ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಮುಖಂಡ ಎಂ.ಬಿ ಪಾಟೀಲ್ ಸವಾಲು ಹಾಕಿದ್ದಾರೆ. ಯಾರದ್ದೋ ತಪ್ಪನ್ನು ಯಾರ ಮೇಲೋ ಹೊರಿಸುವ ಅವರು ಕ್ಷಮೆ ಯಾಚಿಸಿಬೇಕು ಎಂದು ಹೇಳಿದ್ದಾರೆ.
ಬೆಂಗಳೂರು : ಕಾಂಗ್ರೆಸ್ಸಿಗೆ ಒಕ್ಕಲಿಗರು ಮತ ಹಾಕದಿದ್ದಕ್ಕೆ ಜವಾಬ್ದಾರಿ ಹೊರುತ್ತಾರಾ ಎಂದು ಸುವರ್ಣ ನ್ಯೂಸ್ ಮೂಲಕ ಡಿಕೆಶಿಗೆ ಎಂ.ಬಿ.ಪಾಟೀಲ್ ಸವಾಲು ಹಾಕಿದ್ದಾರೆ.
ಮಂಡ್ಯ, ಹಾಸನ, ರಾಮನಗರದಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದ್ದು, ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗಲು ಯಾರು ಕಾರಣ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಅಲ್ಲಿ ಹಿನ್ನಡೆಯಾಗಿದ್ದಕ್ಕೆ ಡಿಕೆಶಿ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.
ಸುವರ್ಣ ನ್ಯೂಸ್ ಮೂಲಕ ಡಿಕೆ ಶಿವಕುಮಾರ್ ಗೆ ಸವಾಲು ಹಾಕಿದ್ದು, ಇದಕ್ಕೆ ಅವರು ಪಶ್ಚತ್ತಾಪವನ್ನೂ ಪಡಲಿ. ಕರಾವಳಿಯಲ್ಲಿ ಕಾಂಗ್ರೆಸ್ ಗೆ ಒಂದು ಸ್ಥಾನ ಬಂತು. ಕರಾವಳಿಯಲ್ಲಿ ಲಿಂಗಾಯತರಿದ್ದಾರಾ ಎಂದು ಎಂ.ಬಿ.ಪಾಟೀಲ್ ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ ಒಕ್ಕಲಿಗರ ಮತಗಳಿಗೆ ಡಿ.ಕೆ.ಶಿವಕುಮಾರ್ ಜವಾಬ್ದಾರಿ ತೆಗೆದುಕೊಳ್ಳುತ್ತಾರಾ ಎಂದು ಕೇಳಿರುವ ಅವರು, ಯಾರದ್ದೋ ತಪ್ಪನ್ನು ಯಾರ ಮೇಲೆ ಹೊರಿಸುವ ಡಿಕೆಶಿ ನಡೆ ಸರಿ ಇಲ್ಲ. ಸಿದ್ದರಾಮಯ್ಯರನ್ನು, ನನ್ನನ್ನು, ಲಿಂಗಾಯತರನ್ನು ದೂರುವುದು ತಪ್ಪು. ಬೇಜವಾಬ್ದಾರಿತನದ ಹೇಳಿಕೆ ನೀಡಿರುವ ಡಿಕೆಶಿ ನಡೆ ತಪ್ಪು ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.
ಪ್ರತ್ಯೇಕ ಧರ್ಮದ ಬಗ್ಗೆ ನೀಡಿರುವ ಹೇಳಿಕೆಗೆ ಡಿ ಕೆ ಶಿವಕುಮಾರ್ ಬೆಲೆ ತೆರಬೇಕಾಗುತ್ತದೆ. ಡಿ ಕೆ ಶಿವಕುಮಾರ್ ಅವ್ರು ಕೆಪಿಸಿಸಿ ಅಧ್ಯಕ್ಷರಲ್ಲ, ಎಐಸಿಸಿ ಅಧ್ಯಕ್ಷರು ಕೂಡ ಹೀಗೆ ಹೇಳಿ ಅಂತ ಹೇಳಿಲ್ಲ. ಡಿ ಕೆ ಶಿವಕುಮಾರ್ ಅವ್ರು ನೀಡಿರುವ ಹೇಳಿಕೆ ಕುರಿತು ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತದೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮೊದಲಿಂದಲೂ ನಡೆದುಕೊಂಡು ಬಂದಿದೆ. ಈಗ ಡಿ ಕೆ ಶಿವಕುಮಾರ್ ಹೇಳಿಕೆ ಬಾಲೀಷತನದಿಂದ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.