
ಬೆಂಗಳೂರು(ಮೇ.22): ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ಅನುಮಾನಾಸ್ಪದ ಅನ್ನುವ ಹಂತದಲ್ಲಿಲ್ಲ. ಬದಲಾಗಿ ಅನುರಾಗ್ ಕೊಲೆ ನಡೆದಿರಬಹುದು ಅನ್ನೋ ಅನುಮಾನ ದಿನದಿಂದ ದಿನಕ್ಕೆ ದಟ್ಟವಾಗಿತ್ತಿವೆ. ಪ್ರಾಮಾಣಿಕ ಅಧಿಕಾರಿ ಅನುರಾಗ್ ತಿವಾರಿಯವರಿಗೆ ವಿಷ ಪ್ರಾಷನ ಮಾಡಲಾಗಿತ್ತು ಎನ್ನುವ ವರದಿ ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಇಂದು ತಿವಾರಿ ಸಹೋದರ ಮಯಾಂಕ್ ತಿವಾರಿ ಯುಸಿ ಸಿಎಂ ಭೇಟಿ ಮಾಡಲಿದ್ದಾರೆ.
ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ಸಾಕಷ್ಟು ಅನುಮಾನವನ್ನು ಸೃಷ್ಟಿಸಿದೆ. ರಾಜ್ಯ ಆಹಾರ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ತಿವಾರಿ ಅವರನ್ನು ಬಲಿ ಪಡೆದಿದೆ ಎಂಬ ಆರೋಪವೂ ಇದೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಿಜ ಬಣ್ಣವನ್ನು ಅನುರಾಗ್ ತಿವಾರಿ ಬಯಲು ಮಾಡಲು ಮುಂದಾಗಿದ್ದೇ ಅವರ ಸಾವಿಗೆ ಕಾರಣ ಅನ್ನೋದು ಸಹೋದರ ಮಯಾಂಕ್ ತಿವಾರಿ ಆರೋಪ.
ಯೋಗಿ ಆದಿತ್ಯನಾಥ್ ಗೆ ಮಯಾಂಕ್ ತಿವಾರಿ ದೂರು
ಅನುರಾಗ್ ತಿವಾರಿ ಸಾವು ಕುಟುಂಬಸ್ಥರಲ್ಲಿ ಸಾಕಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ತಿವಾರಿ ಅವರದ್ದು ಸಹಜ ಸಾವಲ್ಲ ಅದು ಕೊನೆ ಅನ್ನೋದು ಸಹೋದರ ಮಯಾಂಕ್ ಆರೋಪ. ಈ ಹಿನ್ನೆಲೆಯಲ್ಲಿ ಮಯಾಂಕ್ ತಿವಾರಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರನ್ನು ಭೇಟಿ ಮಾಡಲಿದ್ದಾರೆ. ಇದಕ್ಕೂ ಮೊದಲು ಹಜರತ್ ಜಂಗ್ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ.
ಮತ್ತೊಂದೆಡೆ ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಎಸ್ಐಟಿ ತಂಡಕ್ಕೆ ಬೆಚ್ಚಿ ಬೀಳಿಸುವ ಮಾಹಿತಿ ಸಿಕ್ಕಿದೆ. ಅನುರಾಗ್ ತಿವಾರಿಯನ್ನ ವಿಷ ಪ್ರಾಷನ ಮಾಡಿಸಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಬೆನ್ನತ್ತಿರುವ ಎಸ್ಐಟಿ ಅಧಿಕಾರಿಗಳ ತಂಡ ಸಾವಿನ ರಹಸ್ಯ ಬೇಧಿಸಲು ಮುಂದಾಗಿದೆ. ಈ ಸಂಬಂಧ ಲಖನೌ ಪೊಲೀಸ್ ವರಿಷ್ಠಾಧಿಕಾರಿಗೆ ವರದಿ ಸಲ್ಲಿಸಲಿದ್ದಾರೆ.
ಸಿಸಿಟಿವಿಯಲ್ಲಿ ಸಾವಿಗೂ ಮೊದಲ ದೃಶ್ಯ..!
ಮೇ 17ನೇ ತಾರೀಕು ರಾತ್ರಿ ಒಂಭತ್ತು ಗಂಟೆಗೆ ಅನುರಾಗ್ ತಿವಾರಿ ಲಖನೌ ರೆಸ್ಟೋರೆಂಟ್ವೊಂದರಲ್ಲಿ ಊಟ ಮುಗಿಸಿ ಗೆಸ್ಟ್ ಹೌಸ್ಗೆ ತೆರಳಿದ್ದರು. ತಿವಾರಿ ರೆಸ್ಟೋರೆಂಟ್ಗೆ ಊಟಕ್ಕೆಂದು ಬಂದಿದ್ದ ವೇಳೆ ಸಿಸಿಟಿವಿಯಲ್ಲಿ ಸೆರೆಯಾಗಿರುವ ಎಕ್ಸ್ಕ್ಲೂಸೀವ್ ದೃಶ್ಯಗಳು ಸುವರ್ಣ ನ್ಯೂಸ್ಗೆ ಲಭ್ಯವಾಗಿವೆ.
ಅನುರಾಗ್ ತಿವಾರಿಗೆ ವಿಷ ಪ್ರಾಷನ..!
ಅನುರಾಗ್ ತಿವಾರಿ ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿ ನೀಡಿದ್ದ ಲಕ್ನೌ ಆಸ್ಪತ್ರೆ ವೈದ್ಯರು ಮೊದಲು ಉಸಿರಾಟದ ತೊಂದರೆಯಿಂದ ಮೃತಪಟ್ಟಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದ್ರೆ ಈಗ ಸುವರ್ಣ ನ್ಯೂಸ್ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅವರಿಗೆ ವಿಷ ಪ್ರಾಷನವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಒಂದು ವೇಳೆ ವಿಷದ ಪ್ರಮಾಣ ಇದ್ದಿದ್ದೇ ಆದರೆ ಅದು ಎಂತಹ ವಿಷ, ಯಾವಾಗ ವಿಷ ಪ್ರಾಷಣ ಮಾಡಲಾಗಿತ್ತು ಎಂಬ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯದ ಅಂತಿಮ ವರದಿಯಲ್ಲಿ ಸ್ಪಷ್ಟವಾಗುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.