ಪ್ರಧಾನಿಯಾದ ಡಾಕ್ಟರ್: ವಾರದಲ್ಲಿ 1 ದಿನ ರೋಗಿಗಳಿಗೇ ಮೀಸಲಿಟ್ಟವೈದ್ಯ ಪ್ರಧಾನಿ!

By Web DeskFirst Published May 10, 2019, 8:26 AM IST
Highlights

ಶನಿವಾರ ಬಂದರೆ ಭೂತಾನ್‌ ಪ್ರಧಾನಿ ಡಾಕ್ಟರ್‌!| ಸರ್ಕಾರಿ ಆಸ್ಪತ್ರೆಗೆ ಹೋಗಿ ರೋಗಿಗಳಿಗೆ ಶಸ್ತ್ರಚಿಕಿತ್ಸೆ| ವಾರದಲ್ಲಿ 1 ದಿನ ರೋಗಿಗಳಿಗೇ ಮೀಸಲಿಟ್ಟವೈದ್ಯ ಪ್ರಧಾನಿ

ಥಿಂಪು[ಮೇ.10]: ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ ಮೇಲೆ ಮೂಲ ವೃತ್ತಿಯನ್ನು ಮರೆತುಬಿಡುವವರೇ ಅಧಿಕ. ಆದರೆ ಭೂತಾನ್‌ನಲ್ಲಿ ವಾರದ 5 ದಿನ ದೇಶವನ್ನು ಮುನ್ನಡೆಸುವ ಪ್ರಧಾನಮಂತ್ರಿಗಳು, ಶನಿವಾರ ಬರುತ್ತಿದ್ದಂತೆ ತಮ್ಮ ಮೂಲವೃತ್ತಿಯಾದ ವೈದ್ಯಕೀಯ ಸೇವೆ ಮಾಡಲು ಸರ್ಕಾರಿ ಆಸ್ಪತ್ರೆಗೆ ದೌಡಾಯಿಸುತ್ತಾರೆ. ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಪ್ರಾಣ ಉಳಿಸುತ್ತಾರೆ. ಮತ್ತೆ ಸೋಮವಾರದಿಂದ ಯಥಾಪ್ರಕಾರ, ದೇಶ ಆಳುವ ಕೆಲಸ!

ಪ್ರಾಕೃತಿಕ ಸಂಪತ್ತಿನಿಂದ ಕೂಡಿರುವ, ದೇಶದ ಸಿರಿವಂತಿಕೆಯನ್ನು ಜನರ ಸಂತೋಷದಿಂದಲೇ ಅಳೆಯುವ ವಿಶಿಷ್ಟಹಾಗೂ ಪುಟ್ಟದೇಶ ಭೂತಾನ್‌ ಇಂತಹ ಅಪರೂಪದ ಬೆಳವಣಿಗೆಯನ್ನು ಕಾಣುತ್ತಿದೆ. ವೃತ್ತಿಯಲ್ಲಿ ವೈದ್ಯರಾಗಿರುವ 50 ವರ್ಷದ ಲೋತೆ ಶೇರಿಂಗ್‌ ಅವರು 2018ರ ನ.7ರಂದು ಪ್ರಧಾನಿಯಾದವರು. ದೇಶದ ಉನ್ನತ ಹುದ್ದೆ ಸಿಕ್ಕಿತೆಂದು ಅವರು ತಮ್ಮ ವೃತ್ತಿಯನ್ನು ಇವತ್ತಿಗೂ ಬಿಟ್ಟಿಲ್ಲ.

ಶನಿವಾರ ಬಂತೆಂದರೆ ರಾಜಧಾನಿ ಥಿಂಪುವಿನಲ್ಲಿರುವ ಜಿಗ್ಮೆ ಡೋರ್ಜಿ ವಾಂಗ್ಚುಕ್‌ ನ್ಯಾಷನಲ್‌ ರೆಫರಲ್‌ ಆಸ್ಪತ್ರೆಯಲ್ಲಿ ಪ್ರತ್ಯಕ್ಷರಾಗುತ್ತಾರೆ. ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಹೋಗುತ್ತಾರೆ. ಲ್ಯಾಬ್‌ ಕೋಟ್‌, ವೈದ್ಯರ ಶೂ ಧರಿಸಿ, ಆಸ್ಪತ್ರೆಯ ಜನದಟ್ಟಣೆಯ ಕಾರಿಡಾರ್‌ನಲ್ಲಿ ಶೇರಿಂಗ್‌ ಬರುತ್ತಿದ್ದರೆ, ನರ್ಸ್‌ಗಳಾಗಲಿ ಅಥವಾ ಆಸ್ಪತ್ರೆ ಸಿಬ್ಬಂದಿಯಾಗಲಿ ತಲೆಕೆಡಿಸಿಕೊಳ್ಳುವುದಿಲ್ಲ. ತಮ್ಮ ಪಾಡಿಗೆ ತಮ್ಮ ಕೆಲಸ ಮಾಡುತ್ತಿರುತ್ತಾರೆ. ಸರ್ಜರಿ ಮುಗಿದ ಬಳಿಕ ಪ್ರಧಾನಿ ತೆರಳುತ್ತಾರೆ.

