಎಂದು ಕಳೆದ ತಿಂಗಳಷ್ಟೇ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿಕೊಂಡಿದ್ದಾರೆ.

1999 ರಲ್ಲಿ ಸ್ಥಾಪನೆಯಾದ ಪೀಪಲ್ಸ್ ಡೆಮೊಕ್ರಟಿಕ್ ಪಾರ್ಟಿ (ಪಿಡಿಪಿ)ಯ ಸಂಸ್ಥಾಪನಾ ದಿನಾಚರಣೆಯಲ್ಲಿ ಶನಿವಾರ ಮಾತನಾಡಿದ ಅವರು, ಬಿಜೆಪಿ ಜತೆ ಮೈತ್ರಿಗೆ ಆರಂಭದಿಂದಲೂ ನನ್ನ ವಿರೋಧವಿತ್ತು. ಈ ವಿಷಯವನ್ನು ನನ್ನ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಅವರಿಗೂ ತಿಳಿಸಿದ್ದೆ. ಆದರೆ ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು. ನಾವೇನು ಕಾಶ್ಮೀರ ದಲ್ಲಿ ಮೂಲಸೌಕರ್ಯ ನಿರ್ಮಾಣ ಮಾಡಲು ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಕಾಶ್ಮೀರಿಗಳು ಅನುಭವಿಸುತ್ತಿರುವ ಸಮಸ್ಯೆಗೆ ಮುಕ್ತಿ ಕೊಡಿಸಲು ದೋಸ್ತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದರು ಎಂದು ಸ್ಮರಿಸಿದರು. 

ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ ಹೊರತಾಗಿಯೂ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ನೇ ಪರಿಚ್ಛೇದಕ್ಕೆ ಬಿಜೆಪಿ ಕೈ ಹಾಕದಂತೆ ತಡೆಯುವಲ್ಲಿ ಸಫಲವಾಗಿದ್ದೇವೆ ಎಂದು ಹೇಳಿದರು. ಎರಡೂ ದೇಶಗಳನ್ನೂ ಹತ್ತಿರಕ್ಕೆ ತರಲು ಪಾಕಿಸ್ತಾನದ ಭಾವಿ ಪ್ರಧಾನಿ ಇಮ್ರಾನ್ ಖಾನ್ ಅವರು ಧನಾತ್ಮಕ ಸಂದೇಶ ರವಾನಿಸಿದ್ದಾರೆ. ಪ್ರಧಾನಿ ನರೇಂದ್ರ
ಮೋದಿ ಅವರ ಕೂಡ ಪೂರಕ ಸಂದೇಶಗಳನ್ನು ರವಾನಿಸಬೇಕು ಎಂದು ಮನವಿ ಮಾಡಿದರು. ಅಧಿಕಾರ ಕಳೆದುಕೊಂಡ ಬಳಿಕ ಮೆಹಬೂಬಾ ಅವರು ಪಾಲ್ಗೊಂಡ ಮೊದಲ ಸಾರ್ವಜನಿಕ ಸಭೆ ಇದಾಗಿತ್ತು.

click me!