ವೀಕೆಂಡ್‌ ಅಭ್ಯಾಸ:

ಏಕೆ ಹೀಗೆ ಎಂದು ಕೇಳಿದರೆ, ‘ಒತ್ತಡ ಮುಕ್ತಗೊಳ್ಳುವ ಬಗೆ ಅದು’ ಎನ್ನುತ್ತಾರೆ ಶೇರಿಂಗ್‌. ‘ವೀಕೆಂಡ್‌ಗಳಲ್ಲಿ ಜನರು ಗಾಲ್‌್ಫ ಆಡುತ್ತಾರೆ. ಆರ್ಚರಿ ಮೊರೆ ಹೋಗುತ್ತಾರೆ. ಆದರೆ ನನಗೆ ಸರ್ಜರಿ ಮಾಡುವುದೇ ಇಷ್ಟ. ನನ್ನ ವೀಕೆಂಡ್‌ ಅನ್ನು ಈ ರೀತಿ ಕಳೆಯುತ್ತಿದ್ದೇನೆ’ ಎಂದು ಹೇಳುತ್ತಾರೆ. ಕಳೆದ ಶನಿವಾರ ಶೇರಿಂಗ್‌ ಅವರು ವ್ಯಕ್ತಿಯೊಬ್ಬರುಗೆ ಮೂತ್ರಕೋಶದ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅಂದಹಾಗೆ, ಶೇರಿಂಗ್‌ ಅವರು ರಾಜಧಾನಿಯಲ್ಲಿ ತಾವೇಕೆ ಕಾರು ಚಾಲನೆ ಮಾಡಿಕೊಂಡು ಓಡಾಡುತ್ತಾರೆ. ಬೆಂಗಾವಲು ವಾಹನ ಬಳಸುವುದಿಲ್ಲ.

ರಾಜಪ್ರಭುತ್ವದಲ್ಲಿದ್ದ ಭೂತಾನ್‌ನಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿದ್ದು 2008ರಲ್ಲಿ. ಬಾಂಗ್ಲಾದೇಶ, ಜಪಾನ್‌, ಆಸ್ಪ್ರೇಲಿಯಾ ಹಾಗೂ ಅಮೆರಿಕದಲ್ಲಿ ವೈದ್ಯ ತರಬೇತಿ ಪಡೆದಿರುವ ಶೇರಿಂಗ್‌ ಅವರು 2013ರಲ್ಲಿ ರಾಜಕೀಯ ಪ್ರವೇಶಿಸಿದರು. ಅವರ ಪಕ್ಷ ಅಧಿಕಾರಕ್ಕೇರಲಿಲ್ಲ. ಪರಾಭವಗೊಂಡಿದ್ದ ಶೇರಿಂಗ್‌ ಅವರನ್ನು ರಾಜ ಜಿಗ್ಮೆ ಕೇಸರ್‌ ನಾಮ್‌ಗ್ಯೇಲ್‌ ವಾಂಗ್ಚುಕ್‌ ಅವರು ಕರೆದು, ವೈದ್ಯರ ತಂಡವೊಂದನ್ನು ಮುನ್ನಡೆಸುವಂತೆ ಸೂಚಿಸಿದರು. ದೂರದೂರದ ಹಳ್ಳಿಗಳಿಗೆ ತೆರಳಿ ಜನರಿಗೆ ಉಚಿತ ಚಿಕಿತ್ಸೆ ನೀಡುವ ಜವಾಬ್ದಾರಿ ಅದಾಗಿತ್ತು.

ಪ್ರಧಾನಿಯಾದ ಬಳಿಕ ಶನಿವಾರ ರೋಗಿಗಳಿಗೆ ಚಿಕಿತ್ಸೆ ನೀಡುವ ಶೇರಿಂಗ್‌ ಅವರು, ಗುರುವಾರ ಬೆಳಗ್ಗೆ ಟ್ರೇನಿಗಳು ಹಾಗೂ ವೈದ್ಯರಿಗೆ ಉಚಿತ ವೈದ್ಯಕೀಯ ಸಲಹೆ ನೀಡುತ್ತಾರೆ. ಭಾನುವಾರವನ್ನು ಕುಟುಂಬದ ಜತೆ ಕಳೆಯುತ್ತಾರೆ. ಅವರ ಪ್ರಧಾನಮಂತ್ರಿ ಕಚೇರಿಯಲ್ಲಿರುವ ಅವರ ಕುರ್ಚಿಯಲ್ಲಿ ವೈದ್ಯರ ಕೋಟ್‌ ಯಾವಾಗಲೂ ಇರುತ್ತದೆ.

ಕಳೆದ ಶನಿವಾರ ಶೇರಿಂಗ್‌ ಅವರ ಕೈಯಲ್ಲಿ 5 ತಾಸು ಮೂತ್ರಕೋಶ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋಗಿಯ ಹೆಸರು ಬಮಥಾಪ್‌ (40). ‘ದೇಶದ ಅತ್ಯುತ್ತಮ ವೈದ್ಯ ಎನಿಸಿಕೊಂಡಿರುವ ಪ್ರಧಾನಮಂತ್ರಿಗಳು ನನಗೆ ಶಸ್ತ್ರಚಿಕಿತ್ಸೆ ಮಾಡಿದರು. ನೆಮ್ಮದಿಯಾಗಿದೆ’ ಎಂದು ಅವರು ಹೇಳುತ್ತಾರೆ.

click me